Advertisement

ಹಿನ್ನೀರು ಧಾಮದ ದೇವಿ ಭೋಜನ

08:55 PM Jan 17, 2020 | Lakshmi GovindaRaj |

ಚೌಡೇಶ್ವರಿಯ ಅಪಾರ ಮಹಿಮೆಯಿಂದಲೇ ಪ್ರಸಿದ್ಧವಾದ ಕ್ಷೇತ್ರ ಸಿಗಂದೂರು. ನಾಲ್ಕು ವರ್ಷಗಳ ಹಿಂದೆ ಇಲ್ಲಿ ಅನ್ನಸಂತರ್ಪಣೆ ಆರಂಭವಾಗಿದೆ. ಈಗ ಎಲ್ಲ ರೀತಿಯಿಂದಲೂ ಭಕ್ತರು ಸಂತುಷ್ಟರು! ಸಾಗರ ತಾಲೂಕಿನ ಸಿಗಂದೂರಿನ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುವುದೇ ಒಂದು ತ್ರಾಸದ ಕೆಲಸ.

Advertisement

ನಾಡಿನ ವಿದ್ಯುತ್‌ಗಾಗಿ ಶರಾವತಿಗೆ ಕಟ್ಟಿದ ಲಿಂಗನಮಕ್ಕಿ ಅಣೆಕಟ್ಟೆಯಿಂದಾಗಿ ದ್ವೀಪಸದೃಶ ಸ್ಥಳವಾಗಿ ಮಾರ್ಪಟ್ಟ ತುಮರಿ, ಕಳಸವಳ್ಳಿ ಭಾಗದ ಸಿಗಂದೂರಿನ ದೇವಸ್ಥಾನಕ್ಕೆ ಹೋಗಬೇಕು ಎಂದರೆ ಭಕ್ತರು ಸಾಗರದಿಂದ ಅಂಬಾರಗೋಡ್ಲಿಗೆ ತೆರಳಿ, ಅಲ್ಲಿಂದ ನೀರಿನಲ್ಲಿ ಚಲಿಸುವ ಲಾಂಚ್‌ ಅನ್ನು ಏರಬೇಕು.

ಜನದಟ್ಟಣೆ, ವಾಹನಗಳ ಸರದಿ ಕಾರಣ ದೇವಾಲಯದಲ್ಲಿ ದೇವರ ದರ್ಶನ ಮಾಡುವಷ್ಟರಲ್ಲಿ ಹಸಿವೆಯ ದರ್ಶನವೂ ಆಗುತ್ತದೆ. ಈಗ ನಾಲ್ಕು ವರ್ಷಗಳ ಹಿಂದಿನಿಂದ ಸಿಗಂದೂರು ಕ್ಷೇತ್ರದಲ್ಲೂ ಊಟದ ವ್ಯವಸ್ಥೆ ಮಾಡಲಾಗಿದೆ. ಈಗ ಎಲ್ಲ ರೀತಿಯಿಂದಲೂ ಭಕ್ತರು ಸಂತುಷ್ಟರು!

ನಿತ್ಯ ಅನ್ನಸಂತರ್ಪಣೆ: ಪ್ರತಿನಿತ್ಯ ಇಲ್ಲಿ ಕನಿಷ್ಠ 2 ಸಾವಿರ ಭಕ್ತರು ಶ್ರೀದೇವಿಯ ಅನ್ನಪ್ರಸಾದ ಸವಿಯುತ್ತಾರೆ. ಮಲೆನಾಡು ಶೈಲಿಯ ಭೋಜನಕ್ಕೆ ಸದ್ಭಕ್ತರು ಸಾಕ್ಷಿಯಾಗುತ್ತಾರೆ. ಭಾನುವಾರ, ಸರ್ಕಾರಿ ರಜೆ ದಿನ, ಅಮಾವಾಸ್ಯೆ, ಆಷಾಢ ಮಾಸ, ನವೆಂಬರ್‌- ಡಿಸೆಂಬರ್‌ನಲ್ಲಿ ಭಕ್ತರು ಜಾಸ್ತಿ ಇರುತ್ತಾರೆ. 3 ವರ್ಷಗಳ ಹಿಂದೆ ಎಳ್ಳಮವಾಸ್ಯೆಯ ದಿನ 12 ಸಾವಿರ ಭಕ್ತರು ಊಟ ಮಾಡಿರುವುದು ಇಲ್ಲಿನ ದಾಖಲೆಯಾಗಿದೆ.

ಭಕ್ಷ್ಯ ಸಮಾಚಾರ
– ಅನ್ನ, ಸಾಂಬಾರ್‌, ಉಪ್ಪಿನಕಾಯಿ, ಪಾಯಸ, ಮೊಸರನ್ನ ಇರುತ್ತದೆ.
– ಹೊಟ್ಟೆ ತುಂಬಾ ಊಟ ನೀಡಲಾಗುತ್ತದೆ.
– ಭಕ್ತಾದಿಗಳು ಹರಕೆಯ ರೂಪದಲ್ಲಿ ದಾನವಾಗಿ ನೀಡಿದ ತರಕಾರಿಗಳ ಬಳಕೆ.
– ವರ್ಷದ 365 ದಿನ ಮಧ್ಯಾಹ್ನ, ರಾತ್ರಿ ಊಟ.
– ಬೆಳಗಿನ ಅವಧಿಯ ಉಪಾಹಾರ ದೇವಾಲಯದ ನೂರಾರು ಜನ ಕೆಲಸಗಾರರಿಗೆ, ಸಿಬ್ಬಂದಿಗೆ ಮಾತ್ರ.

Advertisement

ವೇಳಾಪಟ್ಟಿ
ಮಧ್ಯಾಹ್ನ: 12ರಿಂದ 3
ರಾತ್ರಿ: 7.30- 9

ಬಫೆ ರುಚಿ: ಇಲ್ಲಿ ಪಂಕ್ತಿ ಭೋಜನ ಇರುವುದಿಲ್ಲ. ಊಟದ ಹಾಲ್‌ ತುಂಬಾ ವಿಶಾಲವಾಗಿದ್ದು, ಇಷ್ಟಬಂದಲ್ಲಿ ಕುಳಿತು ಊಟ ಸವಿಯಬಹುದು. ಏಕಕಾಲದಲ್ಲಿ 2 ಸಾವಿರ ಭಕ್ತರು, ಭೋಜನಕ್ಕೆ ಸೇರಬಹುದು.

ತಟ್ಟೆಯೂಟ: ಊಟಕ್ಕೆ ಪ್ಲೇಟ್‌ ವ್ಯವಸ್ಥೆ ಇದೆ. ಭಕ್ತರು ಒಮ್ಮೆ ತೊಳೆದಿರುವ ತಟ್ಟೆಯನ್ನು ಯಂತ್ರಕ್ಕೆ ಹಾಕಿ ಮರುಶುಚಿ ಮಾಡಿ, ಬಳಸುವ ಸಂಪ್ರದಾಯ ಇಲ್ಲಿದೆ.

ಸಂಖ್ಯಾಸೋಜಿಗ
1- ಕ್ವಿಂಟಲ್‌ ಅಕ್ಕಿಯಿಂದ 800 ಮಂದಿಗೆ ಊಟ
2,000- ಮಂದಿಗೆ ನಿತ್ಯ ಊಟ
4- ಬಾಣಸಿಗರಿಂದ ಅಡುಗೆ ತಯಾರಿ
16- ಸಹಾಯಕ ಸಿಬ್ಬಂದಿ
3- ಸ್ಟೀಮರ್‌ಗಳ ಬಳಕೆ
20- ನಿಮಿಷದಲ್ಲಿ ಅನ್ನ ಸಿದ್ಧ
7,50,000-ಕ್ಕೂ ಹೆಚ್ಚು ಭಕ್ತರು ವಾರ್ಷಿಕವಾಗಿ ಭೋಜನಕ್ಕೆ ಸಾಕ್ಷಿ

* ಮಾವೆಂಸ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next