ಮುಂಬಯಿ: ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಗಳಿಗೆ (ಒಬಿಸಿ) ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಮಹಾರಾಷ್ಟ್ರ ಸಚಿವಾಲಯದ ಮುಂದೆ ಪ್ರತಿಭಟನೆ ನಡೆಸಲು ಬಿಜೆಪಿ ಘಟಕದ ಕಚೇರಿ ಸಮೀಪ ನೆರೆದಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬಯಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಒಲಿಂಪಿಕ್ ಗೆ ಆಯ್ಕೆಯಾಗುವ ಕ್ರೀಡಾಪಟುಗಳಿಗೆ 10 ಲಕ್ಷ ಪ್ರೋತ್ಸಾಹ ಧನ : ಡಾ. ನಾರಾಯಣಗೌಡ
ಪ್ರತಿಭಟನಾಕಾರರು ಚಕ್ಕಾಜಾಮ್ ಮಾಡಲು ನಿರ್ಧರಿಸಿದ್ದರು, ಆದರೆ ಪ್ರತಿಭಟನಾಕಾರರು ಸೆಕ್ರೆಟರಿಯೇಟ್ ನತ್ತ ಮೆರವಣಿಗೆ ಆರಂಭಿಸಿದ ಕೂಡಲೇ ಮುಂಬಯಿ ಪೊಲೀಸರು ಮಹಾರಾಷ್ಟ್ರ ಮಾಜಿ ಸಚಿವ ಗಿರೀಶ್ ಮಹಾಜನ್, ಮುಂಬಯಿ ಬಿಜೆಪಿ ಅಧ್ಯಕ್ಷ ಮಂಗಲ್ ಪ್ರಭಾತ್ ಲೋಧ್ ಮತ್ತು ಎಂಎಲ್ಸಿ ರಾಹುಲ್ ನರ್ವೆಕರ್ ಸೇರಿದಂತೆ ಹಲವಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.
ವಶಕ್ಕೆ ಪಡೆದ ಪ್ರತಿಭಟನಾಕಾರರನ್ನು ಮರೀನ್ ಲೈನ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಕೀಯ ಮೀಸಲಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಾವು ಇಂದು 1000 ಸಾವಿರ ಸ್ಥಳಗಳಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಬಿಜೆಪಿ ತಿಳಿಸಿದೆ.
ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಶೇ.27ರಷ್ಟು ರಾಜಕೀಯ ಮೀಸಲಾತಿಯನ್ನು ಮರು ನಿಗದಿಗೊಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಶಾಸಕ ಕಾಳಿದಾಸ್ ಕೋಲಂಬ್ಕರ್ ಸಾಯಿ ತಿಳಿಸಿದ್ದಾರೆ.