ದಾವಣಗೆರೆ: ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕರಾದ ರವೀಂದ್ರನಾಥ್, ರೇಣುಕಾಚಾರ್ಯ ಇತರರು ನನ್ನ ಮೇಲೆ ವಿಶ್ವಾಸವಿಟ್ಟು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜವಾಬ್ದಾರಿ ನೀಡಿದ್ದರು. ಏಳು ತಿಂಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿರುವ ಸಂತೋಷ ಮತ್ತು ತೃಪ್ತಿ ಇದೆ ಎಂದು ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ದೇವರಮನೆ ಶಿವಕುಮಾರ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಒಳ್ಳೆಯ ಕೆಲಸ ಮಾಡಿದ ಸಂತೋಷ, ತೃಪ್ತಿ ಇದೆ. ಅವಕಾಶ ಮತ್ತು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಸದಾ ಆಭಾರಿ ಎಂದರು.
ಕಳೆದ 40 ವರ್ಷದಿಂದ ಇರುವ ದೇವರಾಜ ಅರಸು ಬಡಾವಣೆ, ಡಿಸಿಎಂ ಟೌನ್‌ಶಿಪ್‌ಗೆ ನಾಮಫಲಕ, ಕಮಾನು ಇರಲಿಲ್ಲ. ನನ್ನ ಕಾಲಾವಧಿಯಲ್ಲಿ ಮಾಡಲಾಗಿದೆ. ರಿಂಗ್ ರಸ್ತೆ, ಹೊಂಡದ ವೃತ್ತ, ಶಿವಾಜಿ ವೃತ್ತದಲ್ಲಿನ ಶಿವಾಜಿ ಪ್ರತಿಮೆ ಕೆಲಸ ಪೂರ್ಣ, ಡಿಸಿಎಂ ಟೌನ್‌ಶಿಪ್ ಅನೇಕ ಅಭಿವೃದ್ಧಿ ಕೆಲಸ ಮಾಡಲಾಗಿದೆ. ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆದಾಯ ತರುವ ಉದ್ದೇಶದಿಂದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿ ಬಳಿ 4 ಕೋಟಿ ರೂ. ವೆಚ್ಚದ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ.
ಮುಂದಿನ ದಿನಗಳಲ್ಲಿ ಅನುಮೋದನೆ ಸಿಗಲಿದೆ. ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ 2 ಕೋಟಿ ರೂ.ವೆಚ್ಚದಲ್ಲಿ ಇ-ಪೇಪರ್ ಆಡಳಿತಕ್ಕೆ ಟೆಂಡರ್ ಕರೆಯಲಾಗಿದೆ. ಜಿಲ್ಲಾಧಿಕಾರಿ ಅನುಮೋದನೆ ದೊರೆತ ಕೂಡಲೇ ಕೆಲಸ ಪ್ರಾರಂಭವಾಗಲಿದೆ ಎಂದು ಹೇಳಿದರು.
ದೊಡ್ಡಬಾತಿಕೆರೆಯಲ್ಲಿ ವಂಡರ್ ಲಾ ಮಾದರಿಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ 4.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ಧವಾಗಲಿದೆ. ಕೆರೆ ಅಭಿವೃದ್ಧಿ ಸಮಯದಲ್ಲಿ ಒತ್ತುವರಿ ತೆರೆವುಗೊಳಿಸಲಾಗುವುದು. ಕುಂದುವಾಡದಲ್ಲಿ 53 ಎಕರೆ ಜಮೀನು ಖರೀದಿಸಲು ದರ ನಿಗದಿಪಡಿಸಲಾಗಿದೆ. ಕಾನೂನಾತ್ಮಕ ಮಂಜೂರಾತಿ ದೊರೆತಿದೆ. ಅತಿ ಶೀಘ್ರವೇ ಆರ್‌ಟಿಜಿಎಸ್ ಮೂಲಕ ಜಮೀನು ನೀಡಿದವರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು. ಆದಷ್ಟು ಬೇಗ ಸಾರ್ವಜನಿಕರಿಗೆ ನಿವೇಶನ ವಿತರಿಸುವ ಕೆಲಸ ಸಹ ಮಾಡಲಾಗುವುದು ಎಂದರು.
ಕಳೆದ 10 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಸಿಡಿಪಿ ಯೋಜನೆಯನ್ನು ತ್ವರಿತವಾಗಿ ಚಾಲನೆ ನೀಡಲಾಗುತ್ತಿದೆ. 2041ರಲ್ಲಿನ ಜನಸಂಖ್ಯೆ, ವಾಹನಗಳ ಸಂಖ್ಯೆಗೆ ಅನುಗುಣವಾಗಿ ಅದ್ಭುತ ಯೋಜನೆ ಕಾರ್ಯಗತವಾಗಲಿದೆ. ಹೊನ್ನೂರು, ಬೆಳವನೂರು, ಬನ್ನಿಕೋಡು ಗ್ರಾಮಗಳು ಸಿಡಿಪಿ ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ. ವಿವಿಧ ಸಮಾಜಗಳಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ 16 ನಾಗರಿಕ ಸೌಲಭ್ಯ ನಿವೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ದಾವಣಗೆರೆ ಹಾಗೂ ಹರಿಹರ ನಗರ ಮುಂಚೂಣಿಯಲ್ಲಿ ಬೆಳೆಯುತ್ತಿರುವ ನಗರಗಳಾಗಿವೆ. ಅದಕ್ಕಾಗಿ ಸುಮಾರು 120 ಕೋಟಿ ರೂ. ವೆಚ್ಚದಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಬಳಿ ಮಾಡಿದ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ದೂಡಾ ಸದಸ್ಯರಾದ ನಿಟುವಳ್ಳಿ ಲಕ್ಷ್ಮಣ್, ಬಾತಿ ಚಂದ್ರಶೇಖರ್, ಮಾಲತೇಶ್ ಘಾಟ್ಗೆ, ಗೌರಮ್ಮ ವಿ.ಪಾಟೀಲ್, ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ, ಜಯಪ್ರಕಾಶ್ ಮಾಗಿ, ಅಭಿಷೇಕ್ ಸುದ್ದಿಗೋಷ್ಠಿಯಲ್ಲಿದ್ದರು.