ಸಾಗರ: ದೀಪಾವಳಿ ಸಮೀಪಿಸುತ್ತಿರುವುದರಿಂದ ನಗರ ವ್ಯಾಪ್ತಿಯಲ್ಲಿ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದ್ದಾರೆ.
ಇಲ್ಲಿನ ನಗರಸಭೆಗೆ ಅ.16ರ ಬುಧವಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಸ್ವಚ್ಚತೆಗೆ ಸಂಬಂಧಪಟ್ಟಂತೆ ನಾಗರಿಕರಿಂದ ಯಾವುದೇ ರೀತಿಯ ದೂರು ಬರಬಾರದು. ಸ್ವಚ್ಚತೆ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಟ್ಟುಬಿಡದೆ ಮಳೆ ಸುರಿಯುತ್ತಿರುವುದರಿಂದ ನಗರ ವ್ಯಾಪ್ತಿಯಲ್ಲಿ ಹೊಂಡ-ಗುಂಡಿಗಳು ಬಿದ್ದಿದ್ದು ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆ ಕಡಿಮೆಯಾಗುವವರೆಗೆ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕೆಲಸ ಮಾಡಿ ಎಂದ ಅವರು, ಮಳೆ ಕಡಿಮೆಯಾದ ನಂತರ ನಗರೋತ್ಥಾನ ಯೋಜನೆಯಡಿ ಅಗತ್ಯ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಲು ತಿಳಿಸಿದರು. ಸ್ವಚ್ಚತೆ ಕಾರ್ಯಕ್ಕೆ ಹೆಚ್ಚುವರಿಯಾಗಿ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಹೆಚ್ಚುವರಿ ಜನರನ್ನು ಕೆಲಸಕ್ಕೆ ತೆಗೆದುಕೊಂಡರೆ ಅನುಕೂಲವಾಗುತ್ತದೆ. ಆದರೆ ಇತರೆ ಕಾರ್ಮಿಕರು ಕೆಲಸ ಮಾಡದೆ ಕುಳಿತುಕೊಳ್ಳುವ ಅಪಾಯವಿದೆ. ಇದರ ಬಗ್ಗೆ ಪೌರಾಯುಕ್ತರು ಗಮನ ಹರಿಸಬೇಕು. ಮಾತು ಕೇಳದ ಅಧಿಕಾರಿ-ಸಿಬ್ಬಂದಿಗೆ ನೋಟಿಸ್ ನೀಡಿ ಎಂದು ಸೂಚನೆ ನೀಡಿದ ಅವರು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಹೇಳಿದರು.
ಕಳೆದ ಬಾರಿ ಆಶ್ರಯ ನಿವೇಶನ ಕೋರಿ 4 ಸಾವಿರಕ್ಕೂ ಹೆಚ್ಚಿನ ಅರ್ಜಿ ಬಂದಿದೆ. ನಮ್ಮ ಬಳಿ ಅಷ್ಟೊಂದು ನಿವೇಶನ ಇಲ್ಲ. ಸುಮಾರು 2 ಸಾವಿರ ನಿವೇಶನ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಶ್ರಯ ನಿವೇಶನ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಸದ್ಯದಲ್ಲೇ ನಗರ ಆಶ್ರಯ ಸಮಿತಿಯನ್ನು ರಚಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಧು ಮಾಲತಿ, ಎನ್.ಲಲಿತಮ್ಮ, ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಎಲ್.ಚಂದ್ರಪ್ಪ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಪರಿಸರ ವಿಭಾಗದ ಮದನ್ ಇನ್ನಿತರರು ಹಾಜರಿದ್ದರು.