Advertisement

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

09:28 AM Oct 28, 2024 | Team Udayavani |

ಮುಧೋಳ : ಗ್ರಾಮದಲ್ಲಿನ ಬಸ್ ನಿಲ್ದಾಣದಿಂದ ಗ್ರಾಮ ಪಂಚಾಯಿತಿ ಕಚೇರಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿರುವ ಪರಿಣಾಮ ಗ್ರಾಮಸ್ಥರು ನಿತ್ಯ ಹದಗೆಟ್ಟ ರಸ್ತೆಯಲ್ಲಿ ಸರ್ಕಸ್ ಮಾಡುತ್ತ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ತಾಲೂಕಿನ ಗಡಿಗ್ರಾಮ ಹಲಗಲಿಯಲ್ಲಿನ ಮುಖ್ಯರಸ್ತೆ ಕಿತ್ತುಹೋಗಿ ದಶಕಗಳು ಸಮೀಪಿಸುತ್ತ ಬಂದಿದ್ದರೂ ಸ್ಥಳೀಯ ಆಡಳಿತಾಧಿಕಾರಿಗಳ‌ ದಿವ್ಯ ನಿರ್ಲಕ್ಷ್ಯದಿಂದ ರಸ್ತೆ ದುರಸ್ತೆ ಕಾಣದೆ ಗ್ರಾಮಸ್ಥರಿಗೆ ನಿತ್ಯ ನರಕದರ್ಶನವಾಗುತ್ತಿದೆ.

ಗ್ರಾಮದ ಆಡಳಿತ ಶಕ್ತಿ ಕೇಂದ್ರವಾಗಿರುವ ಗ್ರಾಮ ಪಂಚಾಯಿತಿಗೆ ಬಸ್ ನಿಲ್ದಾಣದಿಂದ ಸಂಪರ್ಕ ಕಲ್ಪಿಸುವ ರಸ್ತೆ ಕಿತ್ತುಹೋಗಿದೆ. ಆದರೆ ದಿನನಿತ್ಯ ಇದೇ ರಸ್ತೆಯಲ್ಲಿ ಓಡಾಡುವ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗ ಮಾತ್ರ ರಸ್ತೆ ದುರಸ್ತಿಗೆ ಮುಂದಾಗದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಮಳೆಯಾದರೆ ಕೆಸರುಮಯ: ಒಂದು ನೂರು ಮೀಟರ್ ಉದ್ದದ ರಸ್ತೆ ಕೆಮ್ಮಣ್ಣಿನಿಂದ ಕೂಡಿದ್ದು, ತುಂತುರು ಮಳೆಯಾದರೂ ಸಹ ರಸ್ತೆಯೆಲ್ಲ ಕೆಸರಿನ ಗದ್ದೆಯಂತಾಗುತ್ತದೆ.

Advertisement

ಗ್ರಾಮದಿಂದ ಬಸ್ ನಿಲ್ದಾಣಕ್ಕೆ ಆಗಮಿಸುವ ಸಾರ್ವಜನಿಕರು, ಶಾಲೆ ಕಾಲೇಜು ವಿದ್ಯಾರ್ಥಿಗಳು, ಜಮೀನು ಕೆಲಸಕ್ಕೆ ತೆರಳುವ ಕೃಷಿ ಕೂಲಿ ಕಾರ್ಮಿಕರು ಹಾಗೂ ರೈತರು ಇದೇ ಮಾರ್ಗದಲ್ಲಿ ಓಡಾಡಬೇಕು ಅಪ್ಪಿತಪ್ಪಿ ಆಯತಪ್ಪಿ ಬಿದ್ದರೆ ಮೈಯಲ್ಲ ಕೆಸರುಮಯವಾಗುವುದು ಖಚಿತ. ಶಾಲಾ ವಿದ್ಯಾರ್ಥಿಗಳು ರಸ್ತೆ ಮೇಲೆ ಜಾಗರೂಕತೆಯಿಂದ ಓಡಾಡಬೇಕಿದೆ. ಗ್ರಾಮದ ಪ್ರಮುಖ ರಸ್ತೆ ಹದಗೆಟ್ಟಿರುವುದರಿಂದ ಜನರ ಓಡಾಟಕ್ಕೆ ತುಂಬಾ ತೊಂದರೆಯುಂಟಾಗುತ್ತಿದ್ದು, ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಾಗಹಾಕುವ ಕೆಲಸ‌ : ಕೇವಲ ನೂರು ಮೀಟರಿನಷ್ಟು ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಹೇಳೋದೆ ಬೇರೆ. ಪಂಚಾಯತ್ ರಾಜ್ ಇಲಾಖೆಯವರೆ ರಸ್ತೆ ದುರಸ್ತಿ ಮಾಡಲಿ ಎಂದು ಗ್ರಾಮ ಪಂಚಾಯಿತಿ ಪಿಡಿಒ ಸಮಜಾಯಿಷಿ ನೀಡಿದರೆ, ರಸ್ತೆ ದುರಸ್ತಿ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಅನುದಾನ ಬಂದಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಗ್ರಾಮ ಪಂಚಾಯಿತಿಯವರೆ ರಸ್ತೆ ದುರಸ್ತಿ ಮಾಡಿಕೊಳ್ಳಬೇಕು ಎಂದು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ನೆಪ ಹೇಳುತ್ತಾರೆ‌. ಒಟ್ಟಿನಲ್ಲಿ ಅಧಿಕಾರಿಗಳ ಸಂವಹನ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಪಡಿಪಾಟಲು ಪಡುವಂತಾಗಿದೆ.
**
ಗ್ರಾಮದ ಬಸ್ ನಿಲ್ದಾಣದಿಂದ ಪಂಚಾಯಿತಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ರಸ್ತೆ ದುರಸ್ತಿ‌ ಮಾಡಿಕೊಡುವಂತೆ ಪತ್ರ ಬರೆದಿದ್ದೇವೆ. ಒಂದುವೇಳೆ ಅವರು ದುರಸ್ತಿಗೆ ಮುಂದಾಗದಿದ್ದರೆ ಅನಿವಾರ್ಯವಾಗಿ ಪಂಚಾಯಿತಿಯಿಂದ ದುರಸ್ತಿಗೆ ಕ್ರಮಕೈಗೊಳ್ಳುತ್ತೇವೆ.
– ಮಹೇಂದ್ರಕರ ಹಲಗಲಿ ಗ್ರಾಮ ಪಂಚಾಯಿತಿ ಪಿಡಿಒ
**
ರಸ್ತೆ ದುರಸ್ತಿಗಾಗಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಅನುದಾನ ಬಂದಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯತನಕ ಗ್ರಾಮ ಪಂಚಾಯಿತಿಯವರು ತಾತ್ಕಾಲಿಕ ಕ್ರಮ ಕೈಗೊಳ್ಳಲಿ.
– ಮಲ್ಲಿಕಾರ್ಜುನ ಅಂಬಿಗೇರ ಪಂಚಾಯತ್ ರಾಜ್ ಇಲಾಖೆ ಎಇಇ

ಇದನ್ನೂ ಓದಿ: Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

Advertisement

Udayavani is now on Telegram. Click here to join our channel and stay updated with the latest news.

Next