Advertisement

ಹಾಲಾಡಿ ಬಸ್‌ ನಿಲ್ದಾಣಕ್ಕೆ ಅಭಿವೃದ್ಧಿ ‘ಭಾಗ್ಯ’

04:58 PM Nov 22, 2022 | Team Udayavani |

ಹಾಲಾಡಿ: ಮಲೆನಾಡು, ಕುಂದಾಪುರ, ಉಡುಪಿ ಹೀಗೆ ಹತ್ತಾರು ಊರುಗಳನ್ನು ಬೆಸೆಯುವ ಪ್ರಮುಖ ಪೇಟೆಯಾದ ಹಾಲಾಡಿಯ ಬಸ್‌ ನಿಲ್ದಾಣದ ಅಭಿವೃದ್ಧಿ ಬೇಡಿಕೆಯೂ ಕೊನೆಗೂ ಸಾಕಾರಗೊಂಡಿದೆ. ಇಲ್ಲಿನ ಬಸ್‌ ನಿಲ್ದಾಣದ ಅಭಿವೃದ್ಧಿಗೆ ಹಲವು ವರ್ಷಗಳಿಂದ ಬೇಡಿಕೆ ಇತ್ತು.

Advertisement

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮುತುವರ್ಜಿಯಲ್ಲಿ ಹಾಲಾಡಿಯ ಬಸ್‌ ನಿಲ್ದಾಣ, ರಿಕ್ಷಾ ನಿಲ್ದಾಣದ ಕಾಂಕ್ರೀಟ್‌ ಕಾಮಗಾರಿ ಹಾಗೂ ಕೆಲವೆಡೆ ಇಂಟರ್‌ಲಾಕ್‌ ಅಳವಡಿಕೆಗೆ ಅನುದಾನ ಮಂಜೂರಾಗಿತ್ತು. ಅದರ ಕಾಮಗಾರಿಯು ನಡೆದಿದ್ದು, ಈಗ ಪೂರ್ಣಗೊಂಡಿದೆ. ಕಾಂಕ್ರೀಟ್‌ ಕಾಮಗಾರಿಗಾಗಿ 15 ಲಕ್ಷ ರೂ. ಹಾಗೂ ಇಂಟರ್‌ಲಾಕ್‌ಗೆ 2.70 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಪ್ರಮುಖ ಪೇಟೆ

ಹಾಲಾಡಿಯು ಕುಂದಾಪುರ, ಕೋಟೇಶ್ವರ, ಅಮಾಸೆಬೈಲು, ಸಿದ್ದಾಪುರ, ಶಂಕರನಾರಾಯಣ, ಮಂಗಳೂರು, ಉಡುಪಿ, ಮಣಿಪಾಲ, ಶಿವಮೊಗ್ಗ, ತೀರ್ಥಹಳ್ಳಿ, ಆಗುಂಬೆ, ಹೆಬ್ರಿ ಮೊದಲಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪೇಟೆಯಾಗಿದೆ. ಇದಲ್ಲದೆ ಹಾಲಾಡಿ ಮೂಲಕವೇ ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿಯು ಹಾದುಹೋಗುತ್ತದೆ. ಈ ಭಾಗಗಳಿಗೆ ಸಂಚರಿಸುವ ಬಸ್‌ಗಳೆಲ್ಲ ಇಲ್ಲಿನ ಬಸ್‌ ನಿಲ್ದಾಣಕ್ಕೆ ಬಂದೇ ಹೋಗುತ್ತದೆ. ನಿತ್ಯ ನೂರಾರು ಮಂದಿ ಈ ಬಸ್‌ ನಿಲ್ದಾಣವನ್ನು ಆಶ್ರಯಿಸಿದ್ದಾರೆ.

ಹತ್ತಾರು ಬಸ್‌

Advertisement

ಈ ಹಾಲಾಡಿ ಬಸ್‌ ನಿಲ್ದಾಣವಾಗಿ ಕುಂದಾಪುರ- ಆಗುಂಬೆ, ಮಂಗಳೂರು, ಉಡುಪಿ – ಶಿವಮೊಗ್ಗ, ಕುಂದಾಪುರ – ತೀರ್ಥಹಳ್ಳಿ, ಕುಂದಾಪುರ – ಹೆಬ್ರಿ, ಕುಂದಾಪುರ – ಅಮಾಸೆಬೈಲು, ಕುಂದಾಪುರ – ಶೇಡಿಮನೆ, ಸಿದ್ದಾಪುರ – ಶಂಕರನಾರಾಯಣ- ಹಾಲಾಡಿ- ಕುಂದಾಪುರ, ಧರ್ಮಸ್ಥಳ – ಕಾರ್ಕಳ – ಕುಂದಾಪುರ ಹೀಗೆ ನಿತ್ಯ ಹತ್ತಾರು ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ.

ಸರ್ಕಲ್‌ ನಿರ್ಮಾಣ ನನೆಗುದಿಗೆ

ಜನರ ಬೇಡಿಕೆಯಂತೆ ಹಾಲಾಡಿಯ ಬಸ್‌ ನಿಲ್ದಾಣದ ಅಭಿವೃದ್ಧಿಯಾಗಿದೆ. ಅದೇ ರೀತಿ ಅನೇಕ ವರ್ಷಗಳಿಂದ ಇಲ್ಲಿನ 4 ರಸ್ತೆಗಳು ಸಂಧಿಸುವಲ್ಲಿ ವ್ಯವಸ್ಥಿತ ರೀತಿಯ ಸರ್ಕಲ್‌ (ವೃತ್ತ) ನಿರ್ಮಾಣವಾಗಬೇಕು ಅನ್ನುವುದು ಸಾರ್ವಜನಿಕರ ಬೇಡಿಕೆಯಾಗಿತ್ತು. ಇದಕ್ಕಾಗಿ ಪ್ರತಿಭಟನೆ, ಹೋರಾಟಗಳು ನಡೆದಿದ್ದವು. ಆದರೆ “ಬ್ಲಾಕ್‌ ಸ್ಪಾಟ್‌’ ನಡಿ ಒಂದಷ್ಟು ಅಭಿವೃದ್ಧಿಯಾಗಿದೆ. ಆದರೆ ಸರ್ಕಲ್‌ ನಿರ್ಮಾಣವಾದರೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಕೆಲವೆಡೆಗಳಲ್ಲಿ ವೇಗ ನಿಯಂತ್ರಕಗಳ ಅಗತ್ಯವೂ ಇದೆ ಎನ್ನುವುದು ಜನರ ಅಭಿಪ್ರಾಯವಾಗಿದೆ.

ಸುಗಮ ಸಂಚಾರಕ್ಕೆ ಅನುಕೂಲ: ಶಾಸಕರ ಶಿಫಾರಸಿನಂತೆ ಹಾಲಾಡಿಯ ಬಸ್‌ ನಿಲ್ದಾಣ, ರಿಕ್ಷಾ ನಿಲ್ದಾಣದ ಕಾಂಕ್ರೀಟ್‌ ಕಾಮಗಾರಿಗೆ 15 ಲಕ್ಷ ರೂ. ಹಾಗೂ ಇಂಟರ್‌ ಲಾಕ್‌ ಅಳವಡಿಕೆಗೆ 2.70 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆ ಅನುದಾನದಲ್ಲಿ ಬಸ್‌ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ನಡೆದಿದೆ. ಇದರಿಂದ ಬಸ್‌ಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. – ಜನಾರ್ದನ, ಹಾಲಾಡಿ ಗ್ರಾ.ಪಂ. ಉಪಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next