Advertisement

ಕೃಷಿ ರಂಗದ ಅಭಿವೃದ್ಧಿಗೆ ಪೂರಕ ಸಂಶೋಧನೆ ಅಗತ್ಯ

09:10 PM Apr 27, 2019 | Lakshmi GovindaRaj |

ಚಿಕ್ಕಬಳ್ಳಾಪುರ: ದೇಶದಲ್ಲಿಂದು ರೈತರು ಕೃಷಿ ರಂಗದಲ್ಲಿ ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದು ರೈತರಿಗೆ ಉತ್ತಮ ಮಾರ್ಗದರ್ಶನ ತೋರುವ ಹಾಗೂ ಕೃಷಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಂಶೋಧನೆ ಕಡೆಗೆ ಹೆಚ್ಚು ಒತ್ತು ಕೊಡಬೇಕೆಂದು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಕುಲ ಸಚಿವ ಡಾ.ರಾಜೇಂದ್ರ ಪ್ರಸಾದ್‌ ತಿಳಿಸಿದರು.

Advertisement

ನಗರದ ಹೊರವಲಯದ ಎಸ್‌ಜೆಸಿ ತಾಂತ್ರಿಕ ಮಹಾ ವಿದ್ಯಾಲಯದ ಬಿಜಿಎಸ್‌ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾಲೇಜಿನ ಘಟಿಕೋತ್ಸವದಲ್ಲಿ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದರು. ಕೃಷಿ ಪ್ರಧಾನವಾದ ದೇಶದಲ್ಲಿಂದು ಶೇ.80 ರಷ್ಟು ಉದ್ಯೋಗ ಅವಕಾಶಗಳು ಕೃಷಿಯನ್ನು ಕೇಂದ್ರೀಕರಿಸಿವೆ. ಕೃಷಿ ಅಭಿವೃದ್ಧಿಯಾದರೆ ದೇಶದ ಉಳಿವು ಸಾಧ್ಯ ಎಂದರು.

ದೇಶದ ಕೃಷಿ ರಂಗವನ್ನು ಬಲಪಡಿಸುವ ಹೊಣೆಗಾರಿಕೆ ಹಿಂದೆಗಿಂತಲೂ ಈಗ ಹೆಚ್ಚಾಗಿದೆ. ಆದ್ದರಿಂದ ತಾಂತ್ರಿಕ ಶಿಕ್ಷಣ ಪದವಿ ಪಡೆದ ವಿದ್ಯಾರ್ಥಿಗಳು ಕೃಷಿ ಕ್ಷೇತ್ರದ ಉನ್ನತ್ತಿಗೆ ಹೆಚ್ಚು ಸಂಶೋಧನೆಗಳನ್ನು ಮಾಡಬೇಕಿದೆ. ಇಡೀ ಭಾರತದಲ್ಲಿ ಕರ್ನಾಟಕ ಇಂದು ಕೃಷಿ ಪ್ರಗತಿಯಲ್ಲಿ ಮುಂದಿದೆ. ಅದೇ ರೀತಿ ನೀರಾವರಿ ಸಮಸ್ಯೆಯನ್ನು ಎದುರಿಸುತ್ತಿದೆ. ಕೃಷಿ ತಾಂತ್ರಿಕತೆ, ನೀರಾವರಿ, ಮಾರುಕಟ್ಟೆ ಮತ್ತಿತರ ಬಗ್ಗೆ ವಿದ್ಯಾರ್ಥಿಗಳು ಸಂಶೋಧನೆ ಮಾಡಬೇಕೆಂದರು.

ದೇಶದಲ್ಲಿ ಕೃಷಿಯಲ್ಲಿ ತೊಡಗಿರುವ ಶೇ.70 ರಷ್ಟು ಸಣ್ಣ ಹಾಗೂ ಅತಿ ಸಣ್ಣ ರೈತರು ಗ್ರಾಮಾಂತರ ಪ್ರದೇಶದಲ್ಲಿದ್ದು, ಕೃಷಿ ಅಭಿವೃದ್ಧಿ ಮೇಲೆಯೆ ಅವರ ಭವಿಷ್ಯ ಅಡಗಿರುವುದರಿಂದ ತಾಂತ್ರಿಕ ವಿದ್ಯಾರ್ಥಿಗಳು ಗ್ರಾಮೀಣ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಬರೀ ಪಠ್ಯದಲ್ಲಿರುವುದನ್ನು ಓದಿ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸುವುದರತ್ತ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ವಿದ್ಯಾರ್ಥಿಗಳು ಪದವಿ ಪಡೆದ ಮಾತ್ರಕ್ಕೆ ತಮ್ಮ ಜವಾಬ್ದಾರಿ ಮುಗಿಯಿತೆಂದು ಭಾವಿಸುವುದು ತಪ್ಪು ಪದವಿ ನಂತರ ಕಲಿಯುವ ಶಿಕ್ಷಣ ಜೀವನದಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪದವಿ ಸ್ಪೀಕರಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅರ್ಶೀವಚನ ನೀಡಿದ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಈಗ ಭಾರತೀಯ ಯುವಕರ ಬುದ್ಧಿವಂತಿಕೆಯನ್ನು ಕಂಡರೆ ವಿದೇಶಿಯರು ಕೂಡ ಹೆದರುತ್ತಾರೆ. ಸ್ಥೂಲ, ಸೂಕ್ಷ್ಮ ಕಾರಣ ಶರೀರಗಳಿಂದ ಆಗಿರುವ ಈ ಮಾನವ ಶರೀರ ಆಂತರಿಕ ಶಕ್ತಿಯ ಸಹಾಯದಿಂದ ಈ ಪ್ರಾಪಂಚಿಕ ಕೆಲಸಗಳನ್ನು ಮಾಡಬಹುದು ಎಂದರು.

Advertisement

ಪ್ರತಿಯೊಬ್ಬರು ಅಂತರಂಗದ ಬೆಳಕನ್ನು ನೋಡಬೇಕು, ಆಗ ಉತ್ತಮ ದೇಶವನ್ನು ಕಟ್ಟಬಹುದು. ಇದುವರೆಗೂ ನಿಮ್ಮನ್ನು ತಿದ್ದಿ ಮಾರ್ಗದರ್ಶನ ನೀಡಲು ಉಪನ್ಯಾಸಕರು, ಪೋಷಕರು ನಿಮ್ಮೊಂದಿಗೆ ಇದ್ದರು. ಈಗ ಪದವಿ ಪಡೆದಿರುವ ನೀವು ನಿಮ್ಮ ದಾರಿಯನ್ನು ನೀವು ನೋಡಿಕೊಳ್ಳಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಒಳ್ಳೆಯ ದಾರಿ ಹುಡುಕಿಕೊಳ್ಳಿ. ಉದ್ಯೋಗ, ಕುಟುಂಬದ ಜಂಟಾಟದಲ್ಲಿ ಬಿದ್ದು ಸಮಾಜ ಮರೆಯಬೇಡಿ ಎಂದು ಪದವಿ ಸ್ಪೀಕರಿಸಿದ ವಿದ್ಯಾರ್ಥಿಗಳಿಗೆ ಕವಿಮಾತು ಹೇಳಿದರು.

ಬಿಜಿಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಎನ್‌.ಶಿವರಾಮರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಮೊದಲು ತಮ್ಮ ಕುಟುಂಬಸ್ಥರ ಹಾಗೂ ತಂದೆ ತಾಯಿಯರ ಬೆವರಿನ ಪರಿಶ್ರಮವನ್ನು ಅರ್ಥಮಾಡಿಕೊಂಡು ಓದಬೇಕು. ಸಮಾಜಕ್ಕೆ ಹಾಗೂ ಹೆತ್ತ ಪೋಷಕರಿಗೆ ಒಳ್ಳೆಯ ಕೀರ್ತಿ ತಂದು ಕೊಡುವ ಶಕ್ತಿ ವಿದ್ಯಾರ್ಥಿಗಳಿಂದಾಗಬೇಕು. ಪದವಿಧರರಾಗಿ ಹೊರಹೊಮ್ಮುತ್ತಿರುವ ವಿದ್ಯಾರ್ಥಿಗಳು ದೇಶದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆ, ಸವಾಲುಗಳನ್ನು ಅರ್ಥಮಾಡಿಕೊಂಡು ತಮ್ಮ ಜೀವನವನ್ನು ಸಮಾಜಮುಖೀಯಾಗಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಸಿಸ್ಕಾನ್‌ ಲಿಮಿಟೆಡ್‌ನ‌ ಸಿಇಒ ಡಾ.ಕಸ್ತೂರಿ ರಂಗನ್‌, ಎಸ್‌ಜೆಸಿ ತಾಂತ್ರಿಕ ಮಹಾ ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕ ಡಾ.ಟಿ.ಮುನಿಕೆಂಚೇಗೌಡ, ಆಡಳಿತ ಮಂಡಳಿ ಸದಸ್ಯರಾದ ದಾಸಪ್ಪಗೌಡ, ಡಾ.ಕೆ.ಪಿ.ಶ್ರೀನಿವಾಸಮೂರ್ತಿ, ಅನಿಲ್‌, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಂ.ರವಿಕುಮಾರ್‌ ಸೇರಿದಂತೆ ಕಾಲೇಜಿನ ಬೋಧಕ ಸಿಬ್ಬಂದಿ ಇದ್ದರು.

ಪದವಿ ಪ್ರದಾನ; ನಂದಿ ತರಂಗ ಬಿಡುಗಡೆ: ಎಸ್‌ಜೆಸಿ ಕಾಲೇಜಿನ ಘಟಿಕೋತ್ಸವದ ಸವಿನೆನಪಿಗಾಗಿ ಹೊರ ತರಲಾದ ನಂದಿ ತರಂಗ-2019ರ ಕಿರು ಹೊತ್ತಿಗೆಯನ್ನು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕೃಷಿ ವಿಶ್ವ ವಿದ್ಯಾಲಯದ ಕುಲಸಚಿವರಾದ ಡಾ.ರಾಜೇಂದ್ರ ಪ್ರಸಾದ್‌ ಮತ್ತಿತರ ಗಣ್ಯರು ಬಿಡುಗಡೆಗೊಳಿಸಿದರು. ವಿಟಿಯು ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳನ್ನು ನಿರ್ಮಲಾನಂದನಾಥ ಸ್ವಾಮೀಜಿಗಳು ಚಿನ್ನದ ಪದಕವನ್ನು ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ವಿವಿಧ ವಿಭಾಗಗಳಲ್ಲಿ ಎಂಜನಿಯರಿಂಗ್‌ ಪೂರೈಸಿದ ವಿದ್ಯಾರ್ಥಿಗಳಿಗೆ ಗಣ್ಯರು ಪದವಿ ಪ್ರಧಾನ ಮಾಡಿದರು.

ಜೀವನದಲ್ಲಿ ಪದವಿ ಪಡೆದರೆ ಸಾಲದು. ಸಮಾಜದಲ್ಲಿ ನಮ್ಮ ಬದುಕನ್ನು ಇತರರಿಗೆ ಮಾದರಿಯಾಗಿ ಕಟ್ಟಿಕೊಳ್ಳುವುದು ತುಂಬ ಆಗತ್ಯ. ವಿದ್ಯಾರ್ಥಿ ಜೀವನದಲ್ಲಿ ಕಲಿತೆ ಮೌಲ್ಯಗಳೇ ಜೀವನ ಪೂರ್ತಿ ದಾರಿ ದೀಪವಾಗಿರುತ್ತದೆ. ಸಮಾಜದಲ್ಲಿ ಉತ್ತಮ ನಡತೆ, ನಂಬಿಕೆ, ವಿಶ್ವಾಸವನ್ನು ಗಳಿಸಿಕೊಳ್ಳಬಹುದು. ಸಮಾಜ ಮುಖೀಗಳಾಗಿ ಸ್ವಾರ್ಥಕ್ಕಿಂತ ಪರೋಪಕಾರಿಗಳಾಗಿ ಜೀವಿಸಬೇಕು.
-ಡಾ.ನಿರ್ಮಲಾನಂದನಾಥ ಶ್ರೀ, ಆದಿಚುಂಚನಗಿರಿ ಮಠ

Advertisement

Udayavani is now on Telegram. Click here to join our channel and stay updated with the latest news.

Next