ಹಾಸನ: ಸರ್ಕಾರದ ಯೋಜನೆಗಳ ಅನುಷ್ಠಾನ ಎಂದರೆ ಕೇವಲ ಆರ್ಥಿಕ, ಭೌತಿಕ ಗುರಿ ಸಾಧನೆಯಷ್ಟೇ ಅಲ್ಲ. ಅದರಿಂದ ಜನರು ಮತ್ತು ಸಮಾಜದ ಅಭಿವೃದ್ಧಿ ಗುಣಾತ್ಮಾಕವಾಗಿ ಪ್ರತಿಬಿಂಬವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್.ವಿಜಯಪ್ರಕಾಶ್ ಅಭಿಪ್ರಾಯಪಟ್ಟರು.
ಜಿಪಂ ಸಿಇಒ ಆಗಿ ಕಾರ್ಯಭಾರ ವಹಿಸಿಕೊಂಡ ನಂತರ ಮಾತನಾಡಿದ ಅವರು, ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಬೇಕು. ಹಾಸ್ಟೆಲ್‌ಗಳ ಸೌಲಭ್ಯ ಉತ್ತಮವಾಗಬೇಕು. ಇದೆಲ್ಲದರಿಂದ ವಿದ್ಯಾರ್ಥಿಗಳಲ್ಲಿ ಆತ್ಮಶ್ವಾಸ ತುಂಬುವಂತಾಗಬೇಕು. ದಮನಿತ ಸಮುದಾಯದ ಮಕ್ಕಳಿಗೆ ವಿಶೇಷ ವ್ಯಕ್ತಿತ್ವ ವಿಕಸನ ತರಬೇತಿಗಳು ನಡೆಯಬೇಕಿದೆ. ಆ ನಿಟ್ಟಿನಲ್ಲಿ ತಾವು ಕಾರ್ಯ ಪ್ರವೃತ್ತರಾಗುವುದಾಗಿ ಹೇಳಿದರು.
ಮಾನವ ಸಂಪನ್ಮೂಲ ಅಭಿವೃದ್ಧಿಯಾಗಲಿ: ಪ್ರತಿಯೊಂದು ಇಲಾಖೆಯಲ್ಲಿಯೂ ಇಂತಹ ರಚನಾತ್ಮಕ ಚಟುವಟಿಕೆಗಳು ನಡೆಯಬೇಕು. ಜಿಲ್ಲೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಹೆಚ್ಚಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ವಿಶೇಷ ಕಾಳಜಿ ಮತ್ತು ಶ್ರಮದಿಂದ ಸುಮಾರು 30 ಸಾವಿರ ಕೋಟಿ ರೂ. ಅನುದಾನ ಜಿಲ್ಲೆಗೆ ಹರಿದು ಬಂದಿದೆ. ಆದರೆ ಸಂಪೂರ್ಣ ಸಮರ್ಪಕ ಫಲ ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ.
ಆ ನಿಟ್ಟಿನಲ್ಲಿ ಪ್ರಾಮಾಣಿಕ ಮತ್ತು ಸೃಜನಾತ್ಮಾಕ ಕ್ರಮಗಳಾಗಬೇಕು ಅದಕ್ಕಾಗಿ ಅಧಿಕಾರಿಗಳಿಗೆ ಅರಿವು ಮಾಡಿಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು. ಸರ್ಕಾರಿ ಯೋಜನೆಗಳಿಂದಾದ ಪರಿವರ್ತನೆ, ಬದಲಾವಣೆಗಳ ಯಶೋಗಾಥೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಇತರರನ್ನು ಪ್ರೇರೇಪಿಸಬೇಕು. ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಇರುವ ಹೊಸ ಸಾಧ್ಯತೆಗಳ ಬಗ್ಗೆ ಅರಿವು ಮೂಡಿಸಬೇಕು.
ಅಧಿಕಾರಿಗಳು ಆ ನಿಟ್ಟಿನಲ್ಲಿ ಚಿಂತಿಸಬೇಕು ಎಂದ ಅವರು, ಆರೋಗ್ಯ ಕ್ಷೇತ್ರದ ಸುಧಾರಣೆ ಮತ್ತು ಸಂಕಷ್ಟದಲ್ಲಿರುವ ಬಡ ರೋಗಿಗಳಲ್ಲಿಗೆ ಸಮುದಾಯದ ಮೂಲಕ ನೆರವು ಒದಗಿಸುವ ಪ್ರಯತ್ನಗಳನ್ನು ತಾವು ಪ್ರೇರೇಪಿಸುವುದಾಗಿ ಹೇಳಿದ ಅವರು, ಅಧಿಕಾರಿಗಳು, ಸಂಘ ಸಂಸ್ಥೆಗಳು, ಮಾಧ್ಯಮಗಳು ಪ್ರತಿಯೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಪೂರಕವಾಗಿ, ಪೇರೇಪಣೆಯಾಗಿ ಕಾರ್ಯನಿರ್ವಸಬೇಕಿದೆ ಎಂದರು.