ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರ ಬೆಳಗಾವಿಯಲ್ಲಿ ಆರಂಭಗೊಳ್ಳಲಿದೆ. ಒಂದೆಡೆಯಿಂದ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ಆರೋಪಗಳನ್ನು ಮುಂದಿಟ್ಟು ಅಧಿವೇಶನದಲ್ಲಿ ಹೋರಾಟ ನಡೆಸಲು ವಿಪಕ್ಷಗಳು ಸಜ್ಜಾಗಿವೆ. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷ ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿನ ಪ್ರಕರಣಗಳನ್ನು ಮುಂದಿಟ್ಟು ವಿಪಕ್ಷಗಳನ್ನು ಹಣಿಯಲು ಕಾರ್ಯತಂತ್ರ ಹೆಣೆದಿದೆ. ಕಾಂಗ್ರೆಸ್‌ನ ಆಂತರಿಕ ಬೇಗುದಿ ಒಳಗೊಳಗೇ ಕುದಿಯುತ್ತಿದ್ದರೆ ವಿಪಕ್ಷ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಈಗಾಗಲೇ ಬೀದಿ ಕಾಳಗವಾಗಿ ಮಾರ್ಪಟ್ಟಿರುವುದರಿಂದ ಈ ಬಾರಿಯ ಅಧಿವೇಶನದ ವೇಳೆ ಇದು ಕೂಡ ಕಲಾಪಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ವೇಳೆ ಈ ಎಲ್ಲ ತಂತ್ರ-ಪ್ರತಿತಂತ್ರಗಳ ಭರಾಟೆಯ ನಡುವೆ ಎಷ್ಟು ಗಂಟೆಗಳ ಕಾಲ ಸುಗಮ ಕಲಾಪ ನಡೆದೀತು ಎಂಬುದು ಮಾತ್ರ ಯಕ್ಷಪ್ರಶ್ನೆಯೇ ಸರಿ.
ಉತ್ತರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ಬೆಳಗಾವಿಯಲ್ಲಿ ಸುಸಜ್ಜಿತ ಸುವರ್ಣ ಸೌಧ ನಿರ್ಮಿಸಿ, ಪ್ರತೀ ವರ್ಷ ಕೋಟ್ಯಂತರ ರೂ. ವ್ಯಯಿಸಿ, ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ನಡೆಸುತ್ತ ಬರಲಾಗಿದೆಯಾದರೂ ಈವರೆಗೂ ನಿರೀಕ್ಷಿತ ಫಲಿತಾಂಶವನ್ನು ಕಂಡಿಲ್ಲ ಎಂಬುದು ಒಂದಿಷ್ಟು ಚಿಂತನೀಯ ವಿಷಯ. ಪ್ರತೀ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ ಎಂದಾಗಲೆಲ್ಲ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದ ಜನರ ನಿರೀಕ್ಷೆಗಳು ಗರಿಗೆದರುತ್ತವೆ. ಆದರೆ ಈ ಭಾಗದ ಸಮಸ್ಯೆ, ಬೇಡಿಕೆಗಳ ಈಡೇರಿಕೆಯ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳಾಗಿ ಮಾರ್ಪಟ್ಟಿಲ್ಲ ಎಂಬುದಂತೂ ದಿಟ. ಈ ಹಿನ್ನೆಲೆಯಲ್ಲಿ ಈ ಬಾರಿಯಾದರೂ ಶಾಸಕರು ತಮ್ಮ ಹೊಣೆಗಾರಿಕೆ ಮತ್ತು ಕರ್ತವ್ಯವನ್ನು ಅರಿತುಕೊಂಡು ಎರಡೂ ಸದನಗಳಲ್ಲಿ ಕಲಾಪಗಳನ್ನು ಸುಲಲಿತವಾಗಿ ನಡೆಸಿಕೊಡಲು ಅವಕಾಶ ಮಾಡಿಕೊಟ್ಟಾರು ಎಂಬ ಆಶಯವಂತೂ ಉತ್ತರ ಕರ್ನಾಟಕದ ಭಾಗದ ಜನತೆಯಲ್ಲಿ ಇದ್ದೇ ಇದೆ.
ಆದರೆ ಇಂದಿನ ರಾಜ್ಯದ ರಾಜಕೀಯ ವಿದ್ಯಮಾನ, ಬೆಳವಣಿಗೆಗಳ, ಸರ್ಕಾರದ ವಿರುದ್ಧ ಕೇಳಿಬಂದಿರುವ ಆರೋಪಗಳು, ಸರಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಗ್ಯಾರಂಟಿ ಯೋಜನೆಗಳ ಜಾರಿಯ ಭರದಲ್ಲಿ ಸರ್ಕಾರದ ಬೊಕ್ಕಸದ ಮೇಲಾಗಿರುವ ಪರಿಣಾಮ, ಆದಾಯವನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ನಡೆಸುತ್ತಿರುವ ಕಸರತ್ತು ಈ ಎಲ್ಲ ವಿಷಯಗಳು ಅಧಿವೇಶನದ ವೇಳೆ ಪ್ರತಿಧ್ವನಿಸುವ ಸಾಧ್ಯತೆಯಂತೂ ಇದ್ದೇ ಇದೆ. ಇವೆಲ್ಲವೂ ಗಂಭೀರ ವಿಷಯಗಳಾಗಿದ್ದು ಈ ಬಗ್ಗೆ ಚರ್ಚೆ ನಡೆಯಲೇಬೇಕು. ಹಾಗೆಂದು ಈ ವಿಷಯಗಳನ್ನು ಮುಂದಿಟ್ಟು ಸದನದಲ್ಲಿ ಸುಖಾಸುಮ್ಮನೆ ಗದ್ದಲ ಎಬ್ಬಿಸಿ ಕಲಾಪವನ್ನು ಹಾಳಗೆಡಹಿ, ಇಡೀ ಅಧಿವೇಶನವನ್ನೇ ವ್ಯರ್ಥಗೊಳಿಸುವಂತಾಗಬಾರದು. ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು, ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳ ಅನುಷ್ಠಾನ, ವಿವಿಧ ಕ್ಷೇತ್ರಗಳ ಸಮಸ್ಯೆ, ಬೇಡಿಕೆಗಳ ಕುರಿತಂತೆ ಶಾಸಕರು ಸದನದಲ್ಲಿ ಪ್ರಸ್ತಾವಿಸಿ ಸರ್ಕಾರದ ಗಮನ ಸೆಳೆಯಲು ಅನುವು ಮಾಡಿಕೊಡಬೇಕು. ಇವೆಲ್ಲದಕ್ಕಿಂತ ಮುಖ್ಯವಾಗಿ ಸರ್ಕಾರದ ಸದನದಲ್ಲಿ ನೀಡುವ ಉತ್ತರ, ಮಾಡುವ ಘೋಷಣೆಗಳ ಜಾರಿಯಲ್ಲಿ ತನ್ನ ಉತ್ತರದಾಯಿತ್ವವನ್ನು ಪ್ರದರ್ಶಿಸಬೇಕಿರುವುದು ಬಲುಮುಖ್ಯ.
ಇವೆಲ್ಲವೂ ಕಾರ್ಯಸಾಧುವಾದಾಗ ಮಾತ್ರ ಅಧಿವೇಶನ ಸಾರ್ಥಕ ಎಂದೆನಿಸಿಕೊಳ್ಳಲು ಸಾಧ್ಯ. ಈ ದಿಸೆಯಲ್ಲಿ ಆಡಳಿತ ಮತ್ತು ವಿಪಕ್ಷಗಳು ಮುಂದಿನ ಎರಡು ವಾರಗಳ ಕಾಲ ರಾಜಕೀಯ ಕಚ್ಚಾಟ, ದ್ವೇಷವನ್ನು ಒಂದಿಷ್ಟು ಹಿನ್ನೆಲೆಗೆ ಸರಿಸಿ, ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಮುಂದಾಗಬೇಕು. ಆ ಮೂಲಕ ಈ ಅಧಿವೇಶನ ಹೊಸ ಶಕೆಗೆ ನಾಂದಿ ಹಾಡಲಿ.