ಉಡುಪಿ: ವಾಯು ವಿಹಾರ ತಾಣವಾಗಿ ರುವ ಮಣ್ಣಪಳ್ಳ ಪ್ರಕೃತಿಯ ಕೊಡುಗೆಯಾಗಿದ್ದು, ನಿರ್ವಹಣೆ, ಅಭಿವೃದ್ಧಿ ಕೊರತೆಯಿಂದಾಗಿ ದುಃಸ್ಥಿತಿಗೆ ತಲುಪುತ್ತಿದೆ. ಪರಿಸರದಲ್ಲಿ ಕೆಲವರ ವರ್ತನೆ ಮಿತಿ ಮೀರಿದ್ದು ವಾಯು ವಿಹಾರಿಗಳು ತೊಂದರೆ ಪಡು ವಂತಾಗಿದೆ.
ವಾಕಿಂಗ್ ಟ್ರ್ಯಾಕ್‌ನಲ್ಲಿ ಯುವಕರು ಸ್ಕೂಟರ್, ಬೈಕ್‌ಗಳನ್ನು ಚಲಾಯಿಸಿ ಸ್ಟಂಟ್‌ಗಳನ್ನು ಮಾಡುತ್ತಿದ್ದಾರೆ. ಇದರಿಂದ ವಿಹಾರಿಗಳಿಗೆ ತೀರ ಕಿರಿಕಿರಿಯಾಗುತ್ತಿದೆ. ರಾತ್ರಿ ಕಳೆಯುತ್ತಿದ್ದರೆ ಅಪರಿಚಿತರ ಗುಂಪು ಮದ್ಯಕೂಟ ನಡೆಸುವುದು ಪರಿಸರದ ಅವ್ಯವಸ್ಥೆಗೆ ಕಾರಣವಾಗಿದೆ.
ಪ್ರಾಕೃತಿಕವಾಗಿ ನಿರ್ಮಾಣಗೊಂಡ ದೊಡ್ಡದಾದ ಕೆರೆಯನ್ನು ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ತಾಣವಾಗಿ ಮಾರ್ಪಡಿಸಿತ್ತು. ಕೆರೆಯಲ್ಲಿ ವರ್ಷಪೂರ್ತಿ ಇರುವ ನೀರು ಕಣ್ಮನ ಸೆಳೆಯುತ್ತದೆ. ಈ ಹಿಂದೆ ಇಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮಣಿಪಾಲ ಸುತ್ತಮುತ್ತಲಿನ ಜನಕ್ಕೆ ಇಲ್ಲಿನ ವಾಯು ವಿಹಾರ ಅಚ್ಚುಮೆಚ್ಚು. ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದುಕೊಂಡಿವೆ. ತ್ಯಾಜ್ಯ, ಮದ್ಯದ ಬಾಟಲಿ ಸೇರಿದಂತೆ ಇಲ್ಲಿರುವ ಎಲ್ಲ ತ್ಯಾಜ್ಯಗಳು ಕೆರೆ ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ನೀರು ಸಾಗುವ ತೋಡಿನಲ್ಲಿ ಚಾಕೋಲೆಟ್, ಬಿಸ್ಕೆಟ್, ಚಾಟ್ಸ್ ಮಸಾಲ ಪ್ಯಾಕ್ ತಿಂಡಿಗಳ ರ್ಯಾಪರ್‌ಗಳು ರಾಶಿ ರಾಶಿ ಬಿದ್ದಿವೆ. ಮಳೆ ಸಂದರ್ಭ ಎಲ್ಲ ತ್ಯಾಜ್ಯಗಳು ಕೆರೆಗೆ ಸೇರುತ್ತಿವೆ.
ಇಲ್ಲಿಗೆ ಸಮಯ ಕಳೆಯಲು ಬರುವ ಸಾರ್ವಜನಿಕರು ಚಾಕೋಲೆಟ್, ಆಹಾರ ಪದಾರ್ಥಗಳನ್ನು ತಂದು ಸೇವಿಸುತ್ತಾರೆ. ತ್ಯಾಜ್ಯ ನಿರ್ವಹಣೆ ಜಾಗೃತಿ ಇಲ್ಲದವರು ಕಸದ ತೊಟ್ಟಿಗೆ ಎಸೆಯದೆ, ಬೇರೆ ಬೇರೆ ಜಾಗದಲ್ಲಿ ಕಸಗಳನ್ನು ಎಸೆಯುತ್ತಾರೆ.
ಕಸದ ತೊಟ್ಟಿಯಲ್ಲಿ ಮದ್ಯದ ಬಾಟಲಿಗಳು ಒಮ್ಮೊಮ್ಮೆ ಕಾಣಬಹುದು. ಹಗಲಲ್ಲಿಯೂ ಧೂಮಪಾನ ಮಾಡುವ ಮೂಲಕ ಇತರ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡು ತ್ತಾರೆ. ಅಲ್ಲಲ್ಲಿ ಸಿಗರೇಟು ಪ್ಯಾಕ್‌ಗಳು ಬಿದ್ದುಕೊಂಡಿವೆ.
– ಮಣ್ಣಪಳ್ಳ ಕೆರೆಯ ಪ್ರಮುಖ ದ್ವಾರಗಳನ್ನು ಹೊರತುಪಡಿಸಿ ಉಳಿದ ಕಡೆ ಪ್ರವೇಶ ನಿರ್ಬಂಧಿಸಬೇಕು.
– ವಾಕಿಂಗ್ ಟ್ರ್ಯಾಕ್‌ನಲ್ಲಿ ಸ್ಕೂಟರ್, ಬೈಕ್ ಚಲಾಯಿಸುವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
– ಸೆಕ್ಯೂರಿಟಿ ಸಿಬಂದಿ ನೇಮಕ, ಮುಖ್ಯದ್ವಾರದಲ್ಲಿ ಸಿಸಿಟಿವಿ ಅಳವಡಿಸಿ ನಿಗಾವಹಿಸಬೇಕು.
– ಸ್ವತ್ಛತೆಗೆ ಆದ್ಯತೆ ನೀಡಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.