Advertisement

ದೇವನಹಳ್ಳಿ: ಜಿಲ್ಲಾ ಕೇಂದ್ರದ ಘೋಷಣೆ ನಿರೀಕ್ಷೆಯಲ್ಲಿ ಜನ

03:10 PM Feb 16, 2023 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನು ಘೋಷಣೆಯನ್ನು ಬಜೆಟ್‌ನಲ್ಲಿ ಮಾಡುತ್ತಾರೆಯೋ ಎಂಬುವ ಕುತೂಹಲ ಜನರಲ್ಲಿ ಕಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಬಜೆಟ್‌ನಲ್ಲಿ ಜಿಲ್ಲೆಯ ಜನ ಬೆಟ್ಟದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Advertisement

ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಒಂದೊಂದು ಹೆಸರು ಇದೆ. ಈ ಜಿಲ್ಲೆಗೆ ದೇವನಹಳ್ಳಿ ಜಿಲ್ಲೆ ಎಂದು ಹೆಸರಿಡಬೇಕು. ರಾಮನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು ಇತರೆ ಜಿಲ್ಲೆಗಳಿಗೆ ಹೆಸರುಗಳಿವೆ. ಈ ಜಿಲ್ಲೆಗೆ ಹೆಸರು ಇಲ್ಲ. ಕಳೆದ ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲಾ ಕೇಂದ್ರ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಕಾಂಗ್ರೆಸ್‌ ಸರ್ಕಾರದಲ್ಲೇ ಜಿಲ್ಲಾಡಳಿತ ಕಟ್ಟಡಗಳನ್ನು ತಾಲೂಕಿನ ಬೀರಸಂದ್ರ ಗ್ರಾಮದ ಬಳಿ ಉದ್ಘಾಟನೆ ಮಾಡಿತ್ತು.

ಜಿಲ್ಲಾಡಳಿತ ಕಚೇರಿ 2017ರಲ್ಲಿ ದೇವನಹಳ್ಳಿ ತಾಲೂಕಿಗೆ ಬೆಂಗಳೂರಿನಿಂದ ಸ್ಥಳಾಂತರವಾಯಿತು. ಕಳೆದ ಮೂರ್‍ನಾಲ್ಕು ಬಜೆಟ್‌ಗಳಿಂದ ಜಿಲ್ಲಾ ಕೇಂದ್ರ ಘೋಷಣೆಯ ಕನಸು ಕನಸಾಗಿಯೇ ಉಳಿದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನ ದೇವನಹಳ್ಳಿಯಲ್ಲಿರುವುದರಿಂದ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಸಾಧ್ಯತೆ ಹೆಚ್ಚು ಇದೆ. ಯಾವುದೇ ಶಾಶ್ವತ ನದಿ ನಾಲೆಗಳು ಇಲ್ಲದ ಕೃಷಿ ಹೈನುಗಾರಿಕೆಯನ್ನೇ ಅವಲಂಬಿಸಿರುವ ಜಿಲ್ಲೆ ಆರ್ಥಿಕವಾಗಿ ಹಿಂದುಳಿದಿದೆ.

ಹೆಚ್ಚಿನ ಅನುದಾನ ನೀಡಿ: ವಿಜಯಪುರ ಮತ್ತು ದೇವನಹಳ್ಳಿ ಪಟ್ಟಣ ಅವಳಿ ನಗರ, ವಿಜಯಪುರ ತಾಲೂಕು ಘೋಷಣೆ. ಜಿಲ್ಲಾಸ್ಪತ್ರೆ, ಜಿಲ್ಲಾ ಕ್ರೀಡಾಂಗಣ, ಮೆಡಿಕಲ್‌ ಕಾಲೇಜು, ಸರ್ಕಾರಿ ಎಂಜನೀಯರಿಂಗ್‌ ಕಾಲೇಜು, ವೃಷಭಾವತಿ ವ್ಯಾಲಿ ಯೋಜನೆ ಶ್ರೀಘ್ರ ಜಾರಿ, ಎಚ್‌.ಎನ್‌.ವ್ಯಾಲಿ ನೀರು ಇನ್ನುಳಿದ ಕೆರೆಗಳಿಗೆ ಹರಿಸುವುದು. ದೇವನಹಳ್ಳಿ, ವಿಜಯಪುರ, ವೇಮ್‌ಗಲ್‌, ಕೋಲಾರ, ತಿರುಪತಿಗೆ ಹೆದ್ದಾರಿ ನಿರ್ಮಿಸುವುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಕಾವೇರಿ ನೀರು ನಗರಕ್ಕೆ ವಿಸ್ತರಣೆ, ಮೆಟ್ರೋ ರೈಲು, ಜಿಲ್ಲಾ ಕ್ರೀಡಾಂಗಣ, ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು.

ಹೊಸಕೋಟೆ ತಾಲೂಕಿಗೆ ಚಲಘಟ್ಟ ಯೋಜನೆಗೆ ನೀಡಿರುವ ಅನುದಾನವನ್ನು ತ್ವರಿತವಾಗಿ ನೀಡಬೇಕು. ಎತ್ತಿನಹೊಳೆ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ಪೂರ್ಣಗೊಳಿಸಬೇಕು. ಇಷ್ಟೊಂದು ದೊಡ್ಡಮಟ್ಟವನ್ನು ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಜಿಲ್ಲೆಗೆ ಅನುದಾನ ನೀಡಲಿದೆಯೇ? ಎಷ್ಟು ನೀಡಬಹುದು ಎಂಬ ಕುತೂಹಲ ನಾಗರಿಕರಲ್ಲಿ ಮೂಡಿಸಿದೆ.

Advertisement

ಎತ್ತಿನಹೊಳೆ ಯೋಜನೆಗೆ ಹಣಕಾಸಿನ ಕೊರತೆ:
ಬೆಂಗಳೂರಿನಲ್ಲಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯನ್ನು ದೇವನಹಳ್ಳಿಗೆ ಸ್ಥಳಾಂತರ ಮಾಡಲು ಅನುದಾನ ನೀಡಬೇಕು. ದೇವನಹಳ್ಳಿ ಮೀಸಲು ಕ್ಷೇತ್ರದಲ್ಲಿ ಜಿಲ್ಲಾ ಕೇಂದ್ರವಾಗಿದ್ದು, ಜಿಲ್ಲಾ ಸಂಕೀರ್ಣದ ಕಟ್ಟಡದಲ್ಲಿ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ. ಬಹುತೇಕ ಅಧಿಕಾರಿಗಳು ಮತ್ತು ನೌಕರರಿಗೆ ವಸತಿ ಲಭ್ಯವಿರುವುದಿಲ್ಲ. ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಲು ನೂರು ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ಎತ್ತಿನಹೊಳೆ ಯೋಜನೆಗೆ ಹಣಕಾಸಿನ ಕೊರತೆ ಜೊತೆಗೆ ಭೂಸ್ವಾಧೀನ ಸಮಸ್ಯೆ ಇರುವ ಕಾರಣ ಎತ್ತಿನಹೊಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹರಿಯುವ ಕನಸು ಇನ್ನೂ ಈಡೇರಿಲ್ಲ. ಸರ್ಕಾರ ಪ್ರಾರಂಭಿಕವಾಗಿ 13 ಸಾವಿರ ರೂ.ಕೋಟಿ ಯೋಜನೆ ರೂಪಿಸಿದ್ದರು. ಯೋಜನೆ ಕಾರ್ಯಗತ ವಿಳಂಬ ಆಗಿರುವುದರಿಂದ ಯೋಜನೆ ವೆಚ್ಚ 20 ಸಾವಿರ ಕೋಟಿ ದಾಟುವ ಅಂದಾಜು ಮಾಡಲಾಗಿದೆ.

ದೇವನಹಳ್ಳಿ ತಾಲೂಕಿನಲ್ಲಿ ಜಿಲ್ಲಾಡಳಿತ ಭವನಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಜಿಲ್ಲಾ ಕೇಂದ್ರ ಘೋಷಣೆ, ವಿಜಯಪುರ ದೇವನಹಳ್ಳಿ ಪಟ್ಟಣಗಳನ್ನು ಅವಳಿ ನಗರವನ್ನಾಗಿ ಮಾಡಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಬೇಕು. ವಿಜಯಪುರ ಮತ್ತು ದೇವನಹಳ್ಳಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣ ಆಗಬೇಕು.
●ಎಲ್‌.ಎನ್‌.ನಾರಾಯಣಸ್ವಾಮಿ, ಶಾಸಕ

ವಿಜಯಪುರ ತಾಲೂಕನ್ನಾಗಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಈ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರವರು ವಿಜಯಪುರ ತಾಲೂಕನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ವಿಜಯಪುರ ತಾಲೂಕು ಆಗಲು
ಸಾಕಷ್ಟು ಹೋರಾಟ ಮಾಡಲಾಗಿದೆ.
●ಬಿ.ಕೆ.ಶಿವಪ್ಪ, ತಾಲೂಕು ಹಿತರಕ್ಷಣಾ ಸಮಿತಿ ಅಧ್ಯಕ್ಷ

ದೇವನಹಳ್ಳಿ ತಾಲೂಕಿನಲ್ಲಿ ತರಕಾರಿ ಮತ್ತು ಹೂವು ಹಣ್ಣು ಹೆಚ್ಚು ಬೆಳೆಯುವ ರೈತರಿದ್ದು, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಅದಕ್ಕಾಗಿ ಈ ಬಜೆಟ್‌ನಲ್ಲಿ ಕೃಷಿ ಮಾರುಕಟ್ಟೆ ವ್ಯವಸ್ಥೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದೇವೆ.
●ವೆಂಕಟನಾರಾಯಣಪ್ಪ,
ರೈತ ಸಂಘದ ರಾಜ್ಯ ಉಪಾಧ್ಯಕ್ಷ

ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಿಲ್ಲೆಗೆ ಹೆಚ್ಚಿನ ಅನುದಾನವನ್ನು ನೀಡುವಂತೆ ಆಗಬೇಕು. ಬಜೆಟ್‌ ಮಂಡಿಸಿದರೆ ಸಾಲದು, ಅದು ಕಾರ್ಯಗತವಾಗಬೇಕು. ನಾಮ್‌ ಕೇ ವಾಸ್ತೆ ಬಜೆಟ್‌ ಆಗಬಾರದು.
●ಕೆ.ಸಿ.ಮಂಜುನಾಥ್‌, ಜಿಪಂ ಮಾಜಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next