ಮೈಸೂರು: ಚಾಮರಾಜ ನಗರ ಉಪ ವಿಭಾಗದ ಸೆಸ್ಕ್ ಕಚೇರಿ ಮೇಲ್ವಿಚಾರಕ ಎಂ.ಸಿದ್ದಲಿಂಗಯ್ಯರ ಮನೆ, ಕಚೇರಿ ಸೇರಿದಂತೆ ಏಕಕಾಲಕ್ಕೆ ಅವರಿಗೆ ಸೇರಿದ ಹಲವು ಆಸ್ತಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ದಾಳಿ ನಡೆಸಿದ್ದಾರೆ.
ಚಾಮರಾಜ ನಗರದ ಜೆಎಸ್‌ಎಸ್ ಬಡಾವಣೆಯ ಒಂದನೇ ಅಡ್ಡರಸ್ತೆಯಲ್ಲಿರುವ ಇವರ ನಿವಾಸ, ಇವರ ತಾಯಿ ವಾಸಿಸುತ್ತಿರುವ ರಥದ ಬೀದಿಯ ಮನೆ, ಮೈಸೂರು ಜಿಲ್ಲೆಯ ತಿ.ನರಸೀಪುರ ಪಟ್ಟಣದಲ್ಲಿರುವ ಮನೆ, ಅಲಗೂಡು ಗ್ರಾಮದಲ್ಲಿರುವ ತೋಟದ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಚಾಮರಾಜ ನಗರ ಉಪ ವಿಭಾಗದ ಸೆಸ್ಕ್ ಕಚೇರಿಯ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ದೊರೆತಿರುವ ದಾಖಲೆಗಳ ಪ್ರಕಾರ ತಿ.ನರಸೀಪುರ ತಾಲೂಕು ಆಲಗೂಡು ಗ್ರಾಮದಲ್ಲಿ ಅಂದಾಜು 8 ಲಕ್ಷ ರೂ. ಮೌಲ್ಯದ 85-30 ಅಡಿ ವಿಸ್ತೀರ್ಣದ ಎರಡು ನಿವೇಶನಗಳು, ಅಲಗೂಡು ಗ್ರಾಮದಲ್ಲಿ ಅಂದಾಜು 2 ಲಕ್ಷ ರೂ. ಮೌಲ್ಯದ 30-50 ಚದರ ಅಡಿ ವಿಸ್ತೀರ್ಣದ ಒಂದು ನಿವೇಶನ, ತಿ.ನರಸೀಪುರ ತಾಲೂಕು ಭೈರಾಪುರ ಗ್ರಾಮದಲ್ಲಿ ಅಂದಾಜು 4 ಲಕ್ಷ ರೂ. ಮೌಲ್ಯದ 25-50 ಚದರ ಅಡಿ ವಿಸ್ತೀರ್ಣದ ನಿವೇಶನ ಜತೆಗೆ
ಅದೇ ಗ್ರಾಮದಲ್ಲಿ ನಾಲ್ಕು ಲಕ್ಷ ರೂ. ಮೌಲ್ಯದ 1.5 ಎಕರೆ ಜಮೀನು, ಭೈರಾಪುರ ಹೊಸ ಬಡಾವಣೆಯಲ್ಲಿ ಅಂದಾಜು 75 ಲಕ್ಷ ರೂ. ಮೌಲ್ಯದ 3800 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಲಾಗಿರುವ ಮನೆ ಹಾಗೂ ವಾಣಿಜ್ಯ ಮಳಿಗೆಗಳು, ತಿ.ನರಸೀಪುರ ತಾಲೂಕು ಮೂಗೂರು ಹೋಬಳಿ ಯರಗನ ಹಳ್ಳಿ ಗ್ರಾಮದಲ್ಲಿ ಅಂದಾಜು 4 ಲಕ್ಷ ರೂ. ಮೌಲ್ಯದ 1.3 ಎಕರೆ ಜಮೀನು, ಅದೇ ಗ್ರಾಮದಲ್ಲಿ ಅಂದಾಜು 5 ಲಕ್ಷ ರೂ. ಮೌಲ್ಯದ 1.38 ಎಕರೆ ಜಮೀನು ಸಿದ್ದಲಿಂಗಯ್ಯ ಹೆಸರಿನಲ್ಲಿದೆ.
ಪತ್ನಿ ಹೆಸರಲ್ಲಿ ತಿ.ನರಸೀಪುರ ತಾಲೂಕು ಅಲಗೂಡು ಗ್ರಾಮದಲ್ಲಿ 25 ಲಕ್ಷ ರೂ. ಮೌಲ್ಯದ 3.3 ಎಕರೆ ಜಮೀನಿನಲ್ಲಿ ಒಂದು ಅಂತಸ್ತಿನ ಆರ್‌ಸಿಸಿ ಕಟ್ಟಡ , ಚಾಮರಾಜ ನಗರ ತಾಲೂಕು ಸಂತೆಮರಹಳ್ಳಿ ಹೋಬಳಿ ನವಿಲೂರು ಗ್ರಾಮದಲ್ಲಿ 4 ಲಕ್ಷ ರೂ. ಮೌಲ್ಯದ 2.13 ಎಕರೆ ಜಮೀನು ಹಾಗೂ ಸಿದ್ದಲಿಂಗಯ್ಯ ಹೆಸರಲ್ಲಿ 12 ಲಕ್ಷ ಮೌಲ್ಯದ 4.37 ಎಕರೆ ಜಮೀನು, ಪತ್ನಿ ಹೆಸರಲ್ಲಿ 3 ಲಕ್ಷ ರೂ. ಮೌಲ್ಯದ 2.17 ಎಕರೆ ಜಮೀನು,
14.9 ಲಕ್ಷ ರೂ. ಮೌಲ್ಯದ 522 ಗ್ರಾಂ ಚಿನ್ನ, 1.2 ಲಕ್ಷ ರೂ. ಮೌಲ್ಯದ 3.5 ಕೆಜಿ ಬೆಳ್ಳಿ, 16 ಲಕ್ಷ ರೂ. ಮೌಲ್ಯದ ಗೃಹಉಪಯೋಗಿ ವಸ್ತುಗಳು, ಒಂದು ಮಾರುತಿ ಸ್ವಿಫ್ಟ್ ಕಾರು, 1 ಹಿರೋ ಹೋಂಡಾ ಮತ್ತು ಒಂದು ಹೊಂಡಾ ಶೈನ್ ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. ಜತೆಗೆ ಸುಮಾರು 19.5 ಲಕ್ಷ ರೂ. ಮೊತ್ತದ ವಿವಿಧ ಕಂಪನಿಗಳ ವಿಮಾ ಪಾಲಿಸಿಗಳನ್ನು ಹೊಂದಿರುವುದು ದಾಖಲಾತಿ ಪರಿಶೀಲನೆ ವೇಳೆ ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.