ಕಲಘಟಗಿ: ಲಾಕ್‌ಡೌನ್ ರಜಾ ಅವಧಿಯನ್ನೇ ಸದ್ಭಳಕೆ ಮಾಡಿಕೊಂಡ ಚಿತ್ರಕಲಾ ಶಿಕ್ಷಕರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಡೆಯ ಮೇಲೆ ಚಿತ್ರಗಳ ಸರ್ವರ ಗಮನ ಸೆಳೆಯುವಂತೆ ಮಾಡಿದ್ದಾರೆ.
ಮಕ್ಕಳ ಪ್ರತಿಭಾ ಕಾರಂಜಿಯ ಕಾರ್ಯಕ್ರಮಗಳಾದ ವಸ್ತು ಪ್ರದರ್ಶನ, ನೃತ್ಯ, ಕ್ರೀಡೆ, ಬಿಸಿಯೂಟ ಯೋಜನೆ, ಕ್ಷೀರಭಾಗ್ಯ, ಉಚಿತ ಬೈಸಿಕಲ್, ಸಮವಸ್ತ್ರ ವಿತರಣೆ, ಅಂದವಾದ ಆಟದ ಮೈದಾನ, ಸುವರ್ಣ ಆರೋಗ್ಯ ಚೇತನ, ಇನ್‌ಸ್ಪಾಯರ್ ಅವಾರ್ಡ್ ಸೇರಿದಂತೆ ಸರಕಾರಿ ಯೋಜನೆಗಳ ಕುರಿತಂತೆ ಅತ್ಯಂತ ಮನಮೋಹಕವಾದ ಚಿತ್ರಗಳನ್ನು ಬಿಡಿಸಿದ್ದಾರೆ. ಕಚೇರಿಯ ಒಳ ಗೋಡೆಗಳ ಮೇಲೆಯೂ ಆಕರ್ಷಕ ಹಾಗೂ ಮನ ಸೆಳೆಯುವ ಚಿತ್ರಗಳನ್ನು ಬಿಡಿಸಿ ಗಮನ ಸೆಳೆಯುವಂತೆ ಮಾಡಿದ್ದಾರೆ. ಬಿಡುವಿನ ಸಮಯವನ್ನು ತಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ವಿನಿಯೋಗಿಸದೇ, ಸಮಯ, ಭತ್ಯೆ ಯಾವುದನ್ನೂ ಲೆಕ್ಕಿಸದೆ ನಿಷ್ಠೆಯಿಂದ ಕಾರ್ಯ ನಿರ್ವಹಿಸಿರುವ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರ ಕಾರ್ಯ ಶ್ಲಾಘನೀಯ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾ ಧಿಕಾರಿ ಉಮಾದೇವಿ ಬಸಾಪೂರ.
ನಾವು ಸಮಯವನ್ನು ಮರಳಿಸಲಾಗಲ್ಲ ಆದರೆ ಆ ಸಮಯದಲ್ಲಿ ಮಾಡಿದ ಸೇವೆ ನಮಗೆ ಆತ್ಮತೃಪ್ತಿ ನೀಡುತ್ತದೆ. ಚಿತ್ರಕಲಾ ಶಿಕ್ಷಕರ ಕಲಾ ನೈಪುಣ್ಯತೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಂದ ಹೆಚ್ಚಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ್ ಕೆ.ಎಫ್. ಶಿಕ್ಷಣ ಸಂಯೋಜಕ ಪುಟ್ಟಪ್ಪ ಭಜಂತ್ರಿ
ಕಲಾಸೇವೆಯಲ್ಲಿ ಭಾಗಿಯಾದವರು : ತಾಲೂಕಿನ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾದ ಸಂಜೀವ ಕಾಳೆ, ಸಿಕಂದರ್ ಹೊಸಳ್ಳಿ, ಶಿವಾನಂದ ಅಂಗಡಿ, ನಿಂಗಪ್ಪ ಕಂಬಾರ, ಅರವಿಂದ ಡಿ, ಸುರೇಶ ಎಸ್, ಪಟ್ಟೇದ್ ಸೇರಿದಂತೆ ತಾಲೂಕಿನ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರು ಈ ಕಲಾ ಸೇವೆಯಲ್ಲಿ ಭಾಗಿಯಾಗಿದ್ದರು.
ವಿವಿಧ ಚಿತ್ರಗಳನ್ನು ಬಿಡಿಸಿ ಬಿಇಒ ಕಚೇರಿ ಜತೆಗೆ ಸುತ್ತಮುತ್ತಲಿನ ವಾತಾವರಣವನ್ನು ಸಾರ್ವಜನಿಕರ ಸ್ನೇಹಿ ಮಾಡಬೇಕೆಂಬ ಆಸೆ ಬಹಳ ವರ್ಷಗಳಿಂದ ಇತ್ತು. ಆದರೆ ಈ ಲಾಕ್‌ಡೌನ್ ಈ ಸೇವೆ ಮಾಡಲು ಅನುವು ಮಾಡಿಕೊಟ್ಟಿದೆ.
–ವಿಜಯಕುಮಾರ ಗಾಯಕವಾಡ, ಚಿತ್ರಕಲಾ ಶಿಕ್ಷಕ