Advertisement
ಸಮಾನತೆಯ ಪಾಠವನ್ನು ನಾವು ಸಣ್ಣ ವಯಸ್ಸಿನಲ್ಲೇ ಕಲಿತಿದ್ದರೂ ಬೆಳೆದು ದೊಡ್ಡವರಾದಂತೆ ಅದನ್ನು ಮರೆತುಬಿಡುತ್ತೇವೆ. ಅದು ಯಾವಾಗ ನಮ್ಮ ಮನದೊಳಗೆ ಬೇರು ಬಿಟ್ಟು ವೃಕ್ಷವಾಗಿರುತ್ತದೋ ಎಂಬುದು ಅರಿವೇ ಆಗಿರುವುದಿಲ್ಲ. ಆದರೆ ಮೇಲು, ಕೀಳು , ಹೆಣ್ಣು, ಗಂಡು , ಜಾತಿ, ಧರ್ಮ, ಕಪ್ಪು, ಬಿಳಿ, ಜಾಣ, ದಡ್ಡ, ಬಡವ ಶ್ರೀಮಂತ ಎಂದು ಹೊಡೆದಾಡ ತೊಡಗಿದಾಗ ಮತ್ತೆ ನಮ್ಮೊಳಗೆ ಸಮಾನತೆಯ ಅರಿವು ಎದ್ದು ನಿಲ್ಲುತ್ತದೆ.
Related Articles
Advertisement
ಯುಗಯುಗಗಳಿಂದ ಗಂಡು, ಹೆಣ್ಣು ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ತಮ್ಮ ಪಾತ್ರವನ್ನು ಸರಿಯಾಗಿಯೇ ನಿರ್ವಹಿಸಿದರೂ ದ್ವೇಷ ಅಸೂಯೆ, ಸ್ಪರ್ಧೆಗಳಿಂದ , ಸಾಮಾಜಿಕ, ಧಾರ್ಮಿಕ ಒತ್ತಡಗಳಿಂದ ಗಂಡು -ಹೆಣ್ಣು ಎಂಬ ತಾರತಮ್ಯ ಮುಂದುವರಿಯುತ್ತಲೇ ಇದೆ. ಆದ್ದರಿಂದ ನಾವು ಇಂದು ಗಂಡು- ಹೆಣ್ಣು ಸರಿಸಮ ಎಂದು ಅರಿತು ಒಪ್ಪಿಕೊಂಡಾಗ ಮಾತ್ರ ಈ ಅಸಮಾನತೆಯನ್ನು ಹೋಗಲಾಡಿಸಬಹುದಾಗಿದೆ.
ಇಂದು ಹೆಣ್ಣಿಗೆ ಸಮಾನತೆ ಸಿಗುತ್ತಾ ಇಲ್ಲ ಎಂದು ಹೋರಾಡಿದರೆ ಗಂಡು ಹಿಂದುಳಿಯಬಹುದು. ಹೀಗಾಗಿ ಹೆಣ್ಣಾಗಲಿ, ಗಂಡಾಗಲಿ ಯಾವುದೇ ಭೇದಭಾವವಿಲ್ಲದೆ ಮುನ್ನಡೆದರೆ ಮಾತ್ರ ಸಮಾನತೆಯನ್ನು ಕಾಯ್ದುಕೊಳ್ಳಬಹುದು.ಎಲ್ಲರಿಗೂ ಅವರವರ ಜಾತಿ ಧರ್ಮಗಳು ಅಷ್ಟೇ ಮಹತ್ವದ್ದಾಗಿವೆ. ಯಾವ ಜಾತಿಯೂ ಪರರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ಆದರೆ ಜನರು ಅದನ್ನು ತಪ್ಪಾಗಿ ಬಳಕೆ ಮಾಡುತ್ತಾರೆ. ನಮ್ಮ ಜಾತಿ, ಧರ್ಮಗಳನ್ನು ಪಾಲಿಸುವುದರೊಂದಿಗೆ ಇತರರ ಜಾತಿ ಧರ್ಮಗಳನ್ನು ಗೌರವಿಸಬೇಕು. ಆಗಲೇ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಯಾಗಲು ಸಾಧ್ಯ. ಎಲ್ಲ ಬಣ್ಣಗಳಂತೆ ಕಪ್ಪು ಬಿಳುಪುಗಳೂ ಬಣ್ಣಗಳು. ಆದರೆ ಕಪ್ಪು ಎಂದಾಗ ತಾರತಮ್ಯ ಬಾರದೇ ಇರಲಾರದು. ಇಂದು ಕಪ್ಪು ಬಣ್ಣದ ಬಟ್ಟೆ ಎಲ್ಲರಿಗೆ ಇಷ್ಟವಾದರೆ ಕಪ್ಪು ಬಣ್ಣದ ಜನರು ಇಷ್ಟವಾಗುವುದಿಲ್ಲ. ಬಣ್ಣಗಳು ಬರೀ ಬಹಿರಂಗವಾಗಿರುವಂತವು. ಆದರೆ ನಾವೆಲ್ಲ ಬೆಲೆ ಕೊಡಬೇಕಾದದ್ದು ಗುಣಗಳಿಗೆ ಬಣ್ಣಗಳಿಗಲ್ಲ. ತಂತ್ರಜ್ಞಾನದ ಯುಗದಲ್ಲಿ ಇಂದು ನಾವಿದ್ದೇವೆ. ಜಾಣತನಕ್ಕೆ ಇಲ್ಲಿ ಪ್ರಮುಖ ಸ್ಥಾನವಿದೆ. ಜಾಣರು ತಮ್ಮ ಜೀವನವನ್ನು ಚೆನ್ನಾಗಿ ರೂಪಿಸಿಕೊಂಡರೆ ಜಾಣರಲ್ಲದವರು ತಮ್ಮ ಜೀವನದಲ್ಲಿ ಜಿಗುಪ್ಸೆಗೊಳಗಾಗುತ್ತಿದ್ದಾರೆ. ಆದ್ದರಿಂದ ಎಲ್ಲರಿಗೂ ಬಾಳಲು ಅವಕಾಶ ಮಾಡಿಕೊಡಬೇಕು. ಆರ್ಥಿಕವಾಗಿ ಸಬಲರಲ್ಲದಿದ್ದರೂ, ಮಾನಸಿಕವಾಗಿ ಎಲ್ಲರೂ ಸಬಲರಾಗುವಂತೆ ಮಾಡಬೇಕು. ಅಸಮಾನತೆಯ ಕಾರಣಗಳನ್ನು ಹುಡುಕಿ ಅವುಗಳಿಗೆ ಪರಿಹಾರ ಯೋಜನೆಯನ್ನು ಮೊದಲು ಮನೆಯಿಂದಲೇ ಪ್ರಾರಂಭಿಸಬೇಕು. ಆಗ ಸಮಾಜದಲ್ಲಿ ಬದಲಾವಣೆ ಖಂಡಿತಾ ಸಾಧ್ಯವಿದೆ.