ಒಂದ ದಿವಸ ಎಲ್ಲರು ಗುಲಾಬಿ ಸೀರೆ ಉಟ್ಕೊಂಡು ಗುಲಾಬಿ ಸಾಡಿಯಾ ಹಾಡಿಗೆ ರೀಲ್ ಮಾಡೋದು, ಇನ್ನೊಂದು ದಿವಸ ಪಾರ್ವತಿ ಕಲ್ಯಾಣ ಕಾರ್ಯಕ್ರಮ ಇರ್ತದಲ್ಲ ಆವತ್ತು ನಮ್ಮ ಸಾಂಪ್ರದಾಯಿಕ ಉಡುಗೆ ಕಚ್ಚಿ ಸೀರಿ ಉಟ್ಕೊಂಡು, ಮುತ್ತಿನ ಆಭರಣ ಹಾಕೊಂಡು ಫೋಟೋ ಸೆಶನ್ ಮತ್ತ ರೀಲ್ ಎರಡೂ ಮಾಡೋದು. ಇಲ್ಲಿ ಸೀರೆ, ಬಳಿ, ಸಿಂಗಾರದ್ದು ಮಾತು.
ಜೋಳದ ನುಚ್ಚು, ಮಸಾಲಾ ಅನ್ನ, ಉಪ್ಪಿನಕಾಯಿ, ಕೋಸಂಬರಿ, ಹೊಳಗಿ, ಮಾವಿನ ಹಣ್ಣಿನ ಶಿಖರಣಿ, ಭಕ್ರಿ, ಹೆಸರಕಾಳು ಪಲ್ಯ, ಉದರ ಬೆಳೆ ಪಲ್ಯ, ಅನ್ನ, ಸಾರು, ಮಜ್ಜಿಗಿ ಇವು ನಮ್ಮ ಸಾಂಪ್ರದಾಯಿಕ ಮಧ್ಯಾಹ್ನ ಊಟಕ್ಕ ಆದ್ರ, ಪಾವ್ ಭಾಜಿ, ಸ್ಯಾಂಡ್ವಿಚ್ , ಪಾನಿ ಪುರಿ, ಸೇವ್ ಪುರಿ, ಕಚೋರಿ, ಅವಲಕ್ಕಿ, ಮಿರ್ಚಿ ಭಜಿ ಸಂಜಿ ಸ್ನ್ಯಾಕ್ಸ್ ಇದು ನಮ್ಮ ಊಟದ ತಯಾರಿ ಮಾತು. ಹಿಂಗೇ ನಾವು ಎಲ್ಲಾರು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸುಮಾರು ಮೂರು ತಿಂಗಳ ಮೊದಲ ಕಾರ್ಯಕ್ರಮದ ಸ್ಥೂಲನಕ್ಷೆ ಹಾಕೊಂಡಿದ್ವಿ. ಕಾರ್ಯಕ್ರಮದ ದಿವಸ ಇರೋ ಖುಷಿಗಿಂತ ದುಪ್ಪಟ್ಟು ಖುಷಿ ಅದರ ಪ್ಲ್ಯಾನಿಂಗ್ ಮತ್ತ ತಯಾರಿನಾಗ ಇರ್ತದ ಅಂತ ನನಗ ಅನಸ್ತದ.
ಎರಡು ವರ್ಷದ ಹಿಂದೆ ನಮ್ಮ ಕುಟುಂಬದ ಒಂದು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಅಲ್ಲಿ ಸುಮಾರು ಮೂರು ತಲೆಮಾರು ಹೆಣ್ಣು ಮಕ್ಕಳನ್ನು ಎಲ್ಲರನ್ನು ಸೇರಿಸಿ ಈ ಸಲ ಎರಡನೇ ಬಾರಿಗೆ ಯಶಸ್ವಿಯಾಗಿ “ತವರು ಮನೆ ಮಿಲನ’ ಕಾರ್ಯಕ್ರಮವನ್ನು ಬತ್ತದ ಉತ್ಸಾಹ, ಪ್ರೀತಿ ಮತ್ತು ಖುಷಿಯಿಂದ ಕಾರ್ಯಗತಗೊಳಿಸಿ ಯಶಸ್ವಿಯಾಗಿಸಿದ್ದು ಈ ಮಿಲನ ಕಾರ್ಯಕ್ರಮದ ರೂವಾರಿ ನಮ್ಮ ಛಾಯಾ ಅತ್ತೆ. ಕುಟುಂಬದ ಎಲ್ಲ ಹೆಣ್ಣು ಮಕ್ಕಳನ್ನು ಒಟ್ಟುಗೂಡಿಸಿ ಅವರಿಗೆ ತವರು ಮನೆ ಅನುಭವ ನೀಡುವುದಲ್ಲದೇ ನಮ್ಮ ಹಿಂದಿನ ತಲೆಮಾರಿನ ಕುಟುಂಬದ ಸದಸ್ಯರನ್ನು ಪರಿಚಯಿಸುವುದು, ಕುಟುಂಬದೊಟ್ಟಿಗಿನ ಸಂಬಂಧವನ್ನು ಬಿಗಿಯಾಗಿಸುವುದು ಈ ನಮ್ಮ ತವರು ಮನೆ, ಕುಟುಂಬ, ಬಾಂಧವ್ಯ ಮಿಲನದ ಕಾರ್ಯಕ್ರಮದ ಮೂಲ ಉದ್ದೇಶ.
ಈ ನಮ್ಮ ಮಿಲನದ ಕಾರ್ಯಕ್ರಮ ಮುಗಿಸಿನೇ ನೀವು ಎಲ್ಲಾರು ಹೆಣ್ಣಮಕ್ಕಳು ನಿಮ್ಮ ಬೇಸಗಿ ರಜಾ ಪ್ಲ್ಯಾನ್ ಮಾಡಿರಿ ಎಂಬುದು ಛಾಯಾ ಅತ್ತೆ ಪ್ರೀತಿಯ ಒತ್ತಾಯ. ಕಳೆದ ಬಾರಿಯೂ ಯಶಸ್ವಿಯಾಗಿದ್ದ ನಾಲ್ಕು ದಿನದ ಬರೀ ಹೆಣ್ಣುಮಕ್ಕಳ ಈ ಸಂತೋಷಕೂಟಕ್ಕೆ ಭಾಗಿಯಾಗಲು ಈ ವರ್ಷ ಇನ್ನೂ ಹೆಚ್ಚಿನ ಜನಸಂದಣಿ. ಬೆಂಗಳೂರು, ಪುಣೆ, ಬಿಜಾಪುರ ಮತ್ತು ಇತರ ಊರುಗಳಿಂದ ಬಂದು ಈ ಸಮಾರಂಭಕ್ಕೆ ನೆರೆದಿದ್ದು ಛಾಯಾ ಅತ್ತೆ ಗುಲ್ಬರ್ಗದ ಮನೆಯಲ್ಲಿ. ನೂರಾರು ಜನರ ಅವಿಭಕ್ತ ಕುಟುಂಬದ ಬಗ್ಗೆ ದಿನಪತ್ರಿಕೆಯಲ್ಲಿ ಓದಿದ್ದು, ಟಿವಿಯಲ್ಲಿ ನೋಡಿದ್ದು, ಯಾರಿಂದಲೋ ಕೇಳುತ್ತಿದ್ದಿದ್ದು, ಅದರ ಆನಂದವನ್ನು ಸವಿಯುವ ಸಮಯ ಒದಗಿ ಬಂದಿದ್ದು ಈ ನಾಲ್ಕು ದಿನದ ಒಂದೇ ಮನೆಯಲ್ಲಿ ಸುಮಾರು 60 ರಿಂದ 70 ಜನರು ನೆರೆದ ಜನಸ್ತೋಮದಲ್ಲಿ.
ಮೊದಲ ದಿನ ಎಲ್ಲರನ್ನು ವಿಶೇಷವಾದ ಹೂವಿನ ಮಾಲೆ ಹಾಕಿ ಮನೆಗೆ ಸ್ವಾಗತಿಸಲಾಯಿತು. ವರ್ಷಾನುಗಟ್ಟಲೇ ನೋಡದ ಸಂಬಂಧಿಕರನ್ನು ಭೇಟಿಯಾದ ಖುಷಿಗೆ ಹೆಂಗಳೆಯರ ಬಿಡುವಿಲ್ಲದ ಮಾತು. ಅವಲಕ್ಕಿ, ಚುರುಮುರಿ, ಸಿಹಿ ತಿಂಡಿಗಳು, ಬಿಸ್ಕತ್ತು, ಕುರುಕಲು ತಿಂಡಿಗಳು ಬಂಧಿಯಾದ ಕೋಣೆಯಲ್ಲಿ ಮಕ್ಕಳೆಲ್ಲರೂ ಬಂಧಿ.
ಮಕ್ಕಳೆಲ್ಲರನ್ನು ಹುಡುಕುತ್ತ ದೊಡ್ಡವರೆಲ್ಲ ಅದೇ ಕೋಣೆಯಲ್ಲಿ ಮುಂದುವರಿದ ಎಡಬಿಡದ ಮಾತು. ಈ ಮೇಲೆ ವಿವರಿಸಿದ ಖ್ಯಾದ್ಯಗಳ ಜತೆಗೆ ಇನ್ನಷ್ಟು ಪದಾರ್ಥಗಳನ್ನೊಳಗೊಂಡ ರುಚಿಯಾದ ಭೋಜನ ಮತ್ತು ಸಂಜೆಯ ಹೊಟ್ಟೆ ಬಿರಿಸುವ ಉಪಹಾರ. ದಿನಾಲೂ ಮಧ್ಯಾಹ್ನದ ಭೋಜನದ ಅನಂತರ ಅಂತಾಕ್ಷರಿ, ಡಂಬ್ ಶರಡೇಸ್, ನೃತ್ಯ ಮತ್ತು ಹಾಡಿನ ಮೋಜು. ಇದರಲ್ಲಿ ಹೆಚ್ಚಿನ ಸಮಯ ಎಲ್ಲರು ಬಯಸಿದ್ದು ಮತ್ತು ನಲಿದಿದ್ದು ಡಂಬ್ ಶರಡೇಸ್ ಆಟದ ಮಸ್ತಿಯಲ್ಲಿ. ಸರಳ ಹಾಸ್ಯದೊಂದಿಗೆ ಸಂಬಂಧ ಅವಾರ್ಡ್ಸ್ ಎಂಬ ಕಿರು ಪ್ರಶಸ್ತಿ ವಿತರಣೆ ಎಲ್ಲರನ್ನು ಚಾಕಲೇಟ್ ಬಹುಮಾನಕ್ಕೆ ಭಾಜನರನ್ನಾಗಿಸಿತ್ತು.
ಎಲ್ಲರಿಗೂ ಕೈತುಂಬಾ ಬಳೆ ತೊಡಿಸಿ, ಲಕ್ಷ್ಮೀ ಪೂಜೆ ಮಾಡಿಸಿ ಆಚಾರ್ಯರಿಂದ ಆಶೀರ್ವಾದ ಮಾಡಿಸಿದರು. ಆ ಡ್ರೆಸ್, ಈ ಸೀರೆ, ರೀಲ್ ಮತ್ತು ಫೋಟೋ ಸೆಶನ್ ಅಂತೂ ನಾಲ್ಕು ದಿನದ ಕಾರ್ಯಕ್ರಮದ ನಿತ್ಯ ಅತಿಥಿಗಳು. ಕಡೆ ದಿನ ಪಾರ್ವತಿ ಕಲ್ಯಾಣಕ್ಕೆ ನಮ್ಮ ಬಳಗದ ಎಲ್ಲ ಸದಸ್ಯರಿಗೆ ಆಹ್ವಾನವಿತ್ತು ವಧು-ವರರ ಮದುವೆ ಕಾರ್ಯಕ್ರಮದಂತೆ ಎಲ್ಲರಲ್ಲಿಯೂ ಹರ್ಷದ ಉತ್ಸಾಹ. ಇಲ್ಲಿ ನಮಗೆ ಗೊತ್ತಿರದ ಯಾವುದೇ ವ್ಯಕ್ತಿಯನ್ನು ಇವರು ನಮಗೆ ಸೋದರತ್ತೆ, ಸೋದರಮಾವ ,ಕಾಕಾ, ಕಾಕು, ಮಾಮ, ಮಾಮಿ, ಭೌಜಿ, ಅಣ್ಣ, ವಹ್ನಿ, ಅಕ್ಕ ಎಂದೇ ಸಂಭೋದಿಸುವುದು.
ಅದೇ ದಿನ ಮನೆಯಲ್ಲಿ ಎಲ್ಲರಿಂದ ಸಂಗೀತ ವಾದ್ಯಗಳೊಂದಿಗೆ ಮನಸ್ಸಿಗೆ ಆಹ್ಲಾದವನ್ನು ನೀಡುವ ಮತ್ತು ದೈವಿಕ ಚೈತನ್ಯವನ್ನು ಕೊಡುವ ಮೂರು ಗಂಟೆಗಳ ಕಾಲ ನಿರಂತರವಾದ ಭಜನೆ. ಹೀಗೆ ಎಲ್ಲರಲ್ಲಿಯೂ ನಮ್ಮ ನಾಲ್ಕು ದಿನಗಳಲ್ಲಿ ನಡೆದ ತವರು ಮನೆ ಮಿಲನದ ಕಾರ್ಯಕ್ರಮ ತ್ವರಿತವಾಗಿ ಕೊನೆಗೊಂಡಿತೆಂಬ ಭಾವ. ಎಲ್ಲರೂ ಭಾರದ ಮನಸ್ಸಿನಿಂದ ಕಳೆದ ಸುಂದರ ಕ್ಷಣಗಳನ್ನು ನೆನೆಯುತ್ತ ಮತ್ತೆ ಮುಂದಿನ ವರ್ಷದ ಈ ಕಾರ್ಯಕ್ರಮಕ್ಕೆ ಇನ್ನೂ ಕೆಲವೇ ದಿನಗಳಲ್ಲಿ ಮತ್ತದೇ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಚರ್ಚೆ ಶುರುವಿಟ್ಟುಕೊಳ್ಳುವ ಭರವಸೆಯೊಂದಿಗೆ ವಿದಾಯ ಹೇಳಿದರು.
ನಾನು ಮೊದಲೇ ಹೇಳಿದಂತೆ ನಾವೆಲ್ಲರೂ ಸೇರಲೆಂದು ಅತೀ ಪ್ರೀತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿ, ಅನೇಕ ಪೂರ್ವ ಸಿದ್ಧತೆಗಳನ್ನು ಮಾಡಿ, ಹಲವಾರು ಜನರ ಸಹಾಯದಿಂದ ಇದನ್ನು ಅನುಷ್ಠಾನಗೊಳಿಸಿ, ಪೂರ್ತಿಯಾಗಿ ಯಶಸ್ವಿಗೊಳಿಸಿದ್ದು ಈ ಕಾರ್ಯಕ್ರಮದ ರೂವಾರಿ ಛಾಯಾ ಅತ್ತೆ. ಅದು ತಮ್ಮ ಮನೆಯಲ್ಲಿಯೇ ಇಷ್ಟೆಲ್ಲ ಜನರಿಗೆ ವ್ಯವಸ್ಥೆ ಮಾಡಿದ್ದು ಅಸಾಮಾನ್ಯ ಕಾರ್ಯವೇ ಸರಿ. ಪ್ರೀತಿ ಹಂಚಿಕೊಂಡಷ್ಟು ಹೆಚ್ಚು ಎಂಬುದಕ್ಕೆ ಇಲ್ಲಿ ನೆರೆದ ಜನಜಂಗುಳಿ ಸಾಕ್ಷಿ. ಈ ಕಾರ್ಯದಲ್ಲಿ ಅನೇಕ ಜನರ ಶ್ರಮವಿದ್ದು ಪ್ರತಿಯೊಬ್ಬರೂ ಅಷ್ಟೇ ಪ್ರೀತಿ ಮತ್ತು ಮುತುವರ್ಜಿಯಿಂದ ಈ ಮಹೋತ್ಸವದ ಪಾಲುದಾರರಾಗಿದ್ದಾರೆ. ಈ ನಾಲ್ಕು ದಿನದ ಸಂಭ್ರಮದಲ್ಲಿ ರಿಕ್ತವಾದ ಭಾವ ಮೂಡಿದ್ದು ದಿವಂಗತ ಅರುಣ ಮಾಮ ಅವರ ಗೈರು.
ಕೊನೆಯ ದಿನದಂದು ನಮ್ಮ ಕುಟುಂಬದ ಹಿರಿಯರಾದ ಪ್ರಕಾಶ ಮಾಮ, ಪಂಕಜಾ ಮಾಮಿ, ಕಿಟ್ಟು ಕಾಕಾ, ಉಷಾ ಕಾಕು, ರವಿ ಕಾಕಾ, ಜ್ಯೋತಿ ಕಾಕು, ಉಡುಪಿ ಕಾಕಾ, ಗೀತಾ ಅತ್ತೆ, ರಾಮು ಕಾಕಾ, ಅಲ್ಕಾ ಕಾಕು, ಪರಿಮಳ ಅತ್ತೆ, ಕಲ್ಲಾ ಮಾಮಾ, ದುಂಬಕ್ಕ, ಮುನ್ನಕ್ಕ, ಗಿರೀಶ ಮಾಮಾ ಮತ್ತು ಇತರ ಹಿರಿಯರ ಉಪಸ್ಥಿತಿಯಿಂದ ಸಂಭ್ರಮದ ಖುಷಿ ದ್ವಿಗುಣಗೊಂಡಿತ್ತು. ಅಕ್ಷರಗಳಲ್ಲಿ ಇಕ್ಕಟ್ಟಾಗಿ ಹಿಡಿಯಲಾಗದ ಸಂಭ್ರಮವನ್ನು ಅನುಭವಿಸಿದರೇ ಚೆಂದ. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬ ಕಗ್ಗದ ಸಾಲಿನಂತೆ ಹಿರಿಯರ ಗಟ್ಟಿಯಾದ ಬಾಂಧವ್ಯ ಮತ್ತು ಅಕ್ಕರೆಯಲ್ಲಿ ಕಿರಿಯರು ತಮ್ಮ ಮುಂದಿನ ಭವಿಷ್ಯವನ್ನು ಭದ್ರವಾಗಿಸಿ ಜೀವನದ ಯಾನವನ್ನು ಪರಿಪೂರ್ಣವಾಗಿಸಬಹುದು.
*ಶಿಲ್ಪಾ ಕುಲಕರ್ಣಿ, ಜರ್ಮನಿ