Advertisement

Desi Swara: ಲಿಂಕನ್‌ ನಗರದ ಅನೂಹ್ಯ ಹಬ್ಬ “ಸ್ಟೀಂ ಪಂಕ್‌’

05:51 PM Sep 09, 2023 | Team Udayavani |

ಹಬ್ಬಗಳೆಂದರೆ ಸಂಭ್ರಮ, ಆಚರಣೆ, ಖುಷಿ ಎಲ್ಲದರ ಕೂಡುವಿಕೆ. ನಮ್ಮ ನಮ್ಮ ಊರಿನ ಜಾತ್ರೆಗಳನ್ನೇ ನೋಡಿ, ಅದೆಷ್ಟು ಮಂದಿ ಊರ ದೇವರ ಮೆರವಣಿಗೆಯಲ್ಲಿ ನೆರೆದಿರುತ್ತಾರೆ. ಊರ ಜಾತ್ರೆಗೆಂದೇ ಊರನ್ನು ಬಿಟ್ಟು ಪರ ಊರಿನಲ್ಲಿ ನೆಲೆಸಿರುವವರೂ ವರ್ಷಕ್ಕೊಮ್ಮೆ ಬರುವ ಹಬ್ಬದಲ್ಲಿ ಹಾಜರಿರುತ್ತಾರೆ. ಹೀಗೆಯೇ ಇಂಗ್ಲೆಂಡ್‌ನ‌ಲ್ಲಿಯೂ ಪ್ರತೀ ವರ್ಷ ಒಂದು ಹಬ್ಬ ನಡೆಯುತ್ತದೆ. ಈ ಹಬ್ಬವನ್ನು ಕಣ್ತುಂಬಿಕೊಳ್ಳ ಬೇಕೆಂದೇ ವಿಶ್ವಾದ್ಯಂತದಿಂದ ಜನರು ಆಗಮಿಸುತ್ತಾರೆ. ವರ್ತಮಾನವನ್ನು ಬದಿಗಿರಿಸಿ, 19ನೇ ಶತಮಾನದ ವಾತಾವರಣವನ್ನು ಸೃಷ್ಟಿಸುವುದೇ ಈ ಹಬ್ಬದ ವಿಶೇಷತೆ.

Advertisement

ಕಳೆದ ವಾರ, ಆಗಸ್ಟ್‌ 25 ರಿಂದ 28ರವರೆಗೆ ಇಂಗ್ಲೆಂಡಿನ ಲಿಂಕನ್‌ ನಗರದಲ್ಲಿ ವಿಶ್ವ ಪ್ರಸಿದ್ಧವಾದ ಒಂದು ಹಬ್ಬ ನಡೆಯಿತು. ಆದರೆ ಇದು ಸಾಂಪ್ರದಾಯಿಕ, ಧಾರ್ಮಿಕ ಹಬ್ಬವಲ್ಲ. ಬದಲಿಗೆ, ಅತ್ಯಂತ ವಿಶಿಷ್ಟವಾದ, ವಿಶೇಷವಾದ ಮತ್ತು ಅನೂಹ್ಯ ರೀತಿಯ ಹಬ್ಬ. ಈ ಹಬ್ಬಕ್ಕೆ ವಿಶ್ವದ ಎಲ್ಲೆಡೆಯಿಂದ ಜನರು ಬರುತ್ತಾರೆ. ಈ ವರ್ಷ 50,000 ಕ್ಕೂ ಹೆಚ್ಚು ಜನರು ಈ ಹಬ್ಬದಲ್ಲಿ ಪಾಲ್ಗೊಂಡರು. ಈ ಹಬ್ಬದ ಹೆಸರು “ಸ್ಟೀಂ ಪಂಕ್‌’!

ಸ್ಟೀಂ ಎಂದರೆ ಹಬೆ. ಪಂಕ್‌ ಎಂದರೆ ಜೋರಾಗಿ, ತ್ವರಿತವಾಗಿ ಹರಿಯುವ ರಾಕ್‌ ಮ್ಯೂಸಿಕ್‌. ಅಥವಾ ಅದನ್ನು ಇಷ್ಟಪಡುವ ವ್ಯಕ್ತಿ.

1837-10901ರ ಕಾಲವನ್ನು ಇಂಗ್ಲೆಂಡಿನ ವಿಕ್ಟೋರಿಯನ್‌ ಕಾಲ ಎಂದು ಪರಿಗಣಿಸಲಾಗುತ್ತದೆ. 19ನೇ ಶತಮಾನದಲ್ಲಿ ಈ ಹಬೆಯ ಶಕ್ತಿಯನ್ನು ವೈಭವೀಕರಿಸಿ, ವೈಜ್ಞಾನಿಕ ವಿಚಾರಗಳನ್ನು ಬೆರೆಸಿ, ಊಹಾತೀತ ಕಾಲ್ಪನಿಕ ವಿಚಾರಗಳು ಹರಿದಾಡಿದವಂತೆ. ಅದನ್ನೇ ವಿಚಾರವಾಗಿಟ್ಟುಕೊಂಡು 19 ನೇ ಶತಮಾನದ ಸಮಾಜದ ಐತಿಹಾಸಿಕ ಅಥವಾ ಕಾಲ್ಪನಿಕ ವಿಜ್ಞಾನವನ್ನು ಸೇರಿಸಿ ಈ ಹಬ್ಬದ ಆಚರಣೆ ಶುರುವಾಗಿದ್ದು 1987ರಲ್ಲಿ. ಕಳೆದ 13 ವರ್ಷಗಳಲ್ಲಿ ಈ ಹಬ್ಬದ ಸಡಗರ ಲಿಂಕನ್‌ ನಗರದಲ್ಲಿ ಹೆಚ್ಚಾಗುತ್ತಲೇ ಹೋಗಿದೆಯಂತೆ.


ಈ ಹಬ್ಬ ಕಾಲ್ಪನಿಕ ನಂಬಿಕೆಗಳನ್ನು ಆಧರಿಸಿ ನಡೆಯುತ್ತದೆ. ಜನರು ವಿಕ್ಟೋರಿಯನ್‌ ಕಾಲದ ವೇಷಗಳಲ್ಲಿ ಅಲಂಕೃತರಾಗುತ್ತಾರೆ. ವರ್ತಮಾನದ ಜಂಜಡಗಳಿಂದ ಹಿನ್ನಡೆದು 19ನೇ ಶತಮಾನದ ವಾತಾವರಣ ಸೃಷ್ಟಿಸಿಕೊಂಡು ತಿರುಗಾಡುತ್ತಾರೆ. ಖುಷಿಪಡುತ್ತಾರೆ.

ಈ ಹಬ್ಬದಲ್ಲಿ ಪಾಲ್ಗೊಂಡು ವಿಕ್ಟೋರಿಯನ್‌ ಕಾಲದ ಪಾತ್ರಗಳಾಗುವ ಜನರು ಸ್ಟೀಂ ಪವರ್‌ನ ಬಗ್ಗೆ ಆಗ ಇದ್ದಂತ ಎಲ್ಲ ಕಾಲ್ಪನಿಕ ವೈಜ್ಞಾನಿಕ ಫ್ಯಾಂಟಸಿಗಳನ್ನು ಅಕ್ಷರಶಃ ಮೂರ್ತರೂಪಕ್ಕೆ ತರುತ್ತಾರೆ. ಅಂದರೆ ಗತಕಾಲದ ವೇಷಧಾರಿಗಳಾಗಿ ಹೊಸ ಅಂದರೆ ಹಳೆಯ ಪ್ರಪಂಚವೊಂದನ್ನು ಸೃಷ್ಟಿಸಿಕೊಳ್ಳುತ್ತಾರೆ.

Advertisement

ಲಿಂಕನ್‌ ನಗರದಲ್ಲಿ ಪ್ರಪಂಚದ ಅತ್ಯಂತ ದೊಡ್ಡ ಸ್ಟೀಂ ಪಂಕ್‌ ಹಬ್ಬ ನಡೆಯುತ್ತದೆ. ಸಾವಿರಾರು ಮೈಲಿಗಳನ್ನು ಕ್ರಮಿಸಿ, ಈ ಹಬ್ಬದಲ್ಲಿ ಪಾಲ್ಗೊಳ್ಳಲು ಜನರು ನಾನಾ ದೇಶಗಳಿಂದ ಆಗಮಿಸುತ್ತಾರೆ. ಪ್ರಸ್ತುತ ನಾವಿರುವುದು ಇದೇ ನಗರದಲ್ಲಿ. ಹಾಗಾಗಿ ಅತ್ಯಂತ ಆಸಕ್ತಿಯಿಂದ ಒಂದಲ್ಲ ಎಂದು ಎರಡು ದಿನಗಳ ಕಾಲ ಈ ಹಬ್ಬದ ಸಡಗರದಲ್ಲಿ ನಾವೂ ಭಾಗಿಯಾಗಿದ್ದೆವು.

ಇಂತಹ ಕಾಲ್ಪನಿಕ ಕಥೆಯಲ್ಲಿ ಪಾತ್ರವಾಗಲು ಬಯಸುವ ಜನರನ್ನು, ವಿಕ್ಟೋರಿಯನ್‌ ಕಾಲದ ಬೀದಿಗಿಳಿಸಿ ಕಾಲವನ್ನು ಹಿಂದಕ್ಕೆ ತಿರುಗಿಸಿ, ವಾಸ್ತವದಿಂದ ಪಲಾಯನಗೊಂಡು ಸುಖಿಸುವ ಹಬ್ಬವೇ ಲಿಂಕನ್‌ ನಗರದ ಸ್ಟೀಂ ಪಂಕ್‌ ಎನ್ನುವ ಈ ಫೆಸ್ಟಿವಲ್ . ಹಾಗಾದರೆ ಅದಕ್ಕೆ ಸೂಕ್ತ ಪರಿಸರವೂ ಬೇಕಾದೀತು ಅಲ್ಲವೇ? ಲಿಂಕನ್‌ ನಗರದಲ್ಲಿ ಕೋಟೆ ಕೊತ್ತಲಗಳೂ, ಕಲ್ಲಿನ ರಸ್ತೆಗಳೂ, ಮತ್ತು ಕ್ಯಾಥಿಡ್ರಲ್‌ಗ‌ಳಿರುವ ಸಂಕೀರ್ಣವಿದೆ. ಅದರ ಸುತ್ತಮುತ್ತಲ ಜಾಗದಲ್ಲಿ ಈ ಹಬ್ಬ ನಡೆಯುತ್ತದೆ. ಹೀಗಾಗಿ ಹತ್ತೂಂಬತ್ತನೇ ಶತಮಾನದ ಸೃಷ್ಟಿಗೆ ನೈಜತೆಯ ಮತ್ತೂಂದು ಆಯಾಮದ ಜೋಡಣೆಯಾಗುವುದು ಸುಳ್ಳಲ್ಲ.


ಸೈ-ಫೈ ಥ್ರಿಲ್ಲರ್‌ಗಳ ಅಭಿಮಾನಿಗಳಿಗಂತೂ ಈ ಹಬ್ಬದ ಬಗ್ಗೆ ದಣಿಯದ ದಾಹ. ಪ್ರತೀ ವರ್ಷ ಮಕ್ಕಳೂ ಇದರಲ್ಲಿ ಭಾಗಿಯಾಗುವ ಕಾರಣ ಹೊಸ ತಲೆಮಾರಿನವರು ಈ ಆಚರಣೆಯನ್ನು ಜೀವಂತವಾಗಿಡುವಲ್ಲಿ ಯಶಸ್ವಿಯಾಗಿದ್ದಾ ರೆ. ಹಳೆ ತಲೆಮಾರಿನವರು ಅವರ ಹೃದಯಕ್ಕೆ ಹತ್ತಿರವಾದ ಕಾಲ್ಪನಿಕ ಪಾತ್ರಗಳ ಧಿರಿಸನ್ನು ತೊಟ್ಟು ಅಡ್ಡಾಡುತ್ತಾರೆ. ಅವರದೇ ಶೋ ಕೂಡ ನಡೆಯುತ್ತದೆ. ಪುರಾತನ ಅಥವಾ ಆ್ಯಂಟಿಕ್‌ ಎನ್ನುವ ಎಲ್ಲ ವಸ್ತುಗಳಿಗೂ ಇಲ್ಲಿ ಜೀವ ಬರುತ್ತದೆ. ಅಂತಹದ್ದೇ ವಸ್ತಗಳ ಮಾರಾಟ ಮಳಿಗೆಗಳು ಜೋರು ವ್ಯಾಪಾರ ನಡೆಸುತ್ತವೆ. ಬೀಯರ್‌ ಮತ್ತು ಮದ್ಯಗಳು ಕೋಡಿಯಾಗಿ ಹರಿಯುತ್ತವೆ. ಈ ರೀತಿಯ ಹಬ್ಬಗಳಲ್ಲಿ ಪಾಲ್ಗೊಳ್ಳುವ ಜನರನ್ನು ನೋಡಿ ಕಣ್ತುಂಬಿಕೊಳ್ಳಲು ಇಡೀ ಊರೇ ಈ ಹಬ್ಬಕ್ಕೆ ಬರುತ್ತದೆ. ಹಗಲು ರಾತ್ರಿಯೆನ್ನದೆ ಬರೋಬ್ಬರಿ ನಾಲ್ಕು ದಿನಗಳ ಕಾಲ ಈ ಜಾತ್ರೆಯಂತಹ ಸಂಭ್ರಮ ನಡೆಯುತ್ತದೆ.

ಸ್ಟೀಂ ಪಂಕ್‌ ಮಾರ್ಕೆಟ್‌
ರಸ್ತೆಯ ಬದಿಯಲ್ಲಿನ ಮಾರು ಮಳಿಗೆ ತಳ್ಳುಗಾಡಿಗಳಲ್ಲಿ ವಿಕ್ಟೋರಿಯನ್‌ ಶೈಲಿಯ ಬಾಟಲುಗಳಲ್ಲಿ ಮಧ್ಯ, ಮಧು, ಉಪ್ಪಿನಕಾಯಿಗಳು ಮಾರಾಟವಾಗುತ್ತವೆ. ಹತ್ತೊಂಬತ್ತನೇ ಶತಮಾನದ ರೀತಿಯ ಧಿರಿಸುಗಳು ಕೂಡ ಮಾರಲ್ಪಡುತ್ತವೆ. ಪಕ್ಷಿಗಳನ್ನು ಹಿಡಿದು ತಂದು ಕುತೂಹಲಕಾರಿ ಮಕ್ಕಳಿಗೆ ತೋರಿಸುತ್ತಾರೆ. ತಲೆಗೆ ಎಲೆ ಕೂಡಿಸಿ ಅವರ ಮುಖದ ಮೇಲೆ ನಗು ತರಿಸುತ್ತಾರೆ. ಈ ಎಲ್ಲ ವಿಹಂಗಮ ದೃಶ್ಯಗಳನ್ನು ಕಣ್ಣುಗಳಲ್ಲಿ ತುಂಬಿಕೊಂಡು ರಸ್ತೆಗಳಲ್ಲಿ ಅಡ್ಡಾಡಲು ಪ್ರವೇಶ ಧನವೇನೂ ಇಲ್ಲ, ಆದರೆ ದೊಡ್ಡ ಸಭಾಂಗಣಗಳಲ್ಲಿ ನಡೆಯುವ ವಸ್ತ್ರ ವಿನ್ಯಾಸ, ಕಲೆ ಮತ್ತು ಸಾಹಿತ್ಯ ಪ್ರದರ್ಶನ, 19 ನೇ ಶತಮಾನದ ಸಂಗೀತ ಮತ್ತು ನೃತ್ಯ ಪ್ರದರ್ಶನ ಇತ್ಯಾದಿ ಶೋಗಳಿಗೆ ಪ್ರವೇಶ ಶುಲ್ಕವಿದೆ. ಫ್ಯಾಶನ್‌ ಮತ್ತು ಕಾಮಿಡಿ ಶೋಗಳು ಕೂಡ ನಡೆಯುತ್ತವೆ. ಹಬ್ಬಕ್ಕೆ ಮುಂಚಿತವಾಗಿಯೇ ಅದೆಷ್ಟೋ ಶೋಗಳು “ಸೋಲ್ಡ್ ಔಟ್‌’ ಆಗಿ ಬಿಡುತ್ತವೆ.

ಕೈಗಾರಿಕಾ ಕ್ರಾಂತಿ ಮತ್ತು ಸೈ-ಫೈ ಎರಡೂ ವಿಷಯಗಳನ್ನು ಆಧರಿಸಿ ನಡೆವ ಈ ಹಬ್ಬದಲ್ಲಿ ಜನರು ಕಾಲದಲ್ಲಿ ಹಿಂದೆ ನಡೆಯಲು ಬಯಸಿದರೆ, ಸೈಬರ್‌ ಪಂಕ್‌ ಎನ್ನುವ ಪದ ಜನರು ಕಾಲದಲ್ಲಿ ಮುನ್ನೆಡುದು ಖುಷಿಪಡುವ ಮತ್ತೂಂದು ಹಬ್ಬವಂತೆ. ಒಟ್ಟಿನಲ್ಲಿ ಮನುಷ್ಯ ವರ್ತಮಾನದಿಂದ ಮುಕ್ತಗೊಂಡು ಬೇರೊಂದು ಲೋಕದಲ್ಲಿರಲು ಛದ್ಮವೇಷಧಾರಿಗಳಾಗಿ ಸಂಚರಿಸುತ್ತ ಬೆರಗನ್ನು ಹುಟ್ಟಿಸಿಬಿಡುತ್ತಾರೆ.

ಇನ್ನು ಕೆಲವರು ಪಂಕ್‌ಗಳು ಲೈವ್‌ ಬ್ಯಾಂಡ್‌, ಕಿರು ಚಿತ್ರಗಳು ಇತ್ಯಾದಿಗಳನ್ನು ಕೂಡ ಪ್ರದರ್ಶನಕ್ಕಿಡುತ್ತಾರೆ. ಆದರೆ ಅದು ಕೂಡ ಹಬ್ಬದ ನಿಯಮಕ್ಕೆ ತಕ್ಕಂತೆ. ಉದಾಹರಣೆಗೆ, ಟಿ.ವಿ.ಗೆ ಹಿತ್ತಾಳೆಯ ಕವಚವನ್ನು ಹೊದಿಸಿ ಅದನ್ನೂ ಕಾಲದಲ್ಲಿ ಹಿಂದಕ್ಕೆ ಸರಿಸುತ್ತಾರೆ. ನಮ್ಮ ದಿನನಿತ್ಯದ ಬಳಕೆಯ ವಸ್ತುಗಳನ್ನು ಅವರು ನಿಯೊ-ವಿಕ್ಟೋರಿಯನ್‌ ಶೈಲಿಗೆ ಅಳವಡಿಸಿ ತರುತ್ತಾರೆ. ಒಟ್ಟಿನಲ್ಲಿ ಕಟ್ಟಾ ಸ್ಟೀಂ ಪಂಕ್‌ಗಳು ಇಂದಿನ ಕಾಲದ ಪ್ರಾಪಂಚಿಕ ವಸ್ತುಗಳನ್ನು ಕೂಡ ಮೋಹಕ ಕಾಲ್ಪನಿಕತೆಯಲ್ಲಿ ನೋಡಲು ಇಷ್ಟಪಡುವುದನ್ನು ನೋಡಬಹುದು.

ಈ ಹಬ್ಬ 1987 ರಲ್ಲಿ ಶುರುವಾಯಿತು ಎನ್ನಲಾದರೂ, ಕೆಲವರು 1950ರ ವೇಳೆಗಾಗಲೇ ಅದು ಶುರುವಾಗಿತ್ತು ಎಂದು ಕೂಡ ಹೇಳುತ್ತಾರೆ. ಸ್ಟೀಂ ಪಂಕ್‌ ಹಬ್ಬ ಜಪಾನಿನಲ್ಲೂ ನಡೆಯುತ್ತದೆ. ಅದು ಅವರ ಕಾಮಿಕ್‌ ಮಂಗಾದ ಪಾತ್ರಗಳ ರೂಪದಲ್ಲಿರುತ್ತದೆ.

ಇನ್ನೂ ಮುದದ ವಿಚಾರವೆಂದರೆ, ಇಂದಿನ ಟಿ.ವಿ.ಯ ಹಲವು ಸರಣಿಗಳಲ್ಲಿ ಹಬೆಯ ಶಕ್ತಿಯನ್ನು ಆಧರಿಸಿ ನಿರ್ಮಿಸಿದ ಹಲವು ಕಾಲ್ಪನಿಕ ಉಪಕರಣಗಳು ಮತ್ತು ಪಾತ್ರಗಳನ್ನು ನಾವು ಇಂದಿಗೂ ನೋಡುತ್ತೇವೆ. ಹಲವರನ್ನು ಸ್ಟೀಂ ಪಂಕ್‌ ವ್ಯಕ್ತಿತ್ವದವರು ಎಂದು ಕೂಡ ವರ್ಣಿಸಬಹುದಂತೆ.

ಚಿತ್ರಗಳನ್ನು ನೋಡಿದಾಗ ಮಾತ್ರವೇ ಹಬ್ಬದ ಪೂರ್ಣ ಚಿತ್ರಣ ನಮ್ಮ ಕಣ್ಣುಗಳಿಗೆ ಗೋಚರಿಸುವುದು!

ಡಾ| ಪ್ರೇಮಲತಾ ಬಿ. ಲಿಂಕನ್‌, ಯುಕೆ

Advertisement

Udayavani is now on Telegram. Click here to join our channel and stay updated with the latest news.

Next