ನಮಗೆ ಕಾಶಿ, ವಾರಾಣಸಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿಯವರ ಮನೆಗೆ ಭೇಟಿ ನೀಡುವ ಸದಾವಕಾಶ ಕಳೆದ ವರ್ಷ ಸಿಕ್ಕಿತ್ತು. ಶಾಸ್ತ್ರಿ ಅವರ ಮನೆಯ ದರ್ಶನ ನಿಜವಾಗಿಯೂ ಅದ್ಭುತ ಅನುಭವ ಕೊಟ್ಟಿತು. ಇತ್ತೀಚೆಗೆ ಅವರ ಜನ್ಮದಿನದಂದು ಅದು ಮತ್ತೆ ನೆನಪಿಗೆ ಬಂದಿತು.
ಬಹುತೇಕ ಜನರು ಕಾಶಿ ವಿಶ್ವನಾಥ ಮತ್ತು ಕಾಳಭೈರವ ಮುಂತಾದ ಪ್ರಸಿದ್ಧ ದೇವಾಲಯಗಳಿಗಾಗಿ ವಾರಾಣಸಿಯನ್ನು ತಿಳಿದಿದ್ದಾರೆ. ಆದರೆ ಭಾರತದ ಮಹಾನ್ ನಾಯಕರೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪೂರ್ವಜರ ಮನೆ ಇಲ್ಲಿರುವುದು ತೀರ ಸ್ವಲ್ಪ ಜನಕ್ಕೆ ಮಾತ್ರ ಗೊತ್ತಿದೆ.
ವಾರಣಾಸಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಐತಿಹಾಸಿಕ ಮನೆಗೆ ಹೋಗುವ ದಾರಿಯಲ್ಲಿ ನಮಗೆ ಯಾವುದೇ ಬೋರ್ಡ್ ಅಥವಾ ಮಾರ್ಗದರ್ಶಕ ಫಲಕಗಳು ಎಲ್ಲಿಯೂ ಕಂಡುಬರುವುದಿಲ್ಲ. ನಾವು ಸಣ್ಣ, ಸಣ್ಣ ಓಣಿಗಳಲ್ಲಿ ತಿರುವುಗಳಲ್ಲಿ ಸ್ಥಳೀಯರನ್ನು ಕೇಳಿ ಮಾರ್ಗದರ್ಶನ ಪಡೆಯಬೇಕಾಯಿತು.
ದೇಶದ ಪ್ರಧಾನಿಯಾಗಿದ್ದವರ ಮನೆಯನ್ನು ಸ್ಮಾರಕ ವಾಗಿಸುವಲ್ಲಿ ಸರಕಾರಗಳು ಯಾವುದೇ ಆಸಕ್ತಿ ವಹಿಸದೇ ಇರುವುದು ವಿಷಾದ. ಇಲ್ಲಿಗೆ ಬರಲು ದಾರಿದರ್ಶನವನ್ನು ಒದಗಿಸಲು ಕನಿಷ್ಠ ಸೂಚನ ಫಲಕಗಳನ್ನು ಬೋಡ್ಗಳನ್ನು ಹಾಕಿಸುತ್ತಾರೆ ಎಂಬುದನ್ನು ನಾವು ನಿರೀಕ್ಷಿಸಬಹುದೇ?
ಈ ಮನೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಉಪಯೋಗಿಸಿದ ಕುರ್ಚಿ, ಮಲಗುತ್ತಿದ್ದ ಕೋಣೆ, ಅವರ ಜೀವನದ ವಿವಿಧ ಪ್ರಮುಖ ಹಂತಗಳ ಫೋಟೋಗಳನ್ನು ಕಾಣಬಹುದು.
ಅವರ ಸರಳತೆ, ಶಕ್ತಿ, ಮತ್ತು ಅಚ್ಚುಕಟ್ಟಿನ ಅರ್ಥವನ್ನು ನಮಗೆ ತೋರಿಸಿದ ನಾಯಕರಾದ ಲಾಲ್ ಬಹದ್ದೂರ್ ಶಾಸ್ತ್ರಿಜೀಯವರನ್ನು ನೆನಪಿಸಿ ಗೌರವಿಸೋಣ.
*ಬೆಂಕಿ ಬಸಣ್ಣ , ನ್ಯೂಯಾರ್ಕ್