ಕತಾರ್:ಕರ್ನಾಟಕ ಸಂಘ ಕತಾರ್‌ನ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ನೂತನ ಸಮಿತಿಯ ಚೊಚ್ಚಲ ಕಾರ್ಯಕ್ರಮವಾಗಿ ಜೂ.5ರಂದು ಸಾಂಕೇತಿಕವಾಗಿ ಅಲ್ ಹಂಡಸಾ ವಸತಿ ಸಮುಚ್ಚಯದಲ್ಲಿ ಸಂಘದ ಕಾರ್ಯಕಾರಿ ಮಂಡಳಿ ಹಾಗೂ ಸಲಹಾ ಸಮಿತಿಯ ಸದಸ್ಯರು ಮತ್ತು ಅಧ್ಯಕ್ಷರ ಸಮ್ಮುಖದಲ್ಲಿ ಗಿಡ ನೆಡುವ ಮೂಲಕ ಚಾಲನೆಗೊಂಡಿತು.
ಕಾರ್ಯಕ್ರಮದ ಭಾಗವಾಗಿ ಜೂನ್ 7ರಂದು ಬ್ರಿಲಿಯಂಟ್ ಇಂಡಿಯನ್ ಇಂಟರ್‌ನ್ಯಾಶನಲ್ ಸ್ಕೂಲ್ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮದೊಂದಿಗೆ, ಮಕ್ಕಳಿಗೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಒಟ್ಟು 72 ಸ್ಪರ್ಧಿಗಳು ಭಾಗವಹಿಸಿದ್ದು ಎಲ್ಲ ಮಕ್ಕಳು ತಮ್ಮ ಅದ್ಭುತ ಚಿತ್ರಕಲಾ ಪ್ರತಿಭೆಯಿಂದ ಗಮನ ಸೆಳೆದರು. ಅತಿಥಿ ತೀರ್ಪುಗಾರರಾದ ವೈಷ್ಣವಿ ಶ್ರೀನಿವಾಸನ್ ಅವರು ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದರು.
ಸಂಘದ ಉಪಾಧ್ಯಕ್ಷರಾದ ರಮೇಶ ಕೆ.ಎಸ್. ಅವರು ಸ್ವಾಗತ ಭಾಷಣ ಮಾಡಿದರು. ಅಧ್ಯಕ್ಷರಾದ ಎಂ. ರವಿ ಶೆಟ್ಟಿಯವರು ಇಂದಿನ ಪರಿಸರದ ಉಳಿವಿನ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮಕ್ಕೆ ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷರಾದ ಪಿ.ಎನ್.ಬಾಬುರಾಜನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಗಿಡಗಳನ್ನು ನೀಡಿ ಪರಿಸರದ ಕಡೆಗೆ ಕಾಳಜಿ ಹಾಗೂ ಸಂರಕ್ಷಣೆ ಮಾಡುವಂತೆ ಪ್ರೋತ್ಸಾಹಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸಂಘದ ಸಲಹಾ ಸಮಿತಿಯ ಅಧ್ಯಕ್ಷರಾದ ಮಹೇಶ್ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷರಾದ ಮಿಲನ್ ಅರುಣ್, ಸಲಹಾ ಸಮಿತಿಯ ಸದಸ್ಯರುಗಳಾದ ಅರುಣ್ ಕುಮಾರ್, ಮಧು ಎಚ್.ಕೆ., ಡಾ| ಸಂಜಯ ಕುದರಿ, ಸಂಘದ ಸದಸ್ಯರ ಜತೆಗೆ ಕರ್ನಾಟಕ ಮೂಲದ ಭ್ರಾತೃ ಸಂಘಗಳ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು ಪಾಲ್ಗೊಂಡು ಪುಟಾಣಿಗಳಿಗೆ ಪ್ರೋತ್ಸಾಹ ನೀಡಿದರು.
ಸಂಘದ ಪರಿಸರ ಮತ್ತು ವ್ಯವಸ್ಥಾಪಕ ಕಾರ್ಯದರ್ಶಿಗಳಾದ ಶಶಿಧರ್ ಎಚ್.ಬಿ. ಅವರು ಸಮಾರೋಪ ಸಮಾರಂಭದ ನಿರೂಪಣೆಯ ಜತೆಗೆ ಪರಿಸರ ದಿನಾಚರಣೆಯನ್ನು ಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಸಂಘದ ಜಂಟಿ ಕಾರ್ಯದರ್ಶಿಗಳಾದ ಎಲ್. ಜಿ. ಪಾಟೀಲ್ ಅವರು ವಂದನಾರ್ಪಣೆಯನ್ನು ಮಾಡಿದರು. ಮಹಿಳಾ ಮತ್ತು ಮಕ್ಕಳ ಕಾರ್ಯದರ್ಶಿಗಳಾದ ಭುವನಾ ಸೂರಜ್ ಅವರ ಜತೆಗೆ ಸಮಿತಿಯ ಎಲ್ಲ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.