Advertisement

Desi Swara: ಕನ್ನಡ ಕಂಪಿನ ಪರ್ವ ಕರ್ನಾಟಕ ರಾಜ್ಯೋತ್ಸವ 2024

01:19 PM Nov 30, 2024 | Team Udayavani |

ಕುವೈಟ್‌ ಕನ್ನಡ ಕೂಟ ಅರ್ಪಿಸುವ “ಕರ್ನಾಟಕ ರಾಜ್ಯೋತ್ಸವ’ ಹಾಗೂ 40ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ “ಕನ್ನಡ ಕಂಪಿನ ಪರ್ವ’ ನ.8ರಂದು ಕುವೈಟ್‌ನ ಫರ್ವಾನಿಯದ ಕ್ರೌನ್‌ ಪ್ಲಾಝಾದಲ್ಲಿ ಹರ್ಷೋಲ್ಲಾಸದಿಂದ ನೆರವೇರಿತು. ಕುವೈಟ್‌ ಕನ್ನಡ ಕೂಟದ ಗೌರವ ಅಧ್ಯಕ್ಷರಾದ ಅನಂತ ಮಂಗಳಗಿಯವರ ಸಾರಥ್ಯದಲ್ಲಿ, ಸರ್ವ ಸಮಿತಿಯವರು ಒಂದಾಗಿ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಸಭಾಂಗಣವನ್ನು ರಂಗುರಂಗಾಗಿ ಸಿಂಗರಿಸಿದ್ದರು.

Advertisement

ಈ ಸಂಭ್ರಮಾಚರಣೆಯನ್ನು ಇಮ್ಮಡಿಗೊಳಿಸಲು ಕರ್ನಾಟಕದ ಪ್ರಖ್ಯಾತ ಚಲನಚಿತ್ರ ತಾರೆ ಡಾ| ಸುಧಾರಣಿಯವರು ಆಹ್ವಾನ ಸ್ವೀಕರಿಸಿ ಆಗಮಿಸಿದ್ದು ವಿಶೇಷವಾಗಿತ್ತು. ಅಪಾರ ಆದರಾಭಿಮಾನದಿಂದ ಅವರನ್ನು ಹಾಗೂ ಅವರ ಪುತ್ರಿ ನಿಧಿಯವರನ್ನು ಸಭೆಗೆ ಸ್ವಾಗತಿಸಲಾಯಿತು.

ಕುವೈಟ್‌ ದೇಶದ ವಿಭಿನ್ನ ಸಂಸ್ಕೃತಿಯ ಅಡಿಯಲ್ಲಿ ಕನ್ನಡ ನಾಡಿನ ಕಂಪನ್ನು ಪಸರಿಸುತ್ತಾ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಉನ್ನತ ಸಮಾಜ ಸೇವೆಯನ್ನು ಕುವೈಟ್‌ ಕನ್ನಡ ಕೂಟವು ಸಲ್ಲಿಸುತ್ತಿದೆ. ಈ ಸಂದರ್ಭ ಕೂಟದ ಕ್ಷೇಮಾಭ್ಯುದಯ ಸಂಘ, ಚಿಗುರುಬಳ್ಳಿ ಶಾಖೆಗಳ ಕಾರ್ಯ ಕೌಶಲವನ್ನು ಕೂಟ ನಡೆದು ಬಂದ ದಾರಿಯನ್ನು ವಿವರಿಸಲಾಯಿತು.

ಸಾಂಸ್ಕೃತಿಕ ಪ್ರದರ್ಶನ
ಕನ್ನಡದ ಪ್ರತಿಭಾನ್ವಿತರ ದಂಡೇ ತುಂಬಿಕೊಂಡಿರುವಂತಹ ಸಂಘ ನಮ್ಮದು. ಹಾಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಭರಪೂರ ಮನರಂಜನೆ ಈ ಸಂಜೆಯ ಮುಖ್ಯವಸ್ತುವಾಗಿದ್ದಿತು. ನಮ್ಮ ತಾಯ್ನೆಲ, ಸಂಸ್ಕೃತಿ, ಶ್ರೀಮಂತ ಇತಿಹಾಸ , ಮುಂದಿನ ಪೀಳಿಗೆಗೆ ಪ್ರಕೃತಿಯ ಸಂರಕ್ಷಣೆಗೈಯುವ ಪ್ರಾತ್ಯಕ್ಷಿಕೆ “ಜನನ ಜನ್ಮ ಭೂಮಿ’ಯನ್ನು ಅತ್ಯಂತ ಅದ್ಭುತವಾಗಿ ಪ್ರದರ್ಶಿಸಲಾಯಿತು.

Advertisement

ಅನೇಕ ಅಮೋಘ ಪ್ರತಿಭೆಗಳ ನೃತ್ಯ, ಕಲಾವರಣವಾಯಿತು. ದಾಸ ಸಾಹಿತ್ಯ, ಯೋಗ, ಯಕ್ಷಗಾನ, ವೀರಗಾಸೆಗಳಂತಹ ವಿವಿಧ ಕ್ಷೇತ್ರಗಳು ಮಧ್ವಾಚಾರ್ಯ, ಕೆಂಪೇಗೌಡ, ಸರ್‌.ಎಂ. ವಿಶ್ವೇಶ್ವರಯ್ಯ ಮೊದಲಾದ ಹತ್ತು ಹಲವು ಮಹನೀಯರ ಸಾಧನೆಗಳು, ಐತಿಹಾಸಿಕ ಸ್ಥಳಗಳು, ನಾಡ ಹಬ್ಬಗಳು, ಆಚರಣೆಗಳು, ಬಾಹ್ಯಾಕಾಶದ ಗರಿಮೆಗಳ ಕಿರುಚಿತ್ರ ಪ್ರದರ್ಶನಗೊಂಡವು.

ಮಕ್ಕಳೂ ಹಿರಿಯರೂ ಕನ್ನಡದ ಸೊಗಸಾದ ಗೀತೆಗಳಿಗೆ ಹೆಜ್ಜೆ ಹಾಕಿದರು. ಆಧುನಿಕತೆಯ ಸೊಗಡಿನಲ್ಲಿ ಪ್ರಕೃತಿಯನ್ನು ನಾಶಪಡಿಸದೆ ಜವಾಬ್ದಾರಿಯುತ ಮನುಜರಾಗಿ ಪ್ರೀತಿ ಸ್ನೇಹಗಳಿಂದ ಕಾರ್ಯ ಮಾಡುತ್ತಾ ಬಾಳ್ಳೋಣ ಎಂಬ ಅಮೂಲ್ಯ ಸಂದೇಶ ಸಾರಲಾಯಿತು. ಅನಂತರ “ಮರಳ ಮಲ್ಲಿಗೆ’ ತಂಡದ ಸ್ಮರಣ ಸಂಚಿಕೆಯನ್ನು ಅತಿಥಿಗಳಿಂದ ಬಿಡುಗಡೆಗೊಳಿಸಲಾಯಿತು.

ಮುಖ್ಯ ಅತಿಥಗಳಾದ ಅಪ್ಪಟ ಕನ್ನಡ ಮಣ್ಣಿನ ಪ್ರತಿಭೆ ಡಾ| ಸುಧಾರಾಣಿಯವರ ಜೀವನಗಾಥೆಯನ್ನು ಈ ಸಂದರ್ಭ ಕಿರುಚಿತ್ರ ರೂಪದಲ್ಲಿ ಪ್ರದರ್ಶಿಸಲಾಯಿತು. ಅನಂತರ ಸಮಿತಿ ಸದಸ್ಯರಿಂದ ಸಮ್ಮಾನಿತಗೊಂಡು ಕರ್ನಾಟಕ ರಾಜ್ಯೋತ್ಸವದ ಶುಭ ಆಶಯಗಳನ್ನು ತಿಳಿಸಿ ಮಾತನಾಡಿ “ನುಡಿ ಬಿಟ್ಟರೆ ನಾಡು ಬಿಟ್ಟಂತೆ’ ಎಂಬ ಕುವೆಂಪುವಾಣಿಯನ್ನು ನೆನೆಯುತ್ತಾ ಕನ್ನಡ ನಾಡು ನುಡಿಯ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.

ಕುವೈಟ್‌ ಕನ್ನಡ ಕೂಟದ ಕಾರ್ಯಗಳನ್ನು ಶ್ಲಾ ಸಿದರು ಮತ್ತು ಇಂತಹ ಒಳ್ಳೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದುದಕ್ಕೆ ಅತೀವ ಸಂತಸಪಟ್ಟರು. ತರುವಾಯ ಅವರ ಅಭಿನಯದ ಹಲವಾರು ಹಾಡುಗಳಿಗೆ ಕೂಟದ ಮಕ್ಕಳು ಹೆಜ್ಜೆಹಾಕಿ ಅವರಿಗೆ ನೃತ್ಯಾರ್ಪಣಗೈದರು.

ಸಭೆಯ ಕೊನೆಯ ಹಂತದಲ್ಲಿ ಲಕ್ಕಿ ಡ್ರಾ ಆಯೋಜಿಸಲಾಗಿತ್ತು. ಹತ್ತಾರು ಆಕರ್ಷಕ ಬಹುಮಾನಗಳನ್ನು ಗೆದ್ದು ಸದಸ್ಯರು ಸಂತೋಷಗೊಂಡರು. ಡಾ| ಸುಧಾರಾಣಿ ಅವರೊಂದಿಗೆ ಶಾಶ್ವತ ನೆನಪಿಗಾಗಿ ಎಲ್ಲರೂ ಛಾಯಾಚಿತ್ರಗಳನ್ನು ತೆಗೆದು ಔತಣವನ್ನು ಸವಿದರು.

ವರದಿ: ಭವಾನಿ ಮಾಧವ ನಾಯ್ಕ್, ಕುವೈಟ್‌

Advertisement

Udayavani is now on Telegram. Click here to join our channel and stay updated with the latest news.

Next