Advertisement
ಈಗೀಗ ಹೇಗಾಗಿ ಬಿಟ್ಟಿದೆಯೆಂದರೆ ಇನ್‌ಸ್ಟಾಗ್ರಾಂನಲ್ಲಿ ಯಾವುದಾದರೂ ಚೆಂದವಾದ ಜಾಗವನ್ನು ನೋಡಿದರೆ ಸಾಕು ಅಲ್ಲಿಗೆ ಹೋಗಬೇಕೆಂದು ಆಸೆಯಾಗುತ್ತದೆ. ಅದಕ್ಕೆಂದೇ ಈಗ ಇನ್‌ಸ್ಟಾಗ್ರಾಂ ಯೋಗ್ಯ ಜಾಗಗಳು ಹುಟ್ಟಿಕೊಳ್ಳುತ್ತಿವೆ. ಚೆಂದನೆಯ ಜಾಗಕ್ಕೆ ಇನ್‌ಸ್ಟಾಗ್ರಾಮೆಬಲ್ ಜಾಗ (Instagrammable spots)ವೆಂದು ಕರೆದು ಅವುಗಳನ್ನು ಪ್ರಮೋಟ್ ಮಾಡುವುದು ಸಹ ಪ್ರವಾಸೋದ್ಯಮದ ಕೆಲಸಗಳಲ್ಲಿ ಒಂದು. ಬಹಳಷ್ಟು ಜನ ಹೀಗೆ ವೀಡಿಯೋ ಅಥವಾ ಫೋಟೋಗಳಲ್ಲಿ ನೋಡಿದ ಜಾಗಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಕೆಲವು ಜಾಗಗಳಿಗೆ ಇನ್‌ಸ್ಟಾಗ್ರಾಂನಲ್ಲಿ ಲಕ್ಷಗಟ್ಟಲೇ ಹಿಂಬಾಲಕರನ್ನು ಹೊಂದಿದ ಇನ್‌ಫ್ಲು ಯೆನ್ಸ್‌ರ್‌ಗಳನ್ನು ಕರೆಸಿ ಅವರು ತಮ್ಮ ಅಕೌಂಟ್‌ನಲ್ಲಿ ಫೋಟೊ ಅಥವಾ ವೀಡಿಯೋ ಹಾಕಲಿಕ್ಕೆ ಇಂತಿಷ್ಟು ದುಡ್ಡು ಕೊಟ್ಟು ಆ ಜಾಗವನ್ನು ಜನಪ್ರಿಯವಾಗಿಸುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಾಕಲಿಕ್ಕೆಂದೇ ಪ್ರವಾಸ ಮಾಡುವ ಜನರೂ ಇದ್ದಾರೆ. ಅದೇನೂ ತಪ್ಪಲ್ಲ. ಕಾಲದ ಪ್ರಕಾರ ನಾವು ಹೆಜ್ಜೆ ಹಾಕಬೇಕು. ಕಾಲಕ್ಕೆ ತಕ್ಕಂತೆ ನಡೆಯಬೇಕು, ಕಾಲಕ್ಕೆ ತಕ್ಕಂತೆ ನುಡಿಯಬೇಕು ಎಂದು ನಮ್ಮ ಡಾ| ರಾಜಕುಮಾರ್ ಹಾಡಿನಲ್ಲಿ ಹೇಳಿದ್ದಾರಲ್ಲ. ನಾವೆಲ್ಲ ಕಾಲವೆಂಬ ನದಿಯಲ್ಲಿ ಸಾಗುತ್ತಿರುವ ಪುಟ್ಟ ಪುಟ್ಟ ತೊರೆಗಳು.
Related Articles
Advertisement
ಸೆವೆನ್ ಮ್ಯಾಜಿಕ್ ಮೌಂಟೆನ್ಸ್ ಎಂಬ ಹೆಸರಿನ ಈ ಜಾಗ ಲಾಸ್ ವೇಗಾಸ್‌ಗೆ ಹೋಗುವಾಗ ದಾರಿಯಲ್ಲಿ ಕಾಣಿಸುತ್ತದೆ. ಲಾಸ್ ವೇಗಾಸ್ ನೆವಾಡಾ ರಾಜ್ಯದಲ್ಲಿದೆ. ನೆವಾಡಾ ರಾಜ್ಯ ಬಹುತೇಕ ಮರುಭೂಮಿ. ಬೇಸಗೆಯಲ್ಲಿ ರಣರಣ ಬಿಸಿಲು ಹೊಡೆಯುತ್ತದೆ. ಮೂವತ್ತು, ಮೂವತ್ತೈದು ಸೆಲ್ಸಿಯಸ್‌ಗಳಷ್ಟು ಏರುವ ತಾಪಮಾನ ಮೈ ಚರ್ಮ ಸುಟ್ಟು ಬಿಡುತ್ತದೇನೋ ಎನ್ನುವಷ್ಟು ಮಾರಣಾಂತಿಕವಾಗಿರುತ್ತದೆ. ಹಾಗಾಗಿ ಈ ಕಡೆಯಲ್ಲಿ ನೋಡೆನೆಂದರೂ ಒಂದು ಮರ ಸಿಗುವುದಿಲ್ಲ. ಕಲ್ಲುಗಳು, ಮುಳ್ಳು ಗಿಡಗಳು ತುಂಬಿರುತ್ತವಾದ್ದರಿಂದ ಈ ರಾಜ್ಯ ಪ್ರವಾಸೋದ್ಯಮಕ್ಕಾಗಿ ಕಸಿನೋಗಳನ್ನು ನೆಚ್ಚಿಕೊಂಡಿದೆ. ಕಸಿನೋಗಳೇ ತುಂಬಿರುವ ಲಾಸ್ ವೇಗಾಸ್‌ನ ಕಣ್ಣು ಕುಕ್ಕುವಂತಹ ಬೆಳಕಿನಿಂದ ಪ್ರವಾಸಿಗರನ್ನು ಆಕರ್ಷಿಸಿ ಅದರ ಮೂಲಕ ರಾಜ್ಯದ ಬೊಕ್ಕಸಕ್ಕೆ ಹಣ ತುಂಬಿಸಿಕೊಳ್ಳುತ್ತದೆ. ಲಾಸ್ ವೇಗಾಸ್‌ಗೆ ಹೋದಾಗ ಸುತ್ತಮುತ್ತ ನೋಡಬಹುದಾದ ಇನ್ನೂ ಅನೇಕ ಸ್ಥಳಗಳಿವೆ ಮತ್ತು ಅದರಲ್ಲಿ ಈ ಸೆವೆನ್ ಮ್ಯಾಜಿಕ್ ಮೌಂಟೆನ್ಸ್ ಸಹ ಒಂದು. ಲಾಸ್ ವೇಗಾಸ್‌ನಿಂದ ದಕ್ಷಿಣಕ್ಕೆ ಸುಮಾರು ಹದಿನೈದು ಮೈಲಿಗಳಷ್ಟು ದೂರ ಬಂದರೆ ಜೀನ್ ಡ್ರೈ ಲೇಕ್ ಮತ್ತು ಇಂಟರಸ್ಟೇಟ್ ಹದಿನೈದರ ಮಧ್ಯದಲ್ಲಿ ಈ ಜಾಗವಿದೆ. ದೂರದಿಂದಲೇ ಬಣ್ಣಮಯವಾಗಿ ಕಾಣುವ ಈ ಜಾಗವನ್ನು ಸುಲಭವಾಗಿ ಪತ್ತೆ ಮಾಡಬಹುದು.
ಇಲ್ಲಿರುವುದು ಒಂದರ ಮೇಲೊಂದರಂತೆ ಪೇರಿಸಿಟ್ಟ ಬಣ್ಣ ಬಣ್ಣದ ಕಲ್ಲುಗಳು. ಹೀಗೆ ಒಟ್ಟು ಏಳು ಕಂಬಗಳನ್ನು ನಿರ್ಮಿಸಿ¨ªಾರೆ. ಮರುಭೂಮಿಯ ಮಧ್ಯದಲ್ಲಿ ಈ ಕಲ್ಲುಗಳು ಬಣ್ಣಮಯವಾದ ರಂಗೋಲಿಯಂತೆ ಕಾಣಿಸುತ್ತವೆ. ಇದನ್ನು ಕಲೆ ಅಥವಾ ವಿನ್ಯಾಸವೆಂದು ಕರೆಯಬಹುದು. ಒಂದರ ಮೇಲೊಂದು ಪೇರಿಸಿಟ್ಟಿರುವ ಕಲ್ಲುಗಳು ಸಹ ಕಲಾತ್ಮಕವಾಗಿ ಒಂದಕ್ಕೊಂದು ಬೆಸೆದು ನಿಂತಿವೆ. ಹಿಂದಿನ ಅಂಕಣದಲ್ಲಿ ಇಂಗ್ಲೆಂಡಿನ ವಿಶ್ವದ ಅದ್ಭುತಗಳಲ್ಲಿ ಒಂದಾದ ಸ್ಟೋನ್ ಹೆಂಜ್ ಬಗ್ಗೆ ಬರೆದಿದ್ದೆ. ಇದನ್ನು ಸಹ ಅದಕ್ಕೆ ಹೋಲಿಸಬಹುದು. ಸ್ವಿಸ್ ಕಲಾವಿದ “ಯೂಗೋ ರೊಂಡಿನೋನ್’ (Ugo Rondinone) ಎಂಬಾತ ನಿರ್ಮಿಸಿರುವ ಈ ಕಲ್ಲಿನ ಕಲಾಕೃತಿ ಇಷ್ಟು ಪ್ರಖ್ಯಾತವಾಗುತ್ತದೆಂದು ಯಾರೂ ಊಹಿಸಿರಲಿಲ್ಲ. ನಿರ್ಮಾಣದ ಅನಂತರ ಇಲ್ಲಿ ಬಂದ ಜನಸಾಗರವನ್ನು ಕಂಡು ಯೂಗೋನಿಗೂ ಸಹ ಆಶ್ಚರ್ಯವಾಯಿತಂತೆ. ಪ್ರತೀ ವರ್ಷವೂ ಕಲ್ಲುಗಳನ್ನಿಡುವ ಈ ಜಾಗದ ಕಾಂಟ್ರಾಕ್ಟ್ ಅನ್ನು ವಿಸ್ತರಿಸುತ್ತಲೇ ಬಂದಿದ್ದಾರೆ. ವರ್ಷ ವರ್ಷವೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2015ರಲ್ಲಿ ಯೂಗೋ ಈ ಬಣ್ಣದ ಕಲ್ಲುಗಳನ್ನು ಪೇರಿಸಿಟ್ಟ. ಮೊದಲು ದೊಡ್ಡ ಬಂಡೆಗಲ್ಲುಗಳನ್ನು ಕತ್ತರಿಸಿ ಅವುಗಳ ಮಧ್ಯದಲ್ಲಿ ತೂತು ತೆಗೆದು ಒಂದರ ಮೇಲೊಂದರಂತೆ ಇಡತೊಡಗಿದಾಗ ಕಲ್ಲುಗಳು ಹೊಸ ಆಕಾರದಲ್ಲಿ ಭಿನ್ನವಾಗಿ ಕಂಡವು. ಅನಂತರ ಅವುಗಳಿಗೆ ಬಣ್ಣ ಕೊಡಲಾಯಿತು. 2016ರಲ್ಲಿ ನೆವಾಡಾ ಮ್ಯೂಸಿಯಮ್ ಆಫ್ ಆರ್ಟ್ ಈ ಕಲಾಕೃತಿಯನ್ನು ಇದೇ ಜಾಗದಲ್ಲಿ ಪ್ರದರ್ಶನಕ್ಕೆ ಇಟ್ಟಿತು. ಮೊದಲಿಗೆ ಕೇವಲ ಎರಡು ವರ್ಷಗಳವರೆಗೆ ಎಂದು ಮಾತಾಗಿತ್ತು. ಆದರೆ ಅವರ ಎಣಿಕೆಗೂ ಮೀರಿ ಜನರಿಂದ ಸ್ಪಂದನೆ ಸಿಕ್ಕು ಈಗ ಈ ತಾಣ ಶಾಶ್ವತವೇನೋ ಎಂಬಂತೆ ಮನೆಮಾತಾಗಿ ಹೋಗಿದೆ. ವೇಗಾಸ್‌ಗೆ ಹೋದವರು ಇಲ್ಲಿ ತಪ್ಪದೇ ಭೇಟಿ ನೀಡುತ್ತಾರೆ.