Advertisement

Desi Swara: ಮರುಭೂಮಿಯ ನೆಲದಲ್ಲಿ ಸಿಂಧೂ ಹರಿವಿನ ಕುರುಹು

11:50 AM Aug 14, 2023 | Team Udayavani |

ಇಂದಿಗೂ ನಮಗೆ ನಾಗರಿಕತೆ ಎನ್ನುವ ಪದವನ್ನು ಕೇಳಿದರೆ ಹರಪ್ಪ, ಸಿಂಧೂ, ಮೊಹೆಂಜೋದಾರೋ ನಾಗರಿಕತೆಯ ಬಗ್ಗೆ ಯೋಚನೆ ತಲೆಯಲ್ಲಿ ಹಾದುಹೋಗುತ್ತವೆ. ನಾಗರಿಕತೆಯು ಆರಂಭವಾಗಿದ್ದೇ ಇಲ್ಲಿಂದ ಎನ್ನಲೂಬಹುದು. ನಾಗರಿಕತೆ ಎನ್ನುವುದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವರ್ಗಾವಣೆಯನ್ನು ಕಂಡಿದೆ. ಬದುಕನ್ನು ಅರಸುತ್ತಾ ಸಿಂಧೂ ನದಿಯ ದಡವನ್ನು ದಾಟಿ ಇಲ್ಲಿನ ಜನರು ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ನೆಲೆಯನ್ನು ಕಂಡುಕೊಂಡಿದ್ದಾರೆ. ನಾಗರಿಕತೆ ಹರಡಿರುವ ವಿಸ್ತಾರವನ್ನು ನೋಡಿದರೆ ಅಚ್ಚರಿಗಳು ನಮ್ಮೆದುರು ತರೆದುಕೊಳ್ಳುತ್ತವೆ. ಹೀಗೆ ಭಾರತದ ಹರಪ್ಪ ನಾಗರಿಕತೆಯು ಗಡಿಗಳನ್ನು ದಾಟಿ ಅರಬ್‌ ಮರುಭೂಮಿಯಲ್ಲು ತನ್ನ ವಾಸವನ್ನು ಕಂಡಿದೆ. ಇದಕ್ಕೆ ಪುಷ್ಠಿ ನಿಡುವಂತೆ ಅರಬ್‌ ರಾಷ್ಟ್ರಗಳಲ್ಲಿ ಪುರಾವೆಗಳು ದೊರೆತಿವೆ.

Advertisement

ಪ್ರಪಂಚದಲ್ಲಿ ಅತ್ಯಂತ ಪ್ರಾಚೀನ ನಾಗರಿಕತೆಯ ಸಂಸ್ಕೃತಿಗಳಲ್ಲಿ ಒಂದಾದ ಹರಪ್ಪ ಹಾಗೂ ಮೊಹೆಂಜೋದಾರೂ ನಾಗರಿಕತೆಯ ಬಗ್ಗೆ ಭಾರತೀಯರಾದ ನಮಗೆ ಬಹಳ ಹೆಮ್ಮೆಯಿದೆ. ಕಾರಣ ಕ್ರಿ.ಪೂ. 3000 ವರ್ಷಗಳ ಹಿಂದಿನ ಆ ಕಾಲದಲ್ಲಿಯೇ ಯೋಜನಾ ಬದ್ಧವಾಗಿ ನಗರಗಳು, ರಕ್ಷಣ ಕೋಟೆಗಳು, ರಸ್ತೆಗಳು, ಕುಡಿಯುವ ನೀರಿನ ಬಾವಿಗಳು, ಒಳಚರಂಡಿ ವ್ಯವಸ್ಥೆ, ಸ್ನಾನಗೃಹಗಳು ಇತ್ಯಾದಿಗಳು ನಿರ್ಮಾಣಗೊಂಡಿದ್ದವು. ಆಗಿನ ಜನರ ಉತ್ತಮ ಸಾಮಾಜಿಕ ಜೀವನ, ಆರ್ಥಿಕ ಜೀವನ, ಕಲೆ, ಧಾರ್ಮಿಕ ಆಚರಣೆ, ಬರಹಗಳು, ಇವೆಲ್ಲವೂ ಹರಪ್ಪ ಸಂಸ್ಕೃತಿಯ ವಿಶಿಷ್ಟತೆಯನ್ನು ಎತ್ತಿ ಹಿಡಿಯುತ್ತವೆ. ಸಿಂಧೂ ಹಾಗೂ ಅದರ ಉಪನದಿಗಳ ದಡದಲ್ಲಿ ಈ ನಾಗರಿಕತೆ ಜೀವಿಸಿತ್ತು. ಹಾಗಾಗಿಯೇ ಇದನ್ನು ಸಿಂಧೂ ಬಯಲಿನ ನಾಗರಿಕತೆ ಎಂದೂ ಹೇಳಲಾಗುತ್ತದೆ. ಆದರೆ ಕಾಲದ ಹೊಡೆತಕ್ಕೆ ಸಿಕ್ಕಿ ಈ ಜನ ಜೀವನ ಕಣ್ಮರೆಯಾದವು. ಅತಿವೃಷ್ಟಿ, ಅನಾವೃಷ್ಟಿ, ನೆರೆ, ಬರ ಇತ್ಯಾದಿಗಳ ಕಾರಣದಿಂದ ಇಲ್ಲಿನ ಜನರು ಈ ನಗರಗಳನ್ನು ತೊರೆದಿರಬಹುದು ಇಲ್ಲವೇ ಬೇರೆಡೆ ವಲಸೆ ಹೋಗಿರಬಹುದು ಎಂದು ಪುರಾತತ್ವ ಸಂಶೋಧಕರು ಊಹಿಸಿದ್ದಾರೆ.

ಒಂದು ಶತಮಾನದ ಹಿಂದೆ ಬ್ರಿಟಿಷರು ಈ ಹರಪ್ಪ ನಾಗರಿಕತೆ ಬಗ್ಗೆ ಸಂಶೋಧನೆಗಳನ್ನು ಆರಂಭಿಸಿದ್ದರು. ಅಂದು ಶುರುವಾದ ಸಂಶೊಧನೆಗಳು ಇಂದಿಗೂ ಚಾಲ್ತಿಯಲ್ಲಿವೆ. ವಿವಿಧ ದೇಶಗಳ ಪ್ರಖ್ಯಾತ ಪುರಾತತ್ವ ಸಂಶೋಧಕರು ಅನ್ವೇಷಣೆ ನಡೆಸುತಿ¨ªಾರೆ. ಈ ಸಂಶೋಧನೆಗಳಲ್ಲಿ ಸಿಂಧೂ ನದಿ ಬಯಲಿನ ಆಚೆಗೂ ಈ ನಾಗರಿಕತೆಯ ನೆಲೆಗಳು ಹರಡಿದ್ದವು ಎಂದು ತಿಳಿಯಲಾಯಿತು. ಅದೇ ರೀತಿ ಕಳೆದ ಒಂದು ದಶಕದಲ್ಲಿ ಒಮಾನಿನ ಒಳನಾಡಿನಲ್ಲಿ ಉತVನನ ನಡೆಸಿದ ಕೆಲವು ಸ್ಥಳಗಳಲ್ಲಿ ದೊರೆತ ಪುರಾವೆಗಳಿಂದ ಅರಬ್‌ ರಾಷ್ಟ್ರವಾದ ಒಮಾನ್‌ ದೇಶದಲ್ಲೂ ಸಹ ಹರಪ್ಪ ನಾಗರಿಕತೆ ಹರಡಿತ್ತು! ಎಂಬುದು ತಿಳಿದಿದೆ.

ಒಮಾನ್‌ ದೇಶ (ಅಧಿಕೃತ ಹೆಸರು ಸುಲ್ತಾನೇಟ್‌ ಆಫ್ ಒಮಾನ್‌), ಇದು ಪಶ್ಚಿಮ ಏಷ್ಯಾದಲ್ಲಿನ ಅರಬ್‌ ರಾಷ್ಟ್ರ. ಈ ದೇಶವು ಸೌದಿ ಅರೇಬಿಯಾ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮತ್ತು ಯೆಮೆನ್‌ನೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಉತ್ತರದಲ್ಲಿ ಪರ್ಶಿಯನ್‌ ಕೊಲ್ಲಿ, ಪೂರ್ವಕ್ಕೆ ಅರಬ್ಬಿ ಸಮುದ್ರ, ದಕ್ಷಿಣಕ್ಕೆ ಹಿಂದೂ ಮಹಾಸಾಗರವಿದೆ, ಇರಾನ್‌ ಮತ್ತು ಪಾಕಿಸ್ಥಾನದೊಂದಿಗೆ ಸಮುದ್ರದ ಗಡಿಗಳನ್ನು ಹಂಚಿಕೊಂಡಿವೆ.

Advertisement

ಭೌಗೋಳಿಕವಾಗಿ ಒಮಾನ್‌ ರಾಷ್ಟ್ರವು ಭಾರತದಿಂದ ಅಷ್ಟೇನು ದೂರದಲ್ಲಿಲ್ಲ. ಸಮುದ್ರ ಮಾರ್ಗದ ಮುಖಾಂತರ ಗುಜರಾತಿನ ಬಂದರಿನಿಂದ ಒಮಾನಿನ ಮಸ್ಕತ್‌ ಪೋರ್ಟ್‌ಗೆ ಕೇವಲ 1,000 ನಾಟಿಕಲ್‌ ಮೈಲಿ ಮಾತ್ರ. ಹೀಗಾಗಿ ಹರಪ್ಪರು ಕಡಲಾಚೆಗೂ ಇರುವ ಅರಬ್‌ ರಾಷ್ಟ್ರಗಳಾದ ಒಮಾನ್‌, ಯುಎಇ ಮತ್ತಿತರ ದೇಶಗಳೊಂದಿಗೆ ವ್ಯಾವಹಾರಿಕ ಸಂಬಂಧಗಳನ್ನು ಹೊಂದಿರುವುದಕ್ಕೆ ಸಾಕಷ್ಟು ಸಾಧ್ಯತೆಗಳಿವೆ.

ಭಾರತದ ಪಶ್ಚಿಮ ಕರಾವಳಿ ಮತ್ತು ಒಮಾನ್‌ ಸಮುದ್ರದ ಉದ್ದಕ್ಕೂ ಇರುವ ಪಟ್ಟಣಗಳು ಮತ್ತು ವ್ಯಾಪಾರ ಬಂದರುಗಳ ನಡುವೆ ಪ್ರಯಾಣಿಕರು, ವ್ಯಾಪಾರಸ್ಥರು ಸಂಚರಿಸುತ್ತಿದ್ದರು ಎನ್ನುವುದಕ್ಕೆ ಹಲವಾರು ಸಾಕ್ಷ್ಯಾಧಾರಗಳು ದೊರೆತಿವೆ. ಕೊಲ್ಲಿ ರಾಷ್ಟ್ರಗಳ ಸಮುದ್ರ ತೀರಗಳು ಮತ್ತು ಭಾರತೀಯ ಕರಾವಳಿ ತೀರಗಳು ಸಾವಿರಾರು ವರ್ಷಗಳಿಂದ ಸಂಪರ್ಕದಲ್ಲಿದ್ದರಿಂದ ಇಂದಿನ ಒಮಾನ್‌ ಉತ್ತರ ಕರಾವಳಿಯ ಬಂದರುಗಳಿಗೆ ಮೊದಲು ಸರಕು ಸರಂಜಾಮುಗಳು ರವಾನೆಯಾಗುತ್ತಿದ್ದವು. ಅಲ್ಲಿಂದ ಮರುಭೂಮಿಯ ಒಳಭಾಗಕ್ಕೆ, ಹಾಗೆಯೇ ಮುಂದೆ ಆಫ್ರಿಕಾ ಮತ್ತು ಮೆಡಿಟರೇನಿಯನ್‌ ಸಮುದ್ರಕ್ಕೆ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದ್ದರಿಂದ ಅರಬ್ಬರ ನಾಡಿಗೆ ಒಮಾನಿನ ಬಂದರುಗಳು ಪ್ರವೇಶದ್ವಾರವಾಗಿದ್ದವು ಎನ್ನಬಹುದು.

ಒಮಾನ್‌ ರಾಷ್ಟ್ರದ ಅಲ್‌ ವತ್ತಾಯ ಪ್ರದೇಶದಲ್ಲಿ ಕ್ರಿ.ಪೂ. 10,000 ವರ್ಷಗಳ ಹಿಂದೆಯೇ ಜನವಸತಿಯಿತ್ತು ಎಂದು ಪುರಾತತ್ವ ಸಂಶೋಧನೆಗಳಿಂದ ತಿಳಿದು ಬಂದಿದೆ. ಕ್ರಿ.ಪೂ 3,000 ವರ್ಷಗಳ ಹಿಂದೆ ಗ್ರೀಕರೊಂದಿಗೆ ಎರಿಥ್ರಿಯನ್‌ ಸಮುದ್ರದಲ್ಲಿ ಕಡಲ ಮಾರ್ಗದ ಮೂಲಕ ವ್ಯಾವಹಾರಿಕ ಸಂಬಂಧ ನಡೆದಿತ್ತು ಎಂಬುದರ ಕುರಿತು ಮಾಹಿತಿಗಳು ದೊರೆತಿವೆ. ಅಷ್ಟೇ ಅಲ್ಲದೆ ಕ್ರಿ.ಪೂ 3,000 ವರ್ಷಗಳ ಹಿಂದೆಯೂ ಜನಜೀವನ ಇತ್ತು ಎನ್ನುವುದಕ್ಕೆ ಕೆಲವು ಕುರುಹುಗಳು ಸಿಕ್ಕಿವೆ. ಹೀಗೆಯೇ ಮುಂದುವರಿದ ಇತ್ತೀಚಿನ ಹಲವು ಸಂಶೋಧನೆಗಳು ಹರಪ್ಪ ನಾಗರಿಕತೆಯು ಇಲ್ಲಿಯವರೆಗೂ ಹರಡಿದ್ದ ಪ್ರಮುಖ ಸುಳಿವನ್ನು ನೀಡಿದೆ. ಒಮಾನ್‌ ಮತ್ತು ಭಾರತದ ಮಧ್ಯೆಯಿದ್ದ ವ್ಯಾವಹಾರಿಕ, ಧಾರ್ಮಿಕ, ಕಲೆ, ಸಾಮಾಜಿಕ ಸಂಬಂಧಗಳ ಬಗ್ಗೆ ಈ ಪುರಾವೆಗಳು ಮತ್ತಷ್ಟು ಬೆಳಕು ಚೆಲ್ಲಲಿವೆ.

ಸಿಂಧೂ ಬಯಲಿನಿಂದ ಹರಪ್ಪ ಮತ್ತು ಮೊಹೆಂದಾಜಾರೋ ನಗರದ ಜನರು ಸಮುದ್ರದಾಚೆಗೂ ಸಂಪರ್ಕ ಸಾಧಿಸಿದ್ದರು ಎಂದರೆ ಅವರಲ್ಲಿದ್ದ ವ್ಯಾವಹಾರಿಕ ಜ್ಞಾನದ ಕುರಿತು ತಲೆದೂಗಲೇಬೇಕು. ಜತೆಗೆ ಒಮಾನ್‌ನ ಪ್ರಜೆಗಳೊಂದಿಗೆ ವ್ಯಾವಹಾರಿಕ ಸಂಪರ್ಕವನ್ನು ಹೊಂದಿದ್ದರು ಎಂದರೆ ಈ ಅರಬ್‌ ರಾಷ್ಟ್ರಗಳಲ್ಲಿ ಜನಜೀವನ ಅಸ್ತಿತ್ವದಲ್ಲಿತ್ತು ಎಂದು ಊಹಿಸಬಹುದು. ಹೀಗಾಗಿ ಆ ಹಿಂದಿನ ಜನಜೀವನ ಪದ್ಧತಿಯ ಕುರಿತು ಸಹ ಅನ್ವೇಷಣೆಗಳು ನಡೆಯುತ್ತಿವೆ.

ಇದುವರೆಗೂ ಒಮಾನಿನ ಹಲೆವೆಡೆ ಹರಪ್ಪರ ಕಾಲದ ಹಲವಾರು ವಸ್ತುಗಳು ದೊರೆತಿವೆ. ಪುರಾತತ್ತÌ ಶಾಸ್ತ್ರದ ಸ್ಥಳ ಎಂದು ಗುರುತಿಸಿರುವ ಉತ್ತರ ಅಲ್‌ ಬತಿನಾದಲ್ಲಿರುವ ದಹ್ವಾ, ಒಮಾನ್‌ನಲ್ಲಿ ಇದುವರೆಗೆ ಪತ್ತೆಯಾದ ಅತ್ಯಂತ ಹಳೆಯ ವಸಾಹತು. ಇದು ಹಜಾರ್‌ ಪರ್ವತ ಶ್ರೇಣಿಗಳ ಅಂಚಿನಲ್ಲಿರುವ ಸಹಮ್‌ನ ವಿಲಾಯತ್‌ನ ಪಶ್ಚಿಮಕ್ಕೆ 24 ಕೀ.ಮೀಗಳಷ್ಟು ದೂರದಲ್ಲಿದೆ. ಈ ತಾಣವು ಕಂಚಿನ ಯುಗದ ನಾಗರಿಕತೆಯ ಉಮ್‌ ಅಲ್‌ ನಾರ್‌ ನ ನಾಗರಿಕತೆಗಿಂತ ಹಿಂದಿನದು (ಸುಮಾರು 2,500 ರಿಂದ 2,000 BC). ಈ ಸ್ಥಳದಲ್ಲಿನ ಪುರಾತತ್ವ ಸಂಶೋಧನೆಗಳು ಕ್ರಿ.ಪೂ ಮೂರನೇ ಸಹಸ್ರಮಾನದಲ್ಲಿನ ಮಜಾನ್‌ ನಾಗರಿಕತೆ ಮತ್ತು ಹರಪ್ಪನ್‌ ಅಥವಾ ಸಿಂಧೂ ಕಣಿವೆಯ ನಾಗರಿಕತೆಯ ನಿವಾಸಿಗಳ ನಡುವಿನ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳ ಕುರಿತು ಮಹತ್ವದ ಸಾಕ್ಷಿಗಳನ್ನು ಒದಗಿಸಿವೆ. ಈ ಸ್ಥಳವನ್ನು ಉತ್ಖನನ ಮಾಡಿದಾಗ ಇಲ್ಲಿ ಮಣ್ಣಿನ ಜಾಡಿ, ಮಣಿಗಳು, ಕಲ್ಲಿನ ಒಲೆಗಳು ಇತ್ಯಾದಿ ದೊರೆತಿವೆ. ಇವೆಲ್ಲವೂ ಹರಪ್ಪನ ನಾಗರಿಕತೆಯಲ್ಲಿ ಬಳಕೆಯಲ್ಲಿದ್ದ ವಸ್ತುಗಳು. ಈ ಜಾಡಿಗಳು ಸಿಂಧೂ ನದಿಯಾಚೆಗಿನ ಜನರಿಂದ ಇಲ್ಲಿಗೆ ಸರಬರಾಜಾಗಿದೆ ಎಂದು ಅನ್ವೇಷಿಸಲಾಗಿದೆ. ಸಾಲುಟ್‌ ಪ್ರದೇಶದಲ್ಲಿ ಹರಪ್ಪ ಮಾದರಿಯಲ್ಲಿ ಕುಂಬಾರಿಕೆ ನಡೆಸುತಿದ್ದ ಜಾಗ ಪತ್ತೆಯಾಗಿದೆ. ಇಲ್ಲಿ ಮಣ್ಣಿನ ಮಡಿಕೆಗಳು, ಜಾಡಿಗಳು, ಇತ್ಯಾದಿಗಳು ಪತ್ತೆಯಾಗಿವೆ. ಇವೆಲ್ಲವೂ ಜೇಡಿ ಮಣ್ಣಿನಿಂದ ಮಾಡಲಾಗಿದೆ.

ಇನ್ನೊಂದು ಪುರಾತತ್ವ ಶಾಸ್ತ್ರದ ಸ್ಥಳ ರಾಸ್‌ ಅಲ್‌ ಹದ್‌ನಲ್ಲಿ ಪತ್ತೆಯಾದ ಮಣ್ಣಿನ ಮಡಿಕೆ, ಜಾಡಿ, ಆಭರಣಗಳು ಮತ್ತು 5,000 ವರ್ಷಗಳಷ್ಟು ಹಳೆಯದಾದ ಬುಟ್ಟಿಗಳು, ಹಗ್ಗಗಳು, ಬಲೆಗಳು ಮತ್ತು ಈ ಪ್ರದೇಶದ ಜನರು ತಮ್ಮ ದೈನಂದಿನ ಜೀವನೋಪಾಯಕ್ಕಾಗಿ ಬಳಸುತ್ತಿದ್ದ ಇತರೆ ವಸ್ತುಗಳನ್ನು ಈ ಪ್ರದೇಶದಲ್ಲಿ ಕಂಡುಹಿಡಿಯಲಾಗಿದೆ. ಇವುಗಳು ಕ್ರಿ.ಪೂ 3,100 BC ಮತ್ತು 2,400 BC ವರ್ಷಗಳ ನಡುವಿನ ಆರಂಭಿಕ ಕಂಚಿನ ಯುಗದ ಹಿಂದಿನವು ಎಂದು ಹೇಳಲಾಗುತ್ತದೆ. ಇನ್ನು ಕಲ್ಹಟ್‌ ಮತ್ತು ದಿಲ್ಮುನ್‌ ಪ್ರದೇಶದಲ್ಲಿಯೂ ಸಹ ಹರಪ್ಪರ ಲಿಪಿಯ ನಾಣ್ಯಗಳು, ಜಾಡಿಗಳು ಆಲಂಕಾರಿಕ ಒಡವೆಗಳು ಇತ್ಯಾದಿ ದೊರೆತಿವೆ. ರಾಸ್‌ ಅಲ್‌ ಜಿಂಜ್‌ ಪ್ರದೇಶದಲ್ಲಿ ಕೆಲವು ತಾಮ್ರದ ವಸ್ತುಗಳು ಪತ್ತೆಯಾಗಿವೆ. ಕೊಡಲಿ, ಈಟಿಗಳು ದೊರೆತಿವೆ. ಅಷ್ಟೇ ಅಲ್ಲದೆ ಬಾಚಣಿಕೆ ಕೂಡ ಪತ್ತೆಯಾಗಿದೆ. ಕೆಲವು ವಸ್ತುಗಳ ಮೇಲೆ ಹರಪ್ಪರ ಲಿಪಿಗಳು ಇವೆ.

ಒಮಾನಿನಲ್ಲಿ ದೊರೆತ ಹರಪ್ಪನ ನಾಗರಿಕತೆಯ ಈ ವಸ್ತುಗಳು ಆರಂಭಿಕ ಕಂಚಿನ ಯುಗದಲ್ಲಿ ಒಮಾನ್‌ ಮತ್ತು ಸಿಂಧ್‌ ನಡುವೆ ಚಾಲ್ತಿಯಲ್ಲಿದ್ದ ವ್ಯಾಪಾರ ಚಟುವಟಿಕೆಯ ವ್ಯಾಪ್ತಿಯನ್ನು ಸೂಚಿಸುತ್ತದೆ. ಸಿಂಧ್‌ನಿಂದ ಏನನ್ನು ಆಮದು ಮಾಡಿಕೊಳ್ಳಲಾಗಿತ್ತು ಮತ್ತು ಈ ಜಾಡಿಗಳಲ್ಲಿ ಸಾಗಿಸಲಾದ ವಸ್ತುಗಳ ಸ್ವರೂಪವನ್ನು ಇನ್ನೂ ಗುರುತಿಸಲಾಗಿಲ್ಲ. ಮಣ್ಣಿನ ಜಾಡಿಗಳ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ. ಹರಪ್ಪರ ಕಾಲದ ಜನರು ಭಾರತದಿಂದ ಒಮಾನಿಗೆ ಕೆಲವು ಪ್ರಮುಖ ವಸ್ತುಗಳನ್ನು ಕಳುಹಿಸಲು ಈ ಜಾಡಿಗಳನ್ನು ಬಳಸಿದ್ದರು ಎನ್ನಲಾಗಿದೆ.

ಒಮಾನ್‌ ಮತ್ತು ವಾಯುವ್ಯ ಭಾರತದ ಸಿಂಧೂ ಬಯಲಿನ ಮಧ್ಯೆ ನೇರವಾದ ಯಾವುದೇ ರಸ್ತೆ ಮಾರ್ಗಗಳಿಲ್ಲ. ಅರಬ್ಬಿ ಸಮುದ್ರ ಅನಂತರ ಇಂದಿನ ಪಾಕಿಸ್ಥಾನದ ಸಿಂಧ್‌ ಮತ್ತು ಪಂಜಾಬ್‌ ಪ್ರಾಂತ ಅನಂತರ ದೊಡ್ಡದಾದ ಸಿಂಧೂ ನದಿ ಮತ್ತು ಕಣಿವೆ ಮಾರ್ಗಗಳು. ಇವೆಲ್ಲವೂಗಳ ಮಧ್ಯೆ ಸಾವಿರಾರು ಕಿ.ಮೀ.ಗಳ ಅಂತರವಿದೆ. ಇಂತಹ ಕಷ್ಟಕರವಾದ ಮಾರ್ಗವನ್ನು ಹೇಗೆ ತಲುಪಿರಬಹುದು ಎಂದು ವಿಶ್ಲೇಷಿಸಿದಾಗ ಮೊದಲು ಸಿಂಧೂ ನದಿಯನ್ನು ದಾಟಲು ಚಿಕ್ಕ ಚಿಕ್ಕ ದೋಣಿಗಳನ್ನು ಬಳಸಿ ನದಿಯನ್ನು ದಾಟಿ ಅಲ್ಲಿಂದ ರಸ್ತೆ ಮಾರ್ಗವಾಗಿ ಬಂದರನ್ನು ತಲುಪುತ್ತಿದ್ದರು. ಅಲ್ಲಿಂದ ಒಮಾನಿನ ಸಮುದ್ರದ ಬಂದರುಗಳನ್ನು ತಲುಪುತ್ತಿದ್ದರು ಎನ್ನಲಾಗಿದೆ. ಐದಾರು ಸಾವಿರ ವರ್ಷಗಳ ಹಿಂದಿನಿಂದಲೂ ಇದ್ದ ಆ ವ್ಯಾವಹಾರಿಕ ಸಂಬಂಧಗಳು ಇಂದಿಗೂ ಅಷ್ಟೇ ಸೌಹಾರ್ದತೆಯಿಂದ ಮುಂದುವರೆದಿರುವುದು ವಿಶೇಷ. ಅರಬ್‌ ರಾಷ್ಟ್ರಗಳಿಗೆ ವಿವಿಧ ದೇಶಗಳಿಂದ ಆಮದಾಗುವ ಸರಕು ಸರಂಜಾಮುಗಳಿಗೆ ಹೋಲಿಸಿದರೆ ಭಾರತ ದೇಶವು ಅಗ್ರಸ್ಥಾನದಲ್ಲಿದೆ.

*ಪಿ.ಎಸ್‌.ರಂಗನಾಥ, ಮಸ್ಕತ್‌

 

Advertisement

Udayavani is now on Telegram. Click here to join our channel and stay updated with the latest news.

Next