Advertisement

ಸಾರಿಗೆ ಇಲಾಖೆ ತೆರಿಗೆ ಸಂಗ್ರಹದಲ್ಲಿ ಶೇ.60 ಕುಸಿತ

09:35 AM Jul 27, 2020 | Suhan S |

ಹುಬ್ಬಳ್ಳಿ: ಕೋವಿಡ್‌-19 ವೈರಸ್‌ ಹಿನ್ನೆಲೆ ಲಾಕ್‌ ಡೌನ್‌ದಿಂದ ಹಾಗೂ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಧಾರವಾಡ ಪಶ್ಚಿಮ ಹಾಗೂ ಪೂರ್ವ ಕಚೇರಿಗಳ ತೆರಿಗೆ ಸಂಗ್ರಹ ಕಳೆದ ಏಪ್ರಿಲ್‌ ತಿಂಗಳಿನಿಂದ ಅಂದಾಜು ಶೇ. 60 ಕುಂಠಿತಗೊಂಡಿದೆ.

Advertisement

ಆರ್‌ಟಿಒ ಕಚೇರಿಯಲ್ಲಿ ಎಲ್‌ಎಲ್‌ಆರ್‌, ಪರ್ಮಿಟ್‌, ತೆರಿಗೆ, ಶುಲ್ಕ, ಎನ್‌ಫೋರ್ಸ್‌ಮೆಂಟ್‌ ತಪಾಸಣೆ ದಂಡವಾಗಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಆದರೆ ಲಾಕ್‌ಡೌನ್‌ ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಹೊಸ ವಾಹನಗಳ ಖರೀದಿ ಕಡಿಮೆಯಾಗಿದ್ದರಿಂದ ಹಾಗೂ ಸಾರಿಗೆ ವಾಹನಗಳ ಸಂಚಾರ ಕುಂಠಿತಗೊಂಡಿದ್ದರಿಂದ ಆರ್‌ಟಿಒ ಕಚೇರಿಯ ತೆರಿಗೆ ಸಂಗ್ರಹದಲ್ಲೂ ಇಳಿತವಾಗಿದೆ.

ಧಾರವಾಡ ಪಶ್ಚಿಮ ಕಚೇರಿ: ರಾಜ್ಯ ಸಾರಿಗೆ ಇಲಾಖೆಯಿಂದ ಧಾರವಾಡ ಪಶ್ಚಿಮ ಆರ್‌ಟಿಒ ಕಚೇರಿಗೆ ಪ್ರತಿ ತಿಂಗಳಿಗೆ ಅಂದಾಜು 6.58 ಕೋಟಿ ರೂ.ದಂತೆ ವರ್ಷಕ್ಕೆ 78.96 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನೀಡಲಾಗಿದೆ. ಆದರೆ ಏಪ್ರಿಲ್‌ನಲ್ಲಿ ಕೇವಲ ಅಂದಾಜು 66ಲಕ್ಷ ರೂ. ಮಾತ್ರ ತೆರಿಗೆ ಸಂಗ್ರಹವಾಗಿದೆ. ಇದು ಶೇ. 10.32ರಷ್ಟಾಗಿದೆ. ಮೇ ತಿಂಗಳಿನಲ್ಲಿ ಅಂದಾಜು 2.61ಕೋಟಿ ರೂ., ಜೂನ್‌ ದಲ್ಲಿ ಅಂದಾಜು 4.80ಕೋಟಿ ರೂ. ಹಾಗೂ ಜುಲೈ 24ರ ವರೆಗೆ ಅಂದಾಜು 3.34ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಅಂದರೆ ಶೇ.50ಕ್ಕಿಂತಲೂ ಕಡಿಮೆ ತೆರಿಗೆ ಸಂಗ್ರಹವಾಗಿದೆ. ಏಪ್ರಿಲ್‌ನಿಂದ ಜೂನ್‌ವರೆಗೆ ಅಂದಾಜು 20 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ 11,66,14,880 ರೂ.ದಷ್ಟು ಕಡಿಮೆ ತೆರಿಗೆ ಸಂಗ್ರಹವಾಗಿದೆ.

2019ರ ಜೂನ್‌ವರೆಗೆ 17,37,14,712ಕೋಟಿ ರೂ. ಹಾಗೂ ಜುಲೈವರೆಗೆ 22,07,65,848ಕೋಟಿ  ರೂ. ತೆರಿಗೆ ಸಂಗ್ರಹವಾಗಿತ್ತು. ಆದರೆ 2020ರ ಜೂನ್‌ವರೆಗೆ 8,07,85,120 ಕೋಟಿ ರೂ. ಹಾಗೂ ಜುಲೈವರೆಗೆ 11,42,26,226ಕೋಟಿ ರೂ. ಮಾತ್ರ ಸಂಗ್ರಹವಾಗಿದೆ.

ಧಾರವಾಡ ಪೂರ್ವ ಕಚೇರಿ: ಧಾರವಾಡ ಪೂರ್ವ ಆರ್‌ಟಿಒ ಕಚೇರಿಗೆ ಪ್ರತಿ ತಿಂಗಳಿಗೆ ಅಂದಾಜು 7.68 ಕೋಟಿ ರೂ.ದಂತೆ ವರ್ಷಕ್ಕೆ 92.16 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನೀಡಲಾಗಿದೆ. ಆದರೆ 2020ರ ಏಪ್ರಿಲ್‌ನಿಂದ ಜೂನ್‌ ವರೆಗೆ ಒಟ್ಟು 23.04ಕೋಟಿ ರೂ. ತೆರಿಗೆ ಸಂಗ್ರಹದಲ್ಲಿ ಕೇವಲ 10.34 ಕೋಟಿ ರೂ. ಮಾತ್ರ ತೆರಿಗೆ ಸಂಗ್ರಹವಾಗಿದ್ದು, ಅಂದಾಜು 13ಕೋಟಿ ರೂ.ದಷ್ಟು ತೆರಿಗೆ ಕುಂಠಿತಗೊಂಡಿದೆ. ಅಂದರೆ ಶೇ. 44.91ಮಾತ್ರ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 81.47ತೆರಿಗೆ ಸಂಗ್ರಹವಾಗಿತ್ತು.

Advertisement

2019ರಲ್ಲಿ ಧಾರವಾಡ ಪೂರ್ವ ಆರ್‌ಟಿಒ ಕಚೇರಿಯ ಗುರಿಯು ಪ್ರತಿ ತಿಂಗಳಿಗೆ ಅಂದಾಜು 7.16ಕೋಟಿ ರೂ.ನಂತೆ ವರ್ಷಕ್ಕೆ 85.92ಕೋಟಿ ರೂ. ಇತ್ತು. ಈ ವೇಳೆ ಏಪ್ರಿಲ್‌ನಿಂದ ಜೂನ್‌ವರೆಗೆ 21,85,00,791 ರೂ. ತೆರಿಗೆ ಸಂಗ್ರಹವಾಗಿತ್ತು. ಇದು ಶೇ. 94.93ರಷ್ಟಾಗಿತ್ತು. ಅದೇ 2020ರ ಏಪ್ರಿಲ್‌ನಿಂದ ಜೂನ್‌ವರೆಗೆ 10,34,79,938 ರೂ. ತೆರಿಗೆ ಸಂಗ್ರಹವಾಗಿದ್ದು, ಇದು ಶೇ.44.91ರಷ್ಟಾಗಿದೆ.

ಕೋವಿಡ್ ವೈರಸ್‌ ನಿಮಿತ್ತ ಲಾಕ್‌ಡೌನ್‌ ಹಾಗೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರ್‌ಟಿಒ ಕಚೇರಿಯಲ್ಲಿ ತೆರಿಗೆ ಸಂಗ್ರಹ ಕುಂಠಿತಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತೆರಿಗೆ ಸಂಗ್ರಹವು ಶೇ.50ಕ್ಕಿಂತ ಕಡಿಮೆಯಾಗಿದೆ. ಈ ವರ್ಷದ ಏಪ್ರಿಲ್‌ನಿಂದ ಜೂನ್‌ವರೆಗೆ ಹೊಂದಲಾಗಿದ್ದ 23.04 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯಲ್ಲಿ ಕೇವಲ 10.34ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಇದು ಶೇ. 44.91ರಷ್ಟಾಗಿದ್ದು, ಅಂದಾಜು 13ಕೋಟಿ ರೂ.ದಷ್ಟು ಕಡಿಮೆಯಾಗಿದೆ. – ಅಪ್ಪಯ್ಯ ನಾಲ್ವತ್ವಾಡಮಠ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಧಾರವಾಡ ಪೂರ್ವ.

ಲಾಕ್‌ಡೌನ್‌ದಿಂದ ತೆರಿಗೆ ಸಂಗ್ರಹ ಕುಂಠಿತಗೊಂಡಿದೆ. ಏಪ್ರಿಲ್‌ನಿಂದ ಜೂನ್‌ವರೆಗಿನ ಅಂದಾಜು 20 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಅದರಲ್ಲಿ 11,66,14,880 ರೂ.ದಷ್ಟು ಕಡಿಮೆ ತೆರಿಗೆ ಸಂಗ್ರಹವಾಗಿದೆ. ಏಪ್ರಿಲ್‌ನಲ್ಲಿ ಕೇವಲ ಶೇ.10.32ರಷ್ಟು ತೆರಿಗೆ ಸಂಗ್ರಹವಾಗಿದೆ. –ಸಿ.ಡಿ. ನಾಯಕ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಧಾರವಾಡ ಪಶ್ಚಿಮ.

 

-ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next