Advertisement

ಸಾಲು ಮರಗಳ ತೆರವಿಗೆ ಕಟ್ಟಬೇಕಾದುದುದು 395 ಕೋಟಿ, ಕಟ್ಟಿದ್ದು 43 ಲಕ್ಷ.!

05:06 PM Feb 28, 2022 | Suhan S |

ಸಾಗರ: ನಗರದ ತ್ಯಾಗರ್ತಿ ಕ್ರಾಸಿನಿಂದ ಎಲ್‌ಬಿ ಕಾಲೇಜುವರೆಗಿನ ರಸ್ತೆ ಅಗಲೀಕರಣಕ್ಕಾಗಿ 488 ಮರಗಳನ್ನು ತೆರವುಗೊಳಿಸಲು ಸಾಗರದ ಉಪ ಅರಣ್ಯಸಂರಕ್ಷಣಾಧಿಕಾರಿಯಾದ ಮೋಹನ್ ಕುಮಾರ್ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ 43.40 ಲಕ್ಷ ರೂ. ಹಣವನ್ನು ಕಟ್ಟಿಸಿಕೊಂಡಿದ್ದಾರೆ. ಸರ್ವೋಚ್ಛ ನ್ಯಾಯಾಲಯ ನಿಯಮಿಸಿದ ಸಮಿತಿಯ ವರದಿಯ ಪ್ರಕಾರ 365  ಕೋಟಿ ರೂಪಾಯಿಗಳನ್ನು ಕಟ್ಟಸಿಕೊಳ್ಳಬೇಕಿತ್ತು. ಈ ವರದಿಯ ಮಾನದಂಡದ ಪ್ರಕಾರ ಬಾಕಿ ಹಣವನ್ನು ವಸೂಲಿ ಮಾಡಬೇಕು ಎಂಬ ಮನವಿಯನ್ನು ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಳಿ ಅರಣ್ಯ ಇಲಾಖೆ ಡಿಎಫ್‌ಓ ಅವರಿಗೆ ಸೋಮವಾರ ನೀಡಿದರು.

Advertisement

ಸಾಲು ಮರಗಳಿಗೆ ನಿಗದಿ ಮಾಡಿದ ಪರಿಹಾರ ದರವು ತೀರಾ ಅವೈಜ್ಞಾನಿಕವಾಗಿದೆ. ಸರ್ವೋಚ್ಛ ನ್ಯಾಯಾಲಯ ನಿಯಮಿಸಿದ ಸಮಿತಿಯ ವರದಿಯ ಪ್ರಕಾರ ಮರಗಳು ನೀಡುವ ನೈಸರ್ಗಿಕ ಸೇವೆಗಳ ಮೊತ್ತದ ಅನ್ವಯ 365 ಕೋಟಿ ರೂ. ಕಟ್ಟಿಸಿಕೊಳ್ಳಬೇಕಿತ್ತು ಹಾಗೂ ಪಾರಂಪಾರಿಕ ಮರಗಳನ್ನು ತೆರವುಗೊಳಿಸಿದ ನಂತರದಲ್ಲಿ ಒಂದು ಮರಕ್ಕೆ ಕನಿಷ್ಠ ಐವತ್ತು ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸಲು ಯೋಜನೆ ಹಾಕಿಕೊಳ್ಳಬೇಕಿತ್ತು. ಆದರೆ ಸಾಗರದ ಅರಣ್ಯ ಇಲಾಖೆಯವರು ಒಂದು ಮರಕ್ಕೆ ಹತ್ತು ಗಿಡಗಳನ್ನು ಮಾತ್ರ ನೆಡಲು ಯೋಜನೆ ರೂಪಿಸಿದೆ ಎಂದು ಆಗಿರುವ ಲೋಪಗಳತ್ತ ಅವರು ಬೆಳಕು ಚೆಲ್ಲಿದ್ದಾರೆ.

ಈ ಷರತ್ತನ್ನು ಬದಲಿಸಿ ಕಡಿದ ಒಂದು ಮರಕ್ಕೆ ಐವತ್ತು ಗಿಡಗಳನ್ನು ನೆಡಬೇಕು ಹಾಗೂ ರಾಷ್ಟ್ರೀಯ  ಹೆದ್ದಾರಿ ಇಲಾಖೆಯಿಂದ ಬಾಕಿ ಹಣವನ್ನು ವಸೂಲಿ ಮಾಡಬೇಕು ಎಂಬ ಮನವಿಯನ್ನು ನೀಡಲಾಯಿತು. ತಪ್ಪಿದಲ್ಲಿ ಈ ಮೊತ್ತವನ್ನು ಸಾಗರದ ಉಪ ಅರಣ್ಯಸಂರಕ್ಷಣಾಧಿಗಳು ಭರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಒಂದು ಬದಿಯ ಮರವನ್ನಾದರೂ ಉಳಿಸುವ ಪ್ರಯತ್ನ ಮಾಡುತ್ತೇನೆ. ಇದಕ್ಕಾಗಿ ಫೆಬ್ರುವರಿ 16 ರಂದು ದೆಹಲಿಗೆ ಹೋಗಿ ಹೆದ್ದಾರಿ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ನೀಡಿದ ಭರವಸೆ ಹುಸಿಯಾಗಿದೆ. ಈ ಬಾಕಿ ಹಣ ಪಾವತಿ ಹಾಗೂ 50 ಗಿಡಗಳ ನೆಡುವ ಗುರಿ ಸಂಬಂಧ ಸುಪ್ರೀಂಕೋರ್ಟ್ ನಿಯಮಿಸಿದ ಸಮಿತಿ, ಕೇಂದ್ರ ಸರ್ಕಾರದ ಪರಿಸರ ಇಲಾಖೆ, ರಾಜ್ಯದ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಸಿಸಿಎಫ್ ಮೊದಲಾದವರಿಗೂ ಕಳುಹಿಸಿಕೊಡಲಾಗಿದೆ ಎಂದು ಅಖಿಲೇಶ್ ಪತ್ರಿಕೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.