ಬೆಂಗಳೂರು: ರೈತರು ಹಾಲಿನ ಖರೀದಿ ದರ ಏರಿಕೆಗೆ ಸಂಬಂಧಿಸಿದ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದಾರೆ. ಎಷ್ಟು ಮಾಡಬೇಕು ಎಂದು ನಿಗದಿಯಾಗಿಲ್ಲ. ಜೂನ್‌ನಲ್ಲಿ ಹಾಲು ಖರೀದಿ ದರ ಏರಿಕೆ ಮಾಡಲಾಗುತ್ತದೆ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಕೆ. ವೆಂಕಟೇಶ್ ತಿಳಿಸಿದರು.
ಇಂಡಿಯನ್ ಡೈರಿ ಅಸೋಸಿಯೇಶನ್ ಬೆಂಗಳೂರಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರಿಗೆ ಅತ್ಯುತ್ತಮ ಮಹಿಳಾ ಹೈನುಗಾರಿಕಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಹಾಲು ಮತ್ತದರ ಉತ್ಪನ್ನಗಳ ಮೇಲೆ ಹೆಚ್ಚಿನ ರೈತರು ಅವಲಂಬಿತರಾಗಿದ್ದಾರೆ. ರೈತರಿಗೆ ಕೃಷಿ ಎಷ್ಟು ಮುಖ್ಯವೋ, ಹೈನುಗಾರಿಕೆಯೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಹೈನುಗಾರಿಕೆ ಉಳಿಸಿ ಬೆಳೆಸುವ ಜವಾಬ್ದಾರಿ ಸರಕಾರದ ಮೇಲಿದೆ. ಬೆಲೆಯೇರಿಕೆಯ ಬೇಡಿಕೆ ಸರಕಾರದ ಮುಂದಿದೆ. ಒಕ್ಕೂಟದ ಮುಖಂಡರೊಂದಿಗೆ ಚರ್ಚೆ ಮಾಡಿ ನಿರ್ಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಮಾತನಾಡಲಾಗುತ್ತದೆ ಎಂದರು.
ಕರ್ನಾಟಕದ ಮಂಡ್ಯ ಜಿಲ್ಲೆಯ ಡಿಂಕ ಗ್ರಾಮದ ಮಂಗಳಮ್ಮ ಅವರು ಅತ್ಯುತ್ತಮ ಮಹಿಳಾ ಹೈನುಗಾರಿಕಾ ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರು ಕಳೆದ ವರ್ಷ 1 ಲಕ್ಷ ಲೀ.ಗೂ ಹೆಚ್ಚು ಹಾಲು ಪೂರೈಸಿ, 30 ಲಕ್ಷ ರೂ.ಗಳಿಗಿಂತ ಹೆಚ್ಚು ಆದಾಯಗಳಿಸಿದ್ದಾರೆ. ಉಳಿದಂತೆ ಕೇರಳದ ಕೊಟ್ಟಾಯಂ ಜಿಲ್ಲೆಯ ಮುಟ್ಟುಚಿರಾ ಗ್ರಾಮದ ವಿಧು ರಾಜೀವ್, ತೆಲಂಗಾಣದ ಜಗಿತ್ಯೆಲ್ಲಾ ಗ್ರಾಮಾಂತರ ಜಿಲ್ಲೆಯ ಸಂಗಟಪಲ್ಲಿ ಗ್ರಾಮದ ಪುಢಾರಿ ಗಂಗವ್ವ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದ್ದಿರಾಳ ಗ್ರಾಮದ ನವೀನ ಕುಮಾರಿ, ತಮಿಳುನಾಡಿನ ತಿರುಪುರ್‌ಜಿಲ್ಲೆಯ ಕೊಡಗಿಪಾಳ್ಯಂ ಗ್ರಾಮದ ಸೆಲ್ವನಾಯಕಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.