ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ಬೆಲೆಬಾಳುವ ತಾಮ್ರ ಮತ್ತು ಹಿತ್ತಾಳೆ ವಸ್ತುಗಳನ್ನು ಕಳವು ಮಾಡುತ್ತಿದ್ದ ಮ್ಯಾನೇಜರ್‌ನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ಮೊಹಮ್ಮದ್ ಸಫ್ವಾನ್(26) ಬಂಧಿತ. ಆರೋಪಿಯಿಂದ ಸುಮಾರು 4.50 ಲಕ್ಷ ರೂ. ಮೌಲ್ಯದ ಹಿತ್ತಾಳೆ ವಸ್ತಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಬಿಟಿಎಂ ಲೇಔಟ್ ನ 1ನೇ ಹಂತದ ಭುವನಪ್ಪ ಲೇಔಟ್‌ನ ಟೆರೆಸ್ ಕೆಫೆ ಎಂಬ ಹೋಟೆಲ್‌ನಲ್ಲಿ ತಾಮ್ರ ಮತ್ತು ಹಿತ್ತಾಳೆ ವಸ್ತುಗಳನ್ನು ಕಳ್ಳತನ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇನ್‌ಸ್ಪೆಕ್ಟರ್ ಎಂ.ಎ.ಮೊಹಮ್ಮದ್ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮಾಲಿಕರು, ಸಿಬ್ಬಂದಿ ಕಣ್ತಪ್ಪಿಸಿ ಕಳವು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಸುನತ್ ಕೆರೆ ಗ್ರಾಮದ ಆರೋಪಿ ಮೊಹಮ್ಮದ್ ಸಫ್ವಾನ್ ಪದವಿ ವ್ಯಾಸಂಗ ಅರ್ಧಕ್ಕೆ ಮಾಟಕುಗೊಳಿಸಿದ್ದಾನೆ. ಕಳೆದ ಎರಡು ತಿಂಗಳಿಂದ ನಗರದ ಟೆರೆಸ್ ಕೆಫೆ ಹೋಟೆಲ್‌ನಲ್ಲಿ ಆತ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದ. ಹೋಟೆಲ್‌ನ ತಾಮ್ರ ಮತ್ತು ಹಿತ್ತಾಳೆ ವಸ್ತುಗಳನ್ನು ಮಾಲಿಕರು ಹಾಗೂ ಸಿಬ್ಬಂದಿ ಕಣ್ತಪ್ಪಿಸಿ ಒಂದೊಂದೇ ವಸ್ತುಗಳನ್ನು ಕಳವು ಮಾಡಿದ್ದ ಎಂದು ಪೊಲೀಸರು ಹೇಳಿದರು.
ಕದ್ದ ಮಾಲುಗಳ ಪೈಕಿ ಕೆಲವನ್ನು ಕಾಟನ್‌ಪೇಟೆ ಗುಜರಿಯಲ್ಲಿ ಮಾರಾಟ ಮಾಡಿದ್ದ. ಉಳಿದ ವಸ್ತುಗಳನ್ನು ಸ್ವಂತ ಊರಿನ ಮನೆಯಲ್ಲಿ ಇರಿಸಿದ್ದ. ಹೋಟೆಲ್‌ನಲ್ಲಿ ತಾಮ್ರ ಮತ್ತು ಹಿತ್ತಾಳೆ ವಸ್ತುಗಳು ಕಳುವಾಗುತ್ತಿರು ವುದನ್ನು ಗಮನಿಸಿ ಹೋಟೆಲ್ ಮಾಲಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ವಿಚಾರಣೆ ನಡೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಹೋಟೆಲ್ ಮ್ಯಾನೆಜರ್ ಮೊಹಮ್ಮದ್ ಸಫ್ವಾನ್ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ತೀವ್ರ ರೀತಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿ ಕದ್ದ ವಸ್ತುಗಳು ಏನೇನು?
ಆರೋಪಿ ನೀಡಿದ ಮಾಹಿತಿ ಮೇರೆಗೆ ಕಾಟನ್‌ಪೇಟೆಯ ಗುಜರಿಯಿಂದ 2 ಹಿತ್ತಾಳೆ ದೀಪಗಳು, 1 ಹಿತ್ತಾಳೆ ಟೇಬಲ್, 10 ತಾಮ್ರದ ಜಗ್ಗುಗಳು, 85 ತಾಮ್ರದ ಲೋಟಗಳು, 1 ಹಿತ್ತಾಳೆ ಗಣೇಶನ ಮುಖವಿರುವ ವೀಣೆ ಜಪ್ತಿ ಮಾಡಲಾಗಿದೆ. ಆರೋಪಿಯ ಸ್ವಂತ ಊರು ಬೆಳ್ತಂಗಡಿಯ ಮನೆಯಲ್ಲಿ 19 ತಾಮ್ರದ ಬೌಲ್‌ಗಳು, ಕೃಷ್ಣ, ಹಸು ಇರುವ ಹಿತ್ತಾಳೆ ದೇವರ ವಿಗ್ರಹಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.