Advertisement

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

02:38 AM Jan 15, 2025 | Team Udayavani |

ಬೆಳಗಾವಿ: ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿ ನಗರಕ್ಕೆ ವಾಪಸಾಗುತ್ತಿದ್ದಾಗ ಚನ್ನಮ್ಮನ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಮಂಗಳವಾರ ಕಾರು ಮರಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಅವರ ಸಹೋದರ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬೆನ್ನಿನ ಮೂಳೆಯಲ್ಲಿ (ಎಲ್‌1-ಎಲ್‌4) ಸೀಳು ಕಂಡು ಬಂದಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಹೋದರ ಚನ್ನರಾಜ ಹಟ್ಟಿಹೊಳಿ ಅವರ ಮುಖ, ಬಲ ಭುಜಕ್ಕೆ ಗಾಯವಾಗಿದ್ದು ಹೊರರೋಗಿಯಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ವಾಹನ ಚಾಲಕ ಹಾಗೂ ಗನ್‌ಮ್ಯಾನ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷ ಸಭೆ ಮುಗಿಸಿಕೊಂಡು ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಸಚಿವರು ಕಾರಿನಲ್ಲಿ ಹೊರಟಿದ್ದರು. ಚಾಲಕನ ಪಕ್ಕದಲ್ಲಿ ಗನ್‌ಮ್ಯಾನ್‌ ಕುಳಿತಿದ್ದು, ಹಿಂಬದಿ ಸೀಟ್‌ನಲ್ಲಿ ಸಚಿವೆ ಹಾಗೂ ಸಹೋದರ ಇದ್ದರು. ಅಂಬಡಗಟ್ಟಿ ಸಮೀಪ ಬೆಳಗ್ಗೆ 5 ಗಂಟೆ ಸುಮಾರಿಗೆ 2 ನಾಯಿಗಳು ಅಡ್ಡಬಂದಿವೆ. ಜತೆಗೆ ಎದುರು ಕ್ಯಾಂಟರ್‌ ವಾಹನ ಹೊರಟಿತ್ತು.

ನಾಯಿ ಹಾಗೂ ಕ್ಯಾಂಟರ್‌ ತಪ್ಪಿಸುವ ಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಾಷ್ಟ್ರೀಯ ಹೆದ್ದಾರಿ-4ರಿಂದ ನೇರವಾಗಿ ಸರ್ವೀಸ್‌ ರಸ್ತೆಗಿಳಿದು ಮರಕ್ಕೆ ಜೋರಾಗಿ ಢಿಕ್ಕಿ ಹೊಡೆದಿದೆ. ಈ ವೇಳೆ ಸಚಿವರು ನಿದ್ದೆ ಮಾಡುತ್ತಿದ್ದರು. ಢಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರಿಗೂ ಗಾಯಗಳಾಗಿವೆ. ಕಾರಿನ ಏರ್‌ಬ್ಯಾಗ್‌ ತೆರೆದುಕೊಂಡಿದ್ದರಿಂದ ಪ್ರಾಣಕ್ಕೆ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.

Advertisement

ಈ ಅಪಘಾತ ಸಂಭವಿಸಿದಾಗ ಕತ್ತಲಿತ್ತು. ಪಕ್ಕದ ಲಾರಿ ಪಾರ್ಕಿಂಗ್‌ನ ಸೆಕ್ಯೂರಿಟಿ ಗಾರ್ಡ್‌ ಬಂದು ರಕ್ಷಣೆ ಮಾಡಿದ್ದಾರೆ. ಕಾರು ಚಾಲಕ ಹಾಗೂ ಗನ್‌ಮ್ಯಾನ್‌ ಚೇತರಿಸಿಕೊಂಡು ಸಚಿವರನ್ನು ಆರೈಕೆ ಮಾಡಿ ಕುಡಿಯಲು ನೀರು ಕೊಟ್ಟಿದ್ದಾರೆ. ಅನಂತರ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಜನರು ಧಾವಿಸಿದ್ದಾರೆ. ಖಾಸಗಿ ಕಾರಿನಲ್ಲಿ ಹೆಬ್ಟಾಳ್ಕರ್‌ ಹಾಗೂ ಚನ್ನರಾಜ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಳಕ್ಕೆ ಕಿತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪತಿ ಸೇರಿ ಗಣ್ಯರ ಭೇಟಿ
ಅಪಘಾತದ ವಿಷಯ ತಿಳಿದು ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಹೆಬ್ಬಾಳ್ಕರ್‌ ಪತಿ ರವೀಂದ್ರ ಹೆಬ್ಬಾಳ್ಕರ್‌ , ಗಣ್ಯರಾದ ಶಾಸಕಿ ಶಶಿಕಲಾ ಜೊಲ್ಲೆ ದಂಪತಿ, ಕಾಂಗ್ರೆಸ್‌, ಬಿಜೆಪಿ ನಾಯಕರು ಭೇಟಿ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಭಾಪತಿ ಬಸವರಾಜ ಹೊರಟ್ಟಿ, ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕರು ಕರೆ ಮಾಡಿ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಅಪಘಾತವಾಗಿದ್ದು ಹೇಗೆ?
-ಶಾಸಕಾಂಗ ಪಕ್ಷದ ಸಭೆ ಮುಗಿಸಿ ತಡರಾತ್ರಿ ಸಹೋದರನ ಜತೆ ಕಾರಿನಲ್ಲಿ ಹೊರಟಿದ್ದ ಸಚಿವೆ

– ಅಂಬಡಗಟ್ಟಿ ಬಳಿ ಕಾರಿಗೆ ದಿಢೀರ್‌ ಅಡ್ಡ ಬಂದ 2 ನಾಯಿ, ಜತೆಗೆ ಎದುರು ಬಂದ ಕ್ಯಾಂಟರ್‌

– ಚಾಲಕನ ನಿಯಂತ್ರಣ ತಪ್ಪಿ ಕಾರು ಹೆದ್ದಾರಿ-4ರಿಂದ ನೇರವಾಗಿ ಸರ್ವೀಸ್‌ ರಸ್ತೆಗಿಳಿದು ಮರಕ್ಕೆ ಢಿಕ್ಕಿ

– ಈ ವೇಳೆ ನಿದ್ದೆ ಮಾಡುತ್ತಿದ್ದ ಸಚಿವೆ ಹೆಬ್ಟಾಳ್ಕರ್‌, ಏರ್‌ಬ್ಯಾಗ್‌ ತೆರೆದುಕೊಂಡಿದ್ದರಿಂದ ಪಾರು

ಸಂಕ್ರಾಂತಿಗೆ ಬರುತ್ತಿದ್ದರು
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆ ಬೇಗ ಮನೆಗೆ ಬಂದು ಕುಟುಂಬ ಸಮೇತ ತವರೂರು ಹಟ್ಟಿಹೊಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗುವವರಿದ್ದರು. ಹೀಗಾಗಿ ರಾತ್ರಿಯೇ ಬೆಂಗಳೂರು ಬಿಟ್ಟರೆ ನಿಗದಿತ ಸಮಯಕ್ಕೆ ಮನೆಗೆ ತಲುಪಬಹುದು ಎಂದುಕೊಂಡಿದ್ದರು. ಸಾಮಾನ್ಯವಾಗಿ ಹೆಬ್ಟಾಳ್ಕರ್‌ ವಿಮಾನ ಹಾಗೂ ಕಾರು ಪ್ರಯಾಣ ಎರಡನ್ನೂ ಮಾಡುತ್ತಾರೆ. ಕಾರಿನಲ್ಲಿ ಅನೇಕ ಸಲ ಬೆಂಗಳೂರು-ಬೆಳಗಾವಿ ಪ್ರಯಾಣ ಬೆಳೆಸಿರುವ ಉದಾಹರಣೆಗಳಿವೆ.

ಡೀಸೆಲ್‌ ಹಾಕಿಸಿದ್ದರೆ...
ಅಪಘಾತವಾಗುವ 15 ನಿಮಿಷ ಮುನ್ನ ಬೆಳಗ್ಗೆ 4.55ರ ಸುಮಾರಿಗೆ ಧಾರವಾಡದ ಐಒಸಿಎಲ್‌ ಬಳಿ ಡೀಸೆಲ್‌ ಹಾಕಿಸಲು ಬಂಕ್‌ ಕಡೆಗೆ ಹೋಗಿದ್ದೆವು. ಆದರೆ ಅಲ್ಲಿ ಡೀಸೆಲ್‌ ಹಾಕುವವರು ಯಾರೂ ಇರಲಿಲ್ಲ. ಕಿತ್ತೂರು ದಾಟಿ ಅಂಬಡಗಟ್ಟಿ ಕ್ರಾಸ್‌ ಬಳಿ ಬರುವಷ್ಟರಲ್ಲಿಯೇ ಅಪಘಾತ ಸಂಭವಿಸಿದೆ. ಒಂದು ವೇಳೆ ಡೀಸೆಲ್‌ ಬಂಕ್‌ ಓಪನ್‌ ಇದ್ದಿದ್ದರೆ 15 ನಿಮಿಷ ಬೇಕಾಗುತ್ತಿತ್ತು. ಈ ಅಪಘಾತದಿಂದ ಪಾರಾಗಬಹುದಾಗಿತ್ತು ಎಂದು ಚನ್ನರಾಜ ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.