ಚನ್ನಪಟ್ಟಣ: ಶೆಟ್ಟಿಹಳ್ಳಿ ಮತ್ತೀಕೆರೆ ಮಧ್ಯದ ರಾಷ್ಟ್ರೀಯ ಹೆದ್ದಾರಿ 275ಗೆ ಎರಡು ಗ್ರಾಮಗಳಿಗೆ ಸಂಪರ್ಕವಾಗಿ ಕೆಳಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಎರಡು ಗ್ರಾಮಗಳ ಮಧ್ಯೆ ಕೆಳ ಸೇತುವೆ ಬದಲಾಗಿ ಗ್ರಾಮದಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿ ಅಂಡರ್ ಪಾಸ್ ಮಾಡಲಾಗುತ್ತಿದೆ. ಇದು ಅವೈಜ್ಞಾನಿಕ ಎಂದು ಎರಡು ಗ್ರಾಮದ ಮಂದಿ ಅಸಮಾಧಾನ ವ್ಯಕ್ತಪಡಿಸಿ, ಅಂಡರ್ ಪಾಸ್ ಸೇತುವೆ ನಿರ್ಮಾಣ ಕಾಮಗಾರಿ ತಡೆದು ಪ್ರತಿಭಟನೆ ಮಾಡಿದರು.
ಅವೈಜ್ಞಾನಿಕ ಸೇತುವೆಯಿಂದ ಮತ್ತೀಕೆರೆ ಶೆಟ್ಟಿಹಳ್ಳಿ ಆದರ್ಶ ಶಾಲೆ, ಕುವೆಂಪು ಪ್ರಾಥಮಿಕ ಪಾಠ ಶಾಲೆ, ಸಾರ್ವಜನಿಕ ಹೈಸ್ಕೂಲ್, ಕಾಲೇಜು, ವಿದ್ಯಾರ್ಥಿಗಳು ಪ್ರತಿ ದಿನ ಶಾಲಾ ಕಾಲೇಜಿಗೆ ಬರಲು ಸುಮಾರು ಅರ್ಧ ಕಿಲೋಮೀಟರ್ ದೂರ ಹೋಗಿ ಅಲ್ಲಿ ತಿರುವು ಪಡೆದು ಬರಬೇಕಾಗಿದೆ. ಪ್ರಮುಖವಾಗಿ ಮತ್ತೀಕೆರೆಯಲ್ಲಿ ಗ್ರಾಪಂ ಇರುವುದರಿಂದ ಮತ್ತೀಕೆರೆ, ಶೆಟ್ಟಿಹಳ್ಳಿ, ಸಂಕಲಗೆರೆ, ವಳಗೆರೆದೊಡ್ಡಿ, ಹೊಸುರುದೊಡ್ಡಿ, ದೇವರಹಳ್ಳಿ ಗ್ರಾಮದ ನಾಗರಿಕರು ಪ್ರತಿದಿನ ತಮ್ಮ ಕೆಲಸ ಕಾರ್ಯನಿಮಿತ್ತ ಪಂಚಾಯಿತಿಗೆ ಬರಬೇಕಾದರೆ ಸಾಕಷ್ಟು ತೊಂದರೆ ಅನುಭವಿಸುವಂತಾಗುತ್ತದೆ ಎಂದು ಗ್ರಾಮಸ್ಥರು ಅಲವತ್ತುಗೊಂಡರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತೀಕೆರೆ ಶೆಟ್ಟಿಹಳ್ಳಿ ಗ್ರಾಮದ ಬಳಿ ಸೇತುವೆ ಮಾಡಲು ಮುಂದಾಗಬೇಕು. ಈ ವಿಚಾರದಲ್ಲಿ ನ್ಯಾಯ ಸಿಗುವವರೆಗೆ ಹೋರಾಟಕ್ಕೆ ಮುಂದಾಗುವುದು. ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕು. ವಿಳಂಬ ನೀತಿ ಅನುಸರಿಸಿದರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲು ಮುಂದಾಗುವುದಾಗಿ ಎಚ್ಚರಿಕೆ ನೀಡಲಾಯಿತು.
ಗ್ರಾಮಸ್ಥರಾದ ಹರೀಶ್, ಪ್ರಕಾಶ್, ಎಸ್.ಸಿ. ವಿಜೇಂದ್ರ, ಎಂ.ಕೆ.ಜಯರಾಜ್, ಭೀಮೇಶ್, ಧರ್ಮ ನಂದನ್, ಚಲುವರಾಜ್, ಮಂಜೇಶ್ ಬಾಬು, ಶ್ರೀನಿವಾಸ್, ಉಮೇಶ್, ಮನು ಇತರರು ಹಾಜರಿದ್ದರು.