ವಿಜಯಪುರ: ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಮನಗೂಳಿ ಬಳಿ ವಿವಿ ಪ್ಯಾಟ್ ಬಾಕ್ಸ್ ಪತ್ತೆ ಹಿನ್ನೆಲೆಯಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ಪರಾಜಿತ ಅಭ್ಯರ್ಥಿ ವಿಜುಗೌಡ ಪಾಟೀಲ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಸೋಮವಾರ ಬಬಲೇಶ್ವರ ನಾಕಾದಲ್ಲಿರುವ ವಿಜುಗೌಡ ನಿವಾಸದಿಂದ ಹೊರಟ ಬೃಹತ್ ಪ್ರತಿಭಟನಾ ರ್ಯಾಲಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ವಿಜುಗೌಡ ಪಾಟೀಲ, ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತದಾನದ ಮುನ್ನಾ ದಿನ ಆಲಮಟ್ಟಿ ಪ್ರವಾಸಿ ಮಂದಿರದಲ್ಲಿ ಮಧ್ಯರಾತ್ರಿ 11:45ಕ್ಕೆ ಚುನಾವಣಾ ಅಧಿಕಾರಿಯೊಡನೆ ಮಾತುಕತೆ ನಡೆಸಿದ್ದು ನನ್ನ ಮಾಹಿತಿಗೆ ಬಂದಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ, ಮಧ್ಯರಾತ್ರಿ ಸಚಿವರಾಗಿದ್ದರೂ ಅಭ್ಯರ್ಥಿಗೆ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಕ್ಷೇತ್ರದ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಅದರ ಫಲವೇ ನನ್ನ ಕ್ಷೇತ್ರದ ಮತಯಂತ್ರಗಳ ಅದಲು-ಬದಲಾಗಿ, ಮನಗೂಳಿ ಬಳಿ ಅದಕ್ಕೆ ಸಾಕ್ಷಿ ದೊರಕಿದೆ ಎಂದು ದೂರಿದರು.
ನಾನು ಸ್ಪರ್ಧಿಸಿದ್ದ ಬಬಲೇಶ್ವರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ಮಿತಿ ಮೀರಿದ ಕುರಿತು ಚುನಾವಣಾ ಪೂರ್ವದಲ್ಲೇ ಹೇಳಿದ್ದೆ. ಮತದಾನದ ಬಳಿಕ ಮತಯಂತ್ರಗಳ ಬದಲಾವಣೆ ಮಾಡಿದ್ದಾಗಿಯೂ ಸೂಕ್ತ ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆ. ಆದರೂ ಯಾವೊಬ್ಬ ಅಧಿಕಾರಿಗಳೂ ಕನಿಷ್ಠ ಕ್ರಮಕ್ಕೂ ಮುಂದಾಗಲಿಲ್ಲ. ಇದೀಗ
ರಾಷ್ಟ್ರೀಯ ಹೆದ್ದಾರಿ 13ರಲ್ಲಿನ ಮನಗೂಳಿ ಗ್ರಾಮದ ಬಳಿ ಕಾರ್ಮಿಕರ ಶೆಡ್‌ನಲ್ಲಿ ವಿವಿ ಪ್ಯಾಟ್ ಸಿಕ್ಕಿದ್ದು, ಬಬಲೇಶ್ವರ ಕ್ಷೇತ್ರದಲ್ಲಿನ ಚುನಾವಣಾ ಅಕ್ರಮಕ್ಕೆ ಜೀವಂತ ಸಾಕ್ಷಿ ಎಂದು ಕಿಡಿ ಕಾರಿದರು.
ಇನ್ನಾದರೂ ಚುನಾವಣಾ ಆಯೋಗದ ಅಧಿಕಾರಿಗಳು ಬಬಲೇಶ್ವರ ಕ್ಷೇತ್ರದ ಫಲಿತಾಂಶವನ್ನು ರದ್ದು ಮಾಡಿ, ಮರು ಚುನಾವಣೆ ನಡೆಸಬೇಕು. ಇಡಿ ಪ್ರಕರಣವನ್ನು ಸಿಬಿಐಗೆ ವಹಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇನ್ನೆಂದೂ ಚುನಾವಣಾ ಅಕ್ರಮ ನಡೆಯದಂತೆ ಅಗತ್ಯ ಇರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ವಿಜಯಕುಮಾರ ಪಾಟೀಲ, ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಧಿಕಾರಿಗಳ ಸಂಪೂರ್ಣ ಸಹಕಾರದಿಂದಲೇ ಚುನಾವಣೆ ಅಕ್ರಮ ನಡೆದಿದೆ. ಈ ಕುರಿತು ನನ್ನ ಬಳಿ ಅಗತ್ಯ ದಾಖಲೆಗಳಿದ್ದು ಚುನಾವಣಾ ಆಯೋಗಕ್ಕೂ ಈ ದಾಖಲೆ ನೀಡುತ್ತೇನೆ ಎಂದು ಎಚ್ಚರಿಸಿದರು.
ಆರ್.ಎಸ್. ಪಾಟೀಲ ಕುಚಬಾಳ, ರವಿ ಖಾನಾಪುರ, ಕೃಷ್ಣಾ ಗುನ್ನಾಳಕರ, ವಿಜಯಕುಮಾರ ಕುಡಿಗನೂರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.