Advertisement

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

01:45 AM Nov 23, 2024 | Team Udayavani |

ಮಂಗಳೂರು: ಅಡಿಕೆಯು ಆಯುರ್ವೇದೀಯ ಗುಣಗಳನ್ನು ಹೊಂದಿದ್ದರೂ, ಅದು ಕ್ಯಾನ್ಸರ್‌ ಕಾರಕವೆಂಬ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಏಕಪಕ್ಷೀಯ ನಿರ್ಣಯಕ್ಕೆ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್‌ ಕುಮಾರ್‌ ಕೊಡ್ಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಪುರಾತನ ಕಾಲದಿಂದಲೂ ಅಡಿಕೆಯು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನವನ್ನು ಪಡೆದಿದೆ. ಶುಭ ಸಮಾರಂಭಗಳಲ್ಲಿ ವೀಳ್ಯದೆಲೆಯೊಂದಿಗೆ ಅಡಿಕೆಯನ್ನು ಸೇರಿಸಿ ತಾಂಬೂಲ ನೀಡುವುದು ಭಾರತೀಯ ಸಂಸ್ಕೃತಿಯ ಪ್ರತೀಕ. ಆಯುರ್ವೇದ ಶಾಸ್ತ್ರದಲ್ಲೂ ಅಡಿಕೆಗೆ ಅದರ ಔಷಧೀಯ ಗುಣಗಳಿಂದಾಗಿ ವಿಶೇಷ ಸ್ಥಾನಮಾನವಿದೆ. ಡಬ್ಲ್ಯುಎಚ್‌ಒ ವರದಿಗಳು ಸಂಶೋಧನೆಗಳ ಸಂಪೂರ್ಣ ಮಾಹಿತಿಗಳನ್ನು ಬಹಿರಂಗ ಪಡಿಸಿಲ್ಲ. ಹಾಗಾಗಿ ಸತ್ಯಾಸತ್ಯತೆಗಳನ್ನು ಮುಚ್ಚಿಟ್ಟಿರಬಹುದು ಅಥವಾ ವರದಿಗಳನ್ನು ತಿರುಚಿರಬಹುದೆಂಬ ಸಂಶಯ ಮೂಡುತ್ತಿದೆ ಎಂದು ತಿಳಿಸಿದ್ದಾರೆ.

ಕ್ಯಾಂಪ್ಕೊ ಈಗಾಗಲೇ ಹಲವು ಸಂಶೋಧನೆಗಳನ್ನು ನಡೆಸಿದ್ದು, ಅವುಗಳ ವರದಿಗಳೆಲ್ಲ ಅಡಿಕೆ ಕ್ಯಾನ್ಸರ್‌ ಕಾರಕವಲ್ಲ. ಅದು ಶಮನಗೊಳಿಸುವ ಔಷಧೀಯ ಗುಣಗಳನ್ನು ಹೊಂದಿರುವ ಬಗ್ಗೆ ದೃಢಪಡಿಸಿದೆ. 1974ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನವು ತಂಬಾಕು ರಹಿತ ಅಡಿಕೆ ಮತ್ತು ವೀಳ್ಯದೆಲೆಯ ಸೇವನೆಯಿಂದ ಯಾವುದೇ ಟ್ಯೂಮರ್‌ಗಳು ಉಂಟಾಗಿರುವುದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ, ಬದಲಾಗಿ ಟ್ಯೂಮರ್‌ಗಳ ಬೆಳವಣಿಗೆ ಯನ್ನು ತಡೆಯುವಲ್ಲಿ ಯಶಸ್ವಿ ಯಾಗಿರುವುದು ಕಂಡುಬಂದಿದೆ.

ಹಾಗಾಗಿ ಡಬ್ಲ್ಯುಎಚ್‌ಒ ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಮಾಡಲು ಐಸಿಎಂಆರ್‌, ಐಸಿಎಆರ್‌, ಎಐಯುಎಂಎಸ್‌, ಸಿಎಫ್‌ಟಿಆರ್‌ಐ ಮೈಸೂರು ಅಥವಾ ಭಾರತೀಯ ವಿಜ್ಞಾನ ಸಂಸ್ಥೆಯಂತಹ ಸರಕಾರಿ ಮಾನ್ಯತೆ ಪಡೆದ ಹಾಗೂ ನುರಿತ ಸಂಶೋಧನಾ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿ ವರದಿ ಮಂಡಿಸಲು ಸಹಕಾರ ನೀಡುವಂತೆ ಕೇಂದ್ರ ಸರಕಾರದಲ್ಲಿ ರೈತರ ಪರವಾಗಿ ಕ್ಯಾಂಪ್ಕೊ ಮನವಿ ಮಾಡುತ್ತಿದೆ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next