Advertisement

ಅಕ್ರಮ-ಸಕ್ರಮದಡಿ ರೈತರಿಗೆ ಹಕ್ಕು ಪತ್ರ ವಿತರಿಸಲು ಆಗ್ರಹ

03:18 PM Apr 14, 2018 | Team Udayavani |

ರಾಯಚೂರು: ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಾಗೂ ಅಕ್ರಮ ವಸತಿ ಹೊಂದಿದವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಆಗ್ರಹಿಸಿ ಹೈ.ಕ. ದಲಿತ ಸಂಘರ್ಷ ಸಮಿತಿ ಸದಸ್ಯರು ಶುಕ್ರವಾರ ಪ್ರತಿಭಟಿಸಿದರು. ನಗರದ ಅಂಬೇಡ್ಕರ್‌ ವೃತ್ತದಲ್ಲಿ ಧರಣಿ ನಂತರ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Advertisement

ಅಕ್ರಮ ಸಕ್ರಮದಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಡಿ ಅಕ್ರಮ ಸಕ್ರಮ ಸಮಿತಿ ರಚಿಸಿದರೂ, ಐದು ವರ್ಷಗಳಲ್ಲಿ ಒಮ್ಮೆಯೂ ಸಭೆ ನಡೆಸಿಲ್ಲ. ಎಲ್ಲ ಅರ್ಜಿಗಳು ಮೂಲೆ ಸೇರಿವೆ. ಇದರಿಂದ ನಿರೀಕ್ಷೆಗಣ್ಣಲ್ಲಿ ಕಾದು ಕುಳಿತಿದ್ದ ಫಲಾನುಭವಿಗಳಿಗೆ ನಿರಾಸೆಯಾಗಿದೆ ಎಂದು ದೂರಿದರು.

ಹಿಂದುಳಿದ ಹೈ.ಕ. ಭಾಗಕ್ಕೆ 371ನೇ(ಜೆ) ಕಾಯ್ದೆ ಜಾರಿಗೊಂಡು ಮೇಲೆ ಸರ್ಕಾರಗಳಿಂದ ಸಾಕಷ್ಟು ಅನುದಾನ ಬರುತ್ತಿದೆ. ಆದರೂ ಉನ್ನತ ಶಿಕ್ಷಣ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮೂಲಸೌಲಭ್ಯ ಒದಗಿಸಲು ಆಗುತ್ತಿಲ್ಲ. ನಿರೀಕ್ಷಿತ ಮಟ್ಟದ ಉದ್ಯೋಗ ಸೃಷ್ಟಿಯಾಗಿಲ್ಲ. ಒಳಚರಂಡಿ ಕಾಮಗಾರಿ, ನಿರಂತರ ನೀರು ಸರಬರಾಜು ಕಾಮಗಾರಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಮುಗಿಸಿಲ್ಲ ಎಂದು ದೂರಿದರು. 

ನಗರದ ಮಾವಿನ ಕೆರೆ ಅಭಿವೃದ್ಧಿ, ಒಪೆಕ್‌ ಆಸ್ಪತ್ರೆ ದುರಸ್ತಿ, ಗ್ರಾಮೀಣ ರಸ್ತೆಗಳು ಸೇರಿ ಅನೇಕ ಕಾಮಗಾರಿಗಳಿಗೆ ಕೋಟ್ಯಂತರ ರೂ. ಅನುದಾನ ಕಲ್ಪಿಸಿದ್ದರೂ ಕಳಪೆ ಗುಣಮಟ್ಟದಲ್ಲಿ ಕಾಮಗಾರಿ ಮುಗಿದಿವೆ ಎಂದು ದೂರಿದರು.
 
ಗ್ರಾಮೀಣ ಕುಡಿಯುವ ನೀರು ಯೋಜನೆ ಕೊಳವೆಬಾವಿ ಕೊರೆಸುವ ಹೆಸರಿನಲ್ಲಿ ಕೂಡ ಹಣ ಲೂಟಿ ಮಾಡಲಾಗಿದೆ. ಅಂಬೇಡ್ಕರ್‌, ಬಾಬು ಜಗಜೀವನರಾಮ್‌ ಭವನಗಳು ಹಾಗೂ ಬಡವರ ಕಲ್ಯಾಣ ಮಂಟಪಗಳು ಹಾಗೂ ವಸತಿ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸಿಲ್ಲ. 562 ಅಕ್ರಮ ಸಕ್ರಮ ಅರ್ಜಿ, 1015 ವಸತಿ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಹೊಸ ಅರ್ಜಿಗಳನ್ನು ಕೂಡಲೇ ಆಹ್ವಾನಿಸಬೇಕು. ನಗರದಲ್ಲಿ ನಡೆದ ಕಾಮಗಾರಿಗಳ ತನಿಖೆ ನಡೆಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆ ರಾಜ್ಯಾಧ್ಯಕ್ಷ ರಾಮಾಂಜನೇಯಲು, ಸದಸ್ಯರಾದ ರಾಜು, ಗೋವಿಂದರಾಜ, ಆಗಸ್ಟಿನ್‌ ಮಿತ್ರ, ಸೈಯದ್‌ ಮೊನುದ್ದೀನ್‌, ಷಣ್ಮುಖ, ನರಸಪ್ಪ, ವಿಶ್ವನಾಥ, ಹುಸೇನಪ್ಪ ಭಂಡಾರಿ, ಫಿರಂಗಿ ನರಸಿಂಹಲು, ಅಲಿಸಾಬ್‌, ರಾಜಪ್ಪ ಹೆಗ್ಗಸನಹಳ್ಳಿ ಪ್ರತಿಭಟನೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next