ಪಿರಿಯಾಪಟ್ಟಣ: ಅರಣ್ಯ ಭೂಮಿ ಹಕ್ಕು ಅನುಷ್ಠಾನಕ್ಕಾಗಿ ತಾಲೂಕು ಬುಡಕಟ್ಟು ಸಮುದಾಯದವರು ತಾಪಂ ಕಚೇರಿ ಮುಂದೆ ಸೋಮವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ತಾಲೂಕು ಬುಡಕಟ್ಟು ಅಮುದಾಯ ಹಾಗೂ ಗ್ರಾಪಂ ಸದಸ್ಯೆ ಜಾನಕಮ್ಮ ಪತ್ರಿಕೆಯೊಂದಿಗೆ ಮಾತನಾಡಿ ತಾಲೂಕಿನ 38 ಹಾಡಿಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದು, ಮೂಲಭೂತ ಸೌಕರ್ಯಗಳು ಸರಿಯಾಗಿ ಸಿಗುತ್ತಿಲ್ಲ.
ಈ ಸಂಬಂಧ ಹಿಂದೆಯೂ ಸಹ ಪ್ರತಿಭಟನೆ ಮಾಡಿ ಹಲವಾರು ಬಾರಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಕೇವಲ ಭರವಸೆಗಳನ್ನು ನೀಡುತ್ತಾರೆಯೇ ಹೊರತು ಯೋಜನೆಗಳನ್ನು ಜಾರಿಗೆ ತಂದಿಲ್ಲ. ಹಾಡಿಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿವ ನೀರು, ರಸ್ತೆಯ ಸರಿಯಾದ ವ್ಯವಸ್ಥೆಯಿಲ್ಲ,
ಬುಡಕಟ್ಟು ಸಮುದಾಯದವರು ಭೂಮಿ ಇಲ್ಲದೆ ದುಡಿಮೆಗಾಗಿ ಕೆಲಸ ಆಶ್ರಯಿಸಿ ಹೊರ ಹೋದಾಗ ಆಕಸ್ಮಿಕವಾಗಿ ಸಾವು-ನೋವು ಸಂಭವಿಸಿದರು ಸರಿಯಾದ ಪರಿಹಾರ ಸಿಗುತ್ತಿಲ್ಲ, ನಮಗೆ ಭೂಮಿ ನೀಡಿದರೆ ವಲಸೆ ಹೋಗುವ ಪ್ರಮೇಯ ಬರದೇ ದುಡಿಮೆ ಮಾಡಬಹುದು ಎಂದು ಅಳಲು ತೋಡಿಕೊಂಡರು.
ಭರವಸೆಗೆ ಮಣಿಯಲ್ಲ: ಹೆಚ್.ಡಿ.ಕೋಟೆಯ ಬುಡಕಟ್ಟು ಸಮುದಾಯದ ಮುಖಂಡ ಶೈಲೇಂದ್ರಕುಮಾರ್ ಮಾತನಾಡಿ, ಕಳೆದ 10 ವರ್ಷಗಳಿಂದ ಅರಣ್ಯ ಹಕ್ಕು ಕಾಯ್ದೆ 2006ರಂತೆ ಸಾಮುದಾಯಿಕ ಹಕ್ಕುಗಳಿಗಾಗಿ ನಿಯಮದಂತೆ ಅರ್ಜಿಗಳನ್ನು ನೀಡಿ ಸಂಬಂಧಪಟ್ಟವರು ಜಾರಿಗೆ ತರುವಂತೆ ಮನವಿ ಮಾಡುತ್ತಿದ್ದರೂ ಇದುವರೆಗೆ ಯಾರು ಸ್ಪಂದಿಸಿಲ್ಲ.
ಕಳೆದ ಮೂರು ತಿಂಗಳ ಹಿಂದೆ ತಾಲೂಕಿನ ಹಾಡಿಯ ಜನರು ಧರಣಿ ಕುಳಿತಾಗ ಮಾನ್ಯ ಉಪವಿಭಾಗಾಧಿಕಾರಿಗಳು ಭೂಮಿ ಹಕ್ಕು ಪತ್ರಗಳನ್ನು ನೀಡಲಾಗುವುದೆಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ದೆವು.
ಆದರೆ, ಇಲ್ಲಿಯ ವರೆಗೂ ವೈಯುಕ್ತಿಕ ಹಕ್ಕು ಪತ್ರಗಳು ದೊರೆಯದ ಕಾರಣ ಧರಣಿ ಆರಂಭಿಸಿದ್ದೇವೆ. ಈ ಬಾರಿ ಭರವಸೆಗಳಿಗೆ ಮಾರುಹೋಗದೆ ಸ್ಥಳದಲ್ಲಿಯೇ ಹಕ್ಕು ಪತ್ರ ವಿತರಿಸುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು.ಪ್ರತಿಭಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.