Advertisement

Forest Land: ಎಚ್‌ಎಂಟಿ ಜಾಗಕ್ಕೆ ಸಚಿವ ಖಂಡ್ರೆ ಅತಿಕ್ರಮ ಪ್ರವೇಶ: ಎಚ್‌.ಡಿ.ಕುಮಾರಸ್ವಾಮಿ

11:32 PM Oct 30, 2024 | Team Udayavani |

ಚನ್ನಪಟ್ಟಣ: ಅರಣ್ಯ ಸಚಿವ ಈಶ್ವರ ಖಂಡ್ರೆ ಎಚ್‌ಎಂಟಿ ಜಾಗದಲ್ಲಿ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ. ಎಚ್‌ಎಂಟಿ ಅರಣ್ಯ ಪ್ರದೇಶ ಬಗ್ಗೆ  ನ್ಯಾಯಾಲಯದಲ್ಲಿ ತಕರಾರು ಅರ್ಜಿ ಇದ್ದು, ಅದರ ತೀರ್ಪಿಗಾಗಿ ಕಾಯುತ್ತಿದ್ದೇವೆ. ನಾವು ಕಾನೂನು ಮೂಲಕ ಹೋರಾಟ ಮಾಡುತ್ತೇವೆ. ಪ್ರಚಾರಕ್ಕಾಗಿ ಈ ವಿಚಾರ ತೆಗೆದುಕೊಳ್ಳಲ್ಲ  ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಚನ್ನಪಟ್ಟಣದಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿ, ಸಚಿವ ಖಂಡ್ರೆ ಅವರಿಗೆ ಮಾಹಿತಿ ಮತ್ತು ಜ್ಞಾನದ ಕೊರತೆ ಇದೆ. ಅವರು ಭೇಟಿ ನೀಡಿರುವ ಜಾಗವು 2002ರಲ್ಲಿಯೇ ಕೆನರಾ ಬ್ಯಾಂಕಿಗೆ ನೀಡಲಾಗಿದೆ. ಸಚಿವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ನಾಳೆ ಅಥವಾ ನಾಡಿದ್ದು ಎಲ್ಲಾ ದಾಖಲೆಗಳ ಸಮೇತ ನಾನು ಮಾಧ್ಯಮಗಳ ಮುಂದೆ ಮಾತನಾಡುತ್ತೇನೆ ಎಂದರು.

ಚಿಕ್ಕಮಗಳೂರು, ಕೊಡಗು, ಬೆಂಗಳೂರು ಸೇರಿದಂತೆ ಅನೇಕ ಕಡೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ಭೂಮಿ ಒತ್ತುವರಿ ಆಗಿದೆ. ಅದನ್ನೆಲ್ಲ ತೆರವು ಮಾಡುವುದು ಬಿಟ್ಟು ಅರಣ್ಯ ಸಚಿವರು ಎಚ್‌ ಎಂಟಿ ಮೇಲೆ ಮಾತ್ರ ವಿಶೇಷ ಕಾಳಜಿ ತೋರಿಸುತ್ತಿದ್ದಾರೆ ಎಂದರು.  ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣದ ಸೆಟ್ ಗಾಗಿ ಅರಣ್ಯ ಭೂಮಿಯಲ್ಲಿ ಮರಗಳ ಕಡಿಯಲು ಅನುಮತಿ ನೀಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಈಶ್ವರ್‌ ಖಂಡ್ರೆ ಮಂಗಳವಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ  ಹಿನ್ನೆಲೆಯಲ್ಲಿ  ಕೇಂದ್ರ ಸಚಿವ ಕುಮಾರಸ್ವಾಮಿ ಟಾಂಗ್‌ ಕೊಟ್ಟಿದ್ದಾರೆ.

ಮಾಜಿ ಸ್ಪೀಕರ್‌ ಒತ್ತುವರಿ ತೆರವು ಮಾಡಿಸಿಲ್ಲ ಯಾಕೆ?
ಕೋಲಾರದ ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್‌ ಒಬ್ಬರು ಒತ್ತುವರಿ ಮಾಡಿರುವ ಅರಣ್ಯ ಭೂಮಿ ತೆರವು ಮಾಡಿಸುವ ಧೈರ್ಯ ಅರಣ್ಯ ಸಚಿವರು ತೋರಿಸಲಿ. ಒತ್ತುವರಿ ತೆರವು ಮಾಡಿಸುವಂತೆ ನ್ಯಾಯಾಲಯ ಆದೇಶ ಕೊಟ್ಟಿವೆ. ಅರಣ್ಯ ಇಲಾಖೆ, ಕೋಲಾರ ಜಿಲ್ಲಾಧಿಕಾರಿಗೆ ನೋಟಿಸ್‌ ಕೊಟ್ಟಿದೆ. ಆದರೂ ಮಾಜಿ ಸ್ಪೀಕರ್‌ ಒತ್ತುವರಿ ಜಾಗವನ್ನು ಯಾಕೆ ತೆರವು ಮಾಡುತ್ತಿಲ್ಲ, ಹೇಳಿ ಈಶ್ವರ ಖಂಡ್ರೆ ಅವರೇ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

120 ಎಕರೆ ಅರಣ್ಯ ಭೂಮಿ ಒತ್ತುವರಿ:
ಶ್ರೀನಿವಾಸಪುರದಲ್ಲಿ 120 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. 61 ಎಕರೆ ಸರ್ವೆ ಮಾಡಿ ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಿ ಎಂದು ನ್ಯಾಯಾಲಯದ ಆದೇಶ ಆಗಿದೆ. ಆ ಒತ್ತುವರಿ ಭೂಮಿ ವಿಷಯದಲ್ಲಿ ಅರಣ್ಯ ಸಚಿವರು ಅಧಿಕಾರಿಗಳಿಗೆ ಏನು ಸೂಚನೆ ಕೊಟ್ಟಿದ್ದಾರೆ ಅಂತ ಗೊತ್ತು. ಆ ವಿಚಾರದಲ್ಲಿ ಈಶ್ವರ್‌ ಖಂಡ್ರೆ ಏನ್‌ ಮಾಡ್ತಿದ್ದೀಯಪ್ಪ? ಬಡವರಿಗೆ ಒಂದು ನ್ಯಾಯ, ಕಾಂಗ್ರೆಸ್‌ ನವರಿಗೆ ಒಂದು ನ್ಯಾಯವಾ? ಎಂದು ಖಾರವಾಗಿ ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next