Advertisement
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಎಚ್‌ಎಂಟಿಗೆ ಭೇಟಿ ನೀಡಿ, ಪುನಶ್ಚೇತನದ ಬಗ್ಗೆ ಘೋಷಿಸಿದಾಗಿನಿಂದಲೂ ಅದು ಅರಣ್ಯ ಭೂಮಿ ಎಂದು ಪ್ರತಿಪಾದಿಸುತ್ತಲೇ ಬಂದಿರುವ ಸಚಿವ ಖಂಡ್ರೆ, ಮಂಗಳವಾರ ಪೀಣ್ಯ ಪ್ಲಾಂಟೇಶನ್ 1 ಮತ್ತು 2ರಲ್ಲಿನ ಎಚ್‌ಎಂಟಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಚ್‌ಎಂಟಿ ಅನುಭೋಗದಲ್ಲಿರುವ ಜಾಗವು ಅರಣ್ಯ ಇಲಾಖೆಗೇ ಸೇರಿದ್ದು. ತನ್ನ ಸ್ವಾಧೀನದಲ್ಲಿರುವ ಈ ಭೂಮಿಯನ್ನು ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಅರಣ್ಯೇತರ ಚಟುವಟಿಕೆಗಳೂ ನಡೆಯುತ್ತಿವೆ. ಈ ಪ್ರದೇಶದಲ್ಲಿದ್ದ ಮರ-ಗಿಡಗಳನ್ನು ಕಡಿದಿರುವುದು ಉಪಗ್ರಹ ಆಧಾರಿತ ಚಿತ್ರದಿಂದ ಗೋಚರಿಸುತ್ತದೆ. ಸಾಲದ್ದಕ್ಕೆ ತನ್ನ ಸುಪರ್ದಿಯಲ್ಲಿದ್ದ ಅರಣ್ಯ ಭೂಮಿ ಹಾಗೂ ಖಾಲಿ ಜಾಗಗಳನ್ನು ಸಿನಿಮಾ ಚಿತ್ರೀಕರಣಕ್ಕೆ ದಿನದ ಆಧಾರದ ಮೇಲೆ ಬಾಡಿಗೆಗೆ ನೀಡುತ್ತಿರುವುದೂ ಗಮನಕ್ಕೆ ಬಂದಿದೆ. ಅಪರಾಧ ಪ್ರಕರಣ ದಾಖಲಿಸಿ:
ಕೆನರಾ ಬ್ಯಾಂಕ್‌ಗೆ ಮಾರಾಟ ಮಾಡಿದೆ ಎನ್ನಲಾದ ಅರಣ್ಯ ಭೂಮಿಯಲ್ಲಿ ಹಲವು ತಿಂಗಳಿಂದ “ಟಾಕ್ಸಿಕ್’ ಎಂಬ ಹೆಸರಿನ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದಕ್ಕಾಗಿ ನೂರಾರು ಗಿಡ-ಮರಗಳನ್ನು ಕಡಿದು ದೊಡ್ಡ ಸೆಟ್ ಹಾಕಲಾಗಿದೆ. ಇದಕ್ಕೆ ಅನುಮತಿ ನೀಡಿದ್ದರೆ, ಆ ಅಧಿಕಾರಿ ವಿರುದ್ಧ ಕ್ರಮ ಆಗಬೇಕು. ಅನುಮತಿ ಪಡೆಯದೆ ಗಿಡ-ಮರಗಳನ್ನು ಕಡಿದಿದ್ದರೆ, ಚಿತ್ರತಂಡದ ವಿರುದ್ಧ ಸೇರಿದಂತೆ ಕಾರಣರಾದ ಎಲ್ಲರ ವಿರುದ್ಧವೂ ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.