Advertisement

ಶೌಚಾಲಯ ನಿರ್ಮಾಣಕ್ಕೆ ಒತ್ತಾಯಿಸಿ ತಾ.ಪಂ.ಗೆ ಮುತ್ತಿಗೆ

03:23 PM Jul 21, 2022 | Team Udayavani |

ಕಾರಟಗಿ: ಗ್ರಾಮದ ಮಹಿಳೆಯರಿಗೆ ಸಾರ್ವಜನಿಕ ಸುಲಭ ಅಥವಾ ಹೈಟೆಕ್‌ ಶೌಚಾಲಯ ನಿರ್ಮಿಸಿಕೊಡುವಂತೆ ಐದು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಸ್ಪಂದಿಸದೇ ನಿರ್ಲಕ್ಷ್ಯ ತೋರುತ್ತಿರುವ ಬೂದಗುಂಪಾ ಗ್ರಾಪಂ ಪಿಡಿಒ ಜುಬೇರ್‌ ನಾಯಕ್‌ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ತಾಲೂಕಿನ ಹಾಲಸಮುದ್ರ ಗ್ರಾಮದ ಮಹಿಳೆಯರು ಪಟ್ಟಣದ ಹೊರವಲಯದ ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ.

Advertisement

ತಾಲೂಕಿನ ಬೂದಗುಂಪಾ ಗ್ರಾಪಂ ವ್ಯಾಪ್ತಿಯ ಹಾಲಸಮುದ್ರ-ತಿಮ್ಮಾಪುರ ಗ್ರಾಮದಲ್ಲಿನ ಐದನೇ ವಾರ್ಡ್‌ನಲ್ಲಿನ ಸುಮಾರು ಒಂದೂವರೆ ಎಕರೆಗೆ ಹೆಚ್ಚಿನ ಸರ್ಕಾರಿ ಜಾಗೆಯಲ್ಲಿ ಒಂದು ಸುಸಜ್ಜಿತವಾದ ಸಾರ್ವಜನಿಕ ಸುಲಭ ಶೌಚಾಲಯವನ್ನಾಗಲಿ ಅಥವಾ ಹೈಟೆಕ್‌ ಶೌಚಾಲಯ ನಿರ್ಮಿಸಿಕೊಡುವಂತೆ ಆಗ್ರಹಿಸಿ ಮಹಿಳೆಯರು ಕಳೆದ 2017ರಿಂದ ಸತತವಾಗಿ ಮನವಿ ಸಲ್ಲಿಸುತ್ತಾ ಬಂದರೂ ಗ್ರಾಪಂ ಪಿಡಿಒ ಜುಬೇರ್‌ ನಾಯಕ್‌ ನಿರ್ಲಕ್ಷ್ಯ ವಹಿಸುತ್ತಾ ಬಂದಿದ್ದಾರೆ. ಬರೀ ಮನವಿ ಅಷ್ಟೇ ಅಲ್ಲ ಎಷ್ಟೋ ಬಾರಿ ಪಂಚಾಯತ್‌ ಕಾರ್ಯಾಲಯಕ್ಕೂ ಮುತ್ತಿಗೆ ಹಾಕಿದರು ಕೂಡ ಎಚ್ಚೆತ್ತುಕೊಳ್ಳದ ಪಿಡಿಒ ನಮಗೆಲ್ಲ ಹಾರಿಕೆ ಉತ್ತರ ನೀಡಿ ಬಾಯಿ ಮುಚ್ಚಿಸುತ್ತಾ ಬಂದಿದ್ದಾರೆ ಎಂದು ಮಹಿಳೆಯರು ದೂರಿದರು.

ಗ್ರಾಮದ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮಾತು ಕೇಳಿ ಪಿಡಿಒ ನಮ್ಮ ಮನವಿಗಳನ್ನು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ. ಅದಕ್ಕೆ ನಮ್ಮ ಅಳಲನ್ನು ತೋಡಿಕೊಳ್ಳಲು ನೇರವಾಗಿ ತಾಪಂಗೆ ಬಂದಿದ್ದೇವೆ. ಅಲ್ಲದೇ ತಾಪಂಗೂ ಈ ಮುಂಚೆ ಮನವಿ ಸಲ್ಲಿಸಿದ್ದೇವೆ. ಆದರೂ ಗ್ರಾಮಸ್ಥರ ಮನವಿಗೆ ಯಾವ ಸ್ಪಂದನೆ ಇಲ್ಲವಾಗಿದೆ ಎಂದರು.

ಬರೀ ಮನವಿ ನೀಡಿದ್ದಲ್ಲದೇ ಹಲವಾರು ಬಾರಿ ಗ್ರಾಪಂ ಕಾರ್ಯಾಲಯಕ್ಕೂ ಮುತ್ತಿಗೆ ಹಾಕಿ ಎಚ್ಚರಿಸಿದರೂ ಎಚ್ಚೆತ್ತುಕೊಳ್ಳದ ಪಿಡಿಒ ದುರ್ನಡತೆಗೆ ಬೇಸತ್ತು ಕೊನೆಗೆ ಇವತ್ತು ತಾಪಂಗೆ ಮುತ್ತಿಗೆ ಹಾಕುವ ಪರಿಸ್ಥಿತಿ ತಲೆದೋರಿದೆ ಎಂದರು ಪ್ರತಿಭನಟನಾ ನಿರತರು.

ಮೂರು ದಿನಗಳ ಹಿಂದೆ ಬೂದಗುಂಪಾ ಗ್ರಾಪಂ ಗ್ರಾಮಸ್ಥರು ಮುತ್ತಿಗೆ ಹಾಕಿದಾಗಲೇ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಆ ಕಾರಣಕ್ಕೆ ಗುರುವಾರ ಬೂದಗುಂಪಾ ಗ್ರಾಪಂಗೆ ಖುದ್ದು ಭೇಟಿ ನೀಡಿ ನಂತರ ಹಾಲಸಮುದ್ರ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಲಾಗುವುದು.  –ಡಾ| ಆರ್‌. ಮೋಹನ್‌, ತಾಪಂ ಇಒ

Advertisement
Advertisement

Udayavani is now on Telegram. Click here to join our channel and stay updated with the latest news.

Next