ರಾಯಚೂರು: ರಾಜ್ಯದ ಈ ಸಾಲಿನ ಬಜೆಟ್‌ನಲ್ಲಿ ಕೃಷಿ ವಲಯ ಬಲವರ್ಧನೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಟಿಬಿ ಡ್ಯಾಂಗೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಅನುದಾನ ನೀಡಬೇಕು, ಜಿಲ್ಲೆಯ ಇತರೆ ಯೋಜನೆಗಳಿಗೆ ಅನುದಾನ ಘೋಷಿಸಬೇಕು. 2020-21ನೇ ಸಾಲಿನ 2,46,206 ಕೋಟಿ ಬಜೆಟ್ ಆಗಿತ್ತು. ಈ ಪೈಕಿ ಕೃಷಿಗೆ 31,028 ಕೋಟಿ ಅನುದಾನ ಘೋಷಣೆ ಮಾಡಿತ್ತು. ಈ ಬಾರಿ ಕೃಷಿ ವಲಯಕ್ಕೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕೃಷ್ಣ-ತುಂಗಭದ್ರಾ ನದಿ ಹರಿಯುತ್ತಿದ್ದರೂ ಹಲವೆಡೆ ಕುಡಿವ ನೀರು, ಕೃಷಿಗೆ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲೆಯಲ್ಲಿ ಒಟ್ಟು 1,46,246 ಹೆಕ್ಟೇರ್ ನೀರಾವರಿ ಪ್ರದೇಶ ಇದ್ದು ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿದ್ದರಿಂದ ಟಿಎಲ್‌ಬಿಸಿ ಕೊನೆ ಭಾಗಕ್ಕೆ ಸಮರ್ಪಕ ನೀರು ಸಿಗುತ್ತಿಲ್ಲ ಎಂದು ದೂರಿದರು.
ಜಿಲ್ಲೆಯ ನಂದವಾಡಗಿ ಏತಾ ನೀರಾವರಿ ಯೋಜನೆಗೆ 1,800 ಕೋಟಿ ಬೇಕಿದ್ದು, ಲಿಂಗಸುಗೂರು, ಮಸ್ಕಿ, ಸಿರವಾರ ಸೇರಿ ಹಲವು ಗ್ರಾಮಗಳ ಕೃಷಿಗೆ ನೀರು ಸಿಗಲಿದೆ. ಪ್ರಸ್ತುತ ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ಅನುದಾನ ನೀಡಬೇಕು. ಜಿಲ್ಲೆಯ ಗೋಶಾಲೆಗಳ ಅಭಿವೃದ್ಧಿಗೆ 30 ಕೋಟಿ ಅನುದಾನ ನೀಡಬೇಕು. ಜಿಲ್ಲೆಯ 125 ಕೆರೆಗಳ ಸಮಗ್ರ ಅಭಿವೃದ್ಧಿಗೆ, ಸಂರಕ್ಷಣೆಗೆ 100 ಕೋಟಿ, ಸಿರವಾರ, ಮಸ್ಕಿ ತಾಲೂಕುಗಳ ಅಭಿವೃದ್ಧಿಗೆ ತಲಾ 100 ಕೋಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು. ನೂತನ ರಾಯಚೂರು ವಿಶ್ವವಿದ್ಯಾಲಯಕ್ಕೆ 300 ಕೋಟಿ, ಎಪಿಎಂಸಿಗಳ ಅಭಿವೃದ್ಧಿಗೆ 100 ಕೋಟಿ ಅನುದಾನ ನೀಡಬೇಕು. ರೈತರ ಪಂಪ್ ಸೆಟ್‌ಗಳಿಗೆ 12 ತಾಸು ವಿದ್ಯುತ್ ಒದಗಿಸಬೇಕು. ರೈತರಿಗೆ ಬಡ್ಡಿರಹಿತ ಸಾಲ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಕೆ.ರಂಗನಾಥ, ಪ್ರಧಾನ ಕಾರ್ಯದರ್ಶಿ ಮಂಜುನಾಥ ದಳವಾಯಿ, ಉಪಾಧ್ಯಕ್ಷ ರಮೇಶ ಅಳಮಳಿ, ಸದಸ್ಯರಾದ ಕೃಷ್ಣ ಆಚಾರ್ ಸಂಗಮ, ರಾಜು, ತಾಯಣ್ಣ ಹೀರಾಪುರ, ಸುರೇಶ, ಶೇಖರಪ್ಪ, ಗುರುಸ್ವಾಮಿ ಸೇರಿ ಇತರರಿದ್ದರು.