ವಿಜಯಪುರ: ಜಿಲ್ಲೆಯ ಎಲ್ಲ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಹಕರಿಗೆ ಸಮರ್ಪಕವಾಗಿ ಅವರ ಮನೆ ಬಾಗಿಲಿಗೆ ಎಲ್‌ಪಿಜಿ ಸಿಲಿಂಡರ್ ಸರಬರಾಜು ಮಾಡುವಂತೆ ಎಲ್ಲ ಎಲ್‌ಪಿಜಿ ಡೀಲರ್‌ಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಎಲ್‌ಪಿಜಿ ಡೀಲರ್ ಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಮಾ.7ರಂದು ಗೃಹಬಳಕೆ ಸಿಲಿಂಡರ್‌ಗಳಲ್ಲಿನ ಗ್ಯಾಸನ್ನು ಅಕ್ರಮವಾಗಿ ಆಟೋಗಳಿಗೆ ತುಂಬುವುದು ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ತುಂಬಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಪ್ರಕರಣ ಪತ್ತೆ ಹಚ್ಚಿ ಅಕ್ರಮ ವಹಿವಾಟುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದ್ದು, ಇಂತಹ ಅಕ್ರಮಗಳು ಜರುಗದಂತೆ ಎಲ್ ಪಿಜಿ ವಿತರಕರು, ಡೆಲಿವರಿ ಹುಡುಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಸೂಚಿಸಿದರು.
ಅದರಂತೆ ಜಿಲ್ಲೆಯ ಎಲ್ಲ ಹೋಟೆಲ್ ಮಾಲೀಕರಿಗೆ ಎಲ್‌ಪಿಜಿ ಡೀಲರ್‌ಗಳಿಂದ ವಾಣಿಜ್ಯ ಸಿಲಿಂಡರ್‌ಗಳನ್ನು ಖರೀದಿಸಿ ಪಾವತಿ ಕಡ್ಡಾಯವಾಗಿ ಪಡೆದುಕೊಳ್ಳಲು ನಿರ್ದೇಶನ ನೀಡಲಾಗಿದ್ದು, ಪಾವತಿಯಲ್ಲಿ ವಾಣಿಜ್ಯ ಸಿಲಿಂಡರಿನ ನಂಬರ್ ತಪ್ಪದೇ ನಮೂದಿಸಿ ಕೊಡಬೇಕು. ಕೆಲವೊಂದು ಎಲ್‌ಪಿಜಿ ವಿತರಕರು ಸರ್ಕಾರ ನಿರ್ಧಿಷ್ಟಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವುದು ಕಂಡು ಬಂದಿದ್ದು, ಸರ್ಕಾರ ನಿಗದಿಪಡಿಸಿದ ದರದಂತೆ ಹಣ ಪಡೆಯಲು ಒಂದು ವೇಳೆ 5 ಕಿ.ಮೀ.ಗಿಂತ ಹೆಚ್ಚಿನ ದೂರ ಇದ್ದಲ್ಲಿ ಒಂದು ಕಿ.ಮೀಗೆ 1.60 ರೂ.ನಂತೆ ಹೆಚ್ಚಿನ ಹಣ ವಿಧಿ ಸಬಹುದಾಗಿದೆ. ಇದ್ದಕ್ಕಿಂತ ಹೆಚ್ಚಿನ ಹಣ ಪಡೆದಿರುವುದು ಕಂಡು ಬಂದಲ್ಲಿ ಅಂತಹ ಎಲ್‌ಪಿಜಿ ವಿತರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕ ಸಿದ್ಧರಾಮ ಮಾರಿಹಾಳ, ಸಹಾಯಕ ನಿರ್ದೇಶಕ ಅಮರೇಶ ತಾಂಡೂರ, ಆಹಾರ ನಿರೀಕ್ಷಕ ಅನೀಲ ಚವ್ಹಾಣ ಸೇರಿದಂತೆ ಎಲ್‌ಪಿಜಿ ಡೀಲರ್‌ಗಳು ಇದ್ದರು.