ಮುಂಬಯಿ: ಐಪಿಎಲ್ ಪಂದ್ಯಗಳಿಗೆ ಆಟಗಾರರನ್ನು ಕರೆದೊಯ್ಯಲು ಬರುತ್ತಿದ್ದ ಪಂಚತಾರಾ ಹೋಟೆಲ್‌ನ ಹೊರಗೆ ನಿಲ್ಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಐಷಾರಾಮಿ ಬಸ್ ಗಾಜುಗಳನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಒಡೆದಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ದಾಳಿ ಗಮನಕ್ಕೆ ಬಂದ ತಕ್ಷಣ ಕೊಲಾಬಾ ಠಾಣೆಯ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಿದೆ.
ರಾಜ್ ಠಾಕ್ರೆ ಅವರ ಎಂಎನ್ ಎಸ್ ಕಾರ್ಯಕರ್ತರ ಸಾರಿಗೆ ಘಟಕದ 12 ಕ್ಕೂ ಹೆಚ್ಚು ಜನರ ತಂಡ ದಾಳಿ ನಡೆಸಿ ಗಾಜನ್ನು ಒಡೆದು ಪೋಸ್ಟರ್ ಗಳನ್ನು ಅಂಟಿಸಿದ್ದಾರೆ.
ಕೃತ್ಯ ನಡೆಸಿದ ಕಾರಣದ ಕುರಿತು ಪ್ರತಿಕ್ರಿಯೆ ನೀಡಿರುವ ಎಂಎನ್ ಎಸ್ ಸಾರಿಗೆ ಘಟಕದ ಅಧ್ಯಕ್ಷ ಸಂಜಯ್ ನಾಯ್ಕ್, ನಾವು ಈ ಹಿಂದೆಯೇ ಪ್ರತಿಭಟನೆ ನಡೆಸಿದ್ದೆವು, ಅದರ ಹೊರತಾಗಿಯೂ ಹೊರ ರಾಜ್ಯಗಳಿಂದ ಹಲವು ಬಸ್ ಗಳು ಮತ್ತು ಸಣ್ಣ ವಾಹನಗಳನ್ನು ಇಲ್ಲಿಗೆ ತರಲಾಗಿದೆ. ಇದು ಇಲ್ಲಿಯ ಮರಾಠಿ ಕೆಲಸಗಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಡೆಲ್ಲಿ ತಂಡ ತಾಜ್ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಿದ್ದು, ಘಟನೆಯ ಬಳಿಕ ಭದ್ರತೆ ಇನ್ನಷ್ಟು ಬಿಗಿ ಗೊಳಿಸಲಾಗಿದೆ. ಮಾರ್ಚ್ 26 ರಿಂದ ಪಂದ್ಯಾವಳಿ ಆರಂಭವಾಗಲಿದೆ.