ಹೈದರಾಬಾದ್: ಮೊದಲಾರ್ಧದಲ್ಲಿ ನೀಡಿದ ಅದ್ಭುತ ಪ್ರದರ್ಶನದ ನೆರವಿನಿಂದ ಗುಜರಾತ್ ಫಾರ್ಚೂನ್ ತಂಡ ಪ್ರೊ ಕಬಡ್ಡಿಯ 5ನೇ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ ತಂಡವನ್ನು ಸೋಲಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಪ್ರೊ ಕಬಡ್ಡಿಗೆ ಪ್ರವೇಶಿಸಿರುವ ಗುಜರಾತ್ ಶುಭಾರಂಭ ಮಾಡಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಗುಜರಾತ್ 26-20 ರಿಂದ ಡೆಲ್ಲಿ ತಂಡಕ್ಕೆ ಆಘಾತ ನೀಡಿತು. ಕನ್ನಡಿಗ ಸುಕೇಶ್ ಹೆಗ್ಡೆ ನೇತೃತ್ವದ ಗುಜರಾತ್ ಪಂದ್ಯದ ಆರಂಭದಲ್ಲಿಯೇ ಭರ್ಜರಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಹೀಗಾಗಿ ಅಂಕ ಗಳಿಕೆಯಲ್ಲಿ ಭಾರೀ ಮುನ್ನಡೆಯನ್ನು ಕಾಯ್ದುಕೊಂಡಿತು. ಎದುರಾಳಿ ರೈಡರ್‌ಗಳನ್ನು ಗುಜರಾತ್‌ನ ರಕ್ಷಣಾ ಪಡೆ ತನ್ನ ಬಲೆಯಲ್ಲಿ ಬೀಳಿಸಿತು. ಹೀಗಾಗಿ ಗುಜರಾತ್‌ಗೆ ರೈಡಿಂಗ್ ಅಂಕಕ್ಕಿಂತ, ಟ್ಯಾಕಲ್ ಅಂಕವೇ ಹೆಚ್ಚಾಗಿ ಹರಿದುಬಂತು. ಸಂಘಟನಾತ್ಮಕ ಹೋರಾಟದಿಂದ ಮೊದಲ ಅವಧಿಯ ಅಂತ್ಯದಲ್ಲಿ ಗುಜರಾತ್ 15-5ರಿಂದ ಭಾರೀ ಮುನ್ನಡೆ ಪಡೆದುಕೊಂಡಿತು.
2ನೇ ಅವಧಿಯಲ್ಲಿ ಚೇತರಿಸಿಕೊಂಡ ಡೆಲ್ಲಿ: ಮೊದಲ ಅವಧಿಯಲ್ಲಿ ಭಾರೀ ಹಿನ್ನೆಡೆಯಲ್ಲಿದ್ದ ಡೆಲ್ಲಿ ವಿರಾಮದ ಬಳಿಕ ಎದುರಾಳಿಗೆ ತಿರುಗೇಟು ನೀಡಿತು. ನಿಧಾನವಾಗಿ ಅಂಕವನ್ನು ಏರಿಸಿಕೊಳ್ಳುತ್ತ ಸಾಗಿತು. ಆದರೆ ಗುಜರಾತ್ ಹೆಚ್ಚಿನ ಅಂಕದ ಮುನ್ನಡೆಯಲ್ಲಿದ್ದ ಕಾರಣ ಪಂದ್ಯದ ಸಮಯ ಜಾರುವಂತೆ ನೋಡಿಕೊಂಡಿತು. ಹೀಗಾಗಿ ಡೆಲ್ಲಿ ಪಂದ್ಯವನ್ನು ಕಳೆದುಕೊಂಡಿತು. ಮೊದಲ ಅವಧಿಯಲ್ಲಿ ಕೇವಲ 5 ಅಂಕ ಪಡೆದ ಡೆಲ್ಲಿ 2ನೇ ಅವಧಿಯಲ್ಲಿ 15 ಅಂಕವನ್ನು ಬುಟ್ಟಿಗೆ ಹಾಕಿಕಕೊಂಡಿತು. ಆದರೆ ಇದರಿಂದ ಯಾವುದೇ ಲಾಭವಾಗಲಿಲ್ಲ.
ಡೆಲ್ಲಿ ತಂಡ 2 ಬಾರಿ ಆಲೌಟ್ ಆದರೆ, ಗುಜರಾತ್ ಒಮ್ಮೆ ಮಾತ್ರ ಆಲೌಟ್ ಆಗಿತು. ರೈಡಿಂಗ್‌ನಲ್ಲಿ ಗುಜರಾತ್ ಪರ ಫಜಲ್ 4 ಅಂಕ ಪಡೆದರೆ, ಸುಕೇಶ್ ಹೆಗ್ಡೆ, ಸಚಿನ್, ರಾಕೇಶ್ ನರ್ವಾಲ್ ತಲಾ 3 ಅಂಕ ಪಡೆದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಡೆಲ್ಲಿ ತಾರಾ ಆಟಗಾರ ನಿಲೇಶ್ ಶಿಂಧೆ ರೈಡಿಂಗ್‌ನಲ್ಲಿ ಕೇವಲ 2 ಅಂಕ ಸಂಪಾದಿಸಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು.
ಡೆಲ್ಲಿ ಮೊದಲ ಪಂದ್ಯದಲ್ಲಿ ಜೈಪುರ್ ವಿರುದ್ಧ 30-26 ಅಂಕಗಳ ಜಯ ಸಾಧಿಸಿತ್ತು. ಬುಧವಾರ ಮತ್ತೆ ಕಣಕ್ಕಿಳಿಯಲಿರುವ ಗುಜರಾತ್ ಮತ್ತೂಂದು ನೂತನ ತಂಡವಾದ ಹರ್ಯಾಣ ಸ್ಟೀಲರ್ ವಿರುದ್ಧ ಸೆಣಸಲಿದೆ.