ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ಮಾಲಿನ್ಯ ಪ್ರಮಾಣ ಅಪಾಯಕಾರಿ ಮಟ್ಟಕ್ಕೇರಿದೆ. ಹಾಗಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಾರ್ವಜನಿಕ ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಶಾಲೆಗಳನ್ನು ಮುಚ್ಚಬೇಕು; ಜನರು ತಮ್ಮ ಮನೆಯಿಂದ ಹೊರಗೆ ಬರಬಾರದು ಎಂಬ ಸೂಚನೆಯನ್ನು ಐಎಂಎ ನೀಡಿದೆ.
ಅತ್ಯುನ್ನತ ಅಪಾಯಕಾರಿ ಮಟ್ಟದ ವಾಯು ಮಾಲಿನ್ಯದ ಕಾರಣ ಇದೇ ನವೆಂಬರ್ 19ರಂದು ನಡಯಲಿರುವ ಏರ್‌ಟೆಲ್ ಡೆಲ್ಲಿ ಹಾಫ್ ಮ್ಯಾರಥಾನ್ ರದ್ದು ಪಡಿಸಬೇಕು ಎಂದು ವೈದ್ಯರ ಸಂಘ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದೆ.
ದಿಲ್ಲಿ ಹೊರವಲಯದ ಹೊಲಗದ್ದೆಗಳಲ್ಲಿ ಬೆಳೆ ಅವಶೇಷಗಳನ್ನು ಸುಡುವುದು ವ್ಯಾಪಕವಾಗಿರುವುದರಿಂದ ದಟ್ಟನೆಯ ಹೊಗೆ ಆಗಸದಲ್ಲಿ ತುಂಬಿಕೊಂಡಿದೆ. ಇಂದು ಮಂಗಳವಾರ ಬೆಳಗ್ಗೆ ದಿಲ್ಲಿಗರು ನಿದ್ದೆಯಿಂದ ಏಳುತ್ತಲೇ ತೀವ್ರವಾಗಿ ಹದಗೆಟ್ಟ ವಾಯು ಗುಣಮಟ್ಟವನ್ನು ಕಂಡು ದಿಗಿಲು ಗೊಂಡರು.
ವಾಯು ಗುಣಮಟ್ಟ ಸೂಚ್ಯಂಕ ಪ್ರಕಾರ ಪೂರ್ವ ದಿಲ್ಲಿಯ ದಿಲ್‌ಷದ್ ಗಾರ್ಡನ್ ಪ್ರದೇಶದಲ್ಲಿ 420 ಇದ್ದರೆ ಆನಂದ್ ವಿಹಾರ್‌ನಲ್ಲಿ ಅದು 319ರಲ್ಲಿ ದಾಖಲಾಗಿದೆ.
ಪಂಜಾಬಿ ಬಾಗ್‌ನ ಎಕ್ಯುಐ 999 ಮತ್ತು ಆರ್ ಕೆ ಪುರಂ ನ ಎಕ್ಯುಐ 852ರ ಅತ್ಯಂತ ಅಪಾಯಕಾರಿ ಪ್ರಮಾಣದಲ್ಲಿ ದಾಖಲಾಗಿದೆ.