Advertisement

ಮಾರ್ಕ್ ಮಾಡಿ ಬಂದರೆ ಅಳಿಸುತ್ತಾರೆ

11:51 AM Nov 14, 2018 | Team Udayavani |

ಬೆಂಗಳೂರು: ಒತ್ತುವರಿ ತೆರವುಗೊಳಿಸಲು ಮಾಡಿರುವ ಮಾರ್ಕಿಂಗ್‌ನ್ನು ಒತ್ತುವರಿದಾರರು ಅಳಸಿಹಾಕುತ್ತಿದ್ದಾರೆ. ಹೀಗಾಗಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲು ಸಾಧ್ಯವಾಗುತ್ತಿಲ್ಲ…

Advertisement

ಸ್ವತಃ ಉಪಮುಖ್ಯಮಂತ್ರಿಗಳೂ ಆದ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರೂ, ತೆರವು ಕಾರ್ಯಾಚರಣೆಗೆ ಮುಂದಾಗದ ಅಧಿಕಾರಿಗಳು ನೀಡುತ್ತಿರುವ ಸಮಜಾಯಿಷಿ ಇದು. 

ಭೂ ಮಾಪಕರು ಒತ್ತುವರಿಯನ್ನು ಗುರುತಿಸಿ ವರದಿ ನೀಡಿದ್ದು, ಅಕ್ಟೋಬರ್‌ 28ರಿಂದಲೇ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದ್ದ ಅಧಿಕಾರಿಗಳು ಎರಡು ವಾರಗಳು ಕಳೆದರೂ ಒಂದೇ ಒಂದು ಒತ್ತುವರಿ ಪ್ರಕರಣವನ್ನು ತೆರವುಗೊಳಿಸಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಇನ್ನೂ ಸಂಪೂರ್ಣವಾಗಿ ಮಾರ್ಕಿಂಗ್‌ ಆಗಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

ನಗರದಲ್ಲಿ ವಾರದೊಳಗೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುವುದಾಗಿ ಉಪಮುಖ್ಯಮಂತ್ರಿ ಪರಮೇಶ್ವರ್‌ ಹಾಗೂ ಮೇಯರ್‌ ಗಂಗಾಬಿಕೆ ಅವರು ಮಾಧ್ಯಮಗಳಿಗೆ ಹಲವಾರು ಬಾರಿ ಹೇಳಿಕೆ ನೀಡಿದ್ದಾರೆ. ಜತೆಗೆ ಈ ಮೊದಲಿನಂತೆ ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸುವುದಿಲ್ಲವೆಂದು ಹೇಳಿಕೆ ನೀಡಿದ್ದರು.

ಕಳೆದ ಎರಡು ವರ್ಷಗಳಂತೆ ನಗರದಲ್ಲಿ ಉತ್ತಮ ಮಳೆಯಾಗಿದ್ದರೆ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಜನರು ತೊಂದರೆ ಅನುಭವಿಸುತ್ತಿದ್ದರು. ಅದೃಷ್ಟವಶಾತ್‌ ಈ ಬಾರಿ ನಗರದಲ್ಲಿ ಹೆಚ್ಚಿನ ಮಳೆಯಾಗಿಲ್ಲ. ಆದರೆ, ಅಧಿಕಾರಿಗಳು ಮಾತ್ರ ಒತ್ತುವರಿ ತೆರವುಗೊಳಿಸಲು ಮುಂದಾಗದೆ ತಮಗೂ ಒತ್ತುವರಿಗೂ ಏನೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಟೀಕೆಗಳಿಗೆ ಕಾರಣವಾಗಿದೆ.

Advertisement

ವರದಿ ಬಂದರೂ ಕ್ರಮವಿಲ್ಲ: ಪಾಲಿಕೆಯ ಅಧಿಕಾರಿಗಳು ಮೊದಲು ಭೂಮಾಪಕರಿಲ್ಲ ಕಾರಣ ಒತ್ತುವರಿ ತೆರವು ಕಾರ್ಯ ನಡೆಸುತ್ತಿಲ್ಲ ಎನ್ನುತ್ತಿದ್ದರು. ಆ ಹಿನ್ನೆಲೆಯಲ್ಲಿ ಪರಮೇಶ್ವರ್‌ ಕಂದಾಯ ಇಲಾಖೆಗೆ ಸೂಚನೆ ನೀಡಿ 10 ಭೂಮಾಪಕರನ್ನು ನೇಮಿಸುವಂತೆ ಸೂಚನೆ ನೀಡಿದ್ದರು.

ಅದರಂತೆ ಪಾಲಿಕೆಗೆ ಪಾಲಿಕೆಗೆ ನಿಯೋಜನೆಗೊಂಡಿದ್ದ ಭೂ ಮಾಪಕರು ಸರ್ವೆ ನಡೆಸಿ ವರದಿಯನ್ನು ಪಾಲಿಕೆಯ ಅಧಿಕಾರಿಗಳಿಗೆ ನೀಡಿದ್ದರು. ಅದರಂತೆ 21 ಪ್ರದೇಶಗಳಲ್ಲಿನ 242 ಸರ್ವೆ ಸಂಖ್ಯೆಗಳ ಆಸ್ತಿ ರಾಜಕಾಲುವೆ ಒತ್ತುವರಿ ಪತ್ತೆ ಮಾಡಿಕೊಟ್ಟಿದ್ದರು. ಆ ಹಿನ್ನೆಲೆಯಲ್ಲಿ ಒತ್ತುವರಿ ಕಾರ್ಯಾಚರಣೆ ಆರಂಭಿಸುವುದಾಗಿಯೂ ಅಧಿಕಾರಿಗಳು ತಿಳಿಸಿದ್ದರು. ಆದರೆ, ಈವರೆಗೆ ಕಾರ್ಯಾಚರಣೆಗೆ ಆರಂಭಿಸಲು ಮುಂದಾಗಿಲ್ಲ. 

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುವಂತೆ ಉಪಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಆದರೆ, ಅಧಿಕಾರಿಗಳು ಒತ್ತುವರಿಯ ತೆರವುಗೊಳಿಸಲು ಮಾರ್ಕಿಂಗ್‌ ಮಾಡಿದರೆ, ಒತ್ತುವರಿದಾರರು ಅಳಿಸುತ್ತಿದ್ದಾರೆ ಎನ್ನುತ್ತಿದ್ದಾರೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮಕೈಗೊಳ್ಳುವಂತೆ ಸೂಚಿಸುತ್ತೇನೆ. 
-ಗಂಗಾಂಬಿಕೆ, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next