Advertisement

Karkala: ಲೈಸೆನ್ಸ್‌ ಇಲ್ಲದ ವ್ಯಾಪಾರಕ್ಕೆ ಕಡಿವಾಣ

03:31 PM Dec 29, 2024 | Team Udayavani |

ಕಾರ್ಕಳ: ಪುರಸಭೆ ವ್ಯಾಪ್ತಿಯಲ್ಲಿ ಟ್ರೇಡ್‌ ಲೈಸೆನ್ಸ್‌ ಪಡೆಯದೇ ವ್ಯಾಪಾರ, ಉದ್ದಿಮೆ ನಡೆಸುತ್ತಿರುವ ಬಗ್ಗೆ ಹಲವರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಕಾರ್ಕಳ ಪುರಸಭೆ ಆಡಳಿತ ಕ್ರಮಕ್ಕೆ ಮುಂದಾಗಿದೆ.

Advertisement

ಈಗಾಗಲೇ ಕೆಲವರಿಗೆ ನೋಟಿಸ್‌ ನೀಡಿದ್ದು, ಸಮರ್ಪಕ ರೀತಿಯಲ್ಲಿ ವ್ಯಾಪಾರ, ಉದ್ದಿಮೆ ನಡೆಸದಿದ್ದರೆ ಸಂಬಂಧಪಟ್ಟವರ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ವ್ಯಾಪಾರ ಚಟುವಟಿಕೆ ಮುಚ್ಚಿಸುವುದಾಗಿ ಎಚ್ಚರಿಸಿದೆ.

ಕಳೆದ ಎರಡು ಪುರಸಭೆ ಸಾಮಾನ್ಯ ಸಭೆಯಲ್ಲಿಯೂ ಸದಸ್ಯರು ಟ್ರೇಡ್‌ ಲೈಸೆನ್ಸ್‌ ಇಲ್ಲದೆ ವ್ಯಾಪಾರ ನಡೆಸುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಹಲವು ಕಡೆಗಳಲ್ಲಿ ಟ್ರೇಡ್‌ ಲೈಸೆನ್ಸ್‌ ನವೀಕರಣ ಬಾಕಿ ಇದೆ. ಕೆಲವು ಹೊಸ ಮಳಿಗೆಗಳು ಟ್ರೇಡ್‌ ಲೈಸೆನ್ಸ್‌ ಇಲ್ಲದೆ ವ್ಯಾಪಾರ ನಡೆಸುತ್ತಿವೆ. ಹೀಗಾಗಿ ಪುರಸಭೆ ಆದಾಯಕ್ಕೆ ನಷ್ಟ ಉಂಟಾಗುತ್ತಿದೆ ಎನ್ನುವುದು ಆರೋಪ. ಇದರ ಜತೆಗೆ ಒಂದಕ್ಕೆ ಅನುಮತಿ ಪಡೆದು ಇನ್ನೊಂದು ವ್ಯವಹಾರ ನಡೆಸುವವರ ಮೇಲೂ ಕಣ್ಣು ಇಡಲಾಗಿದೆ.

ಟ್ರೇಡ್‌ ಲೈಸೆನ್ಸ್‌ ಇಲ್ಲದೆ ವ್ಯವಹಾರ ನಡೆಸುತ್ತಿರುವ ಮಳಿಗೆಗಳಲ್ಲಿ ಅಂಗಡಿ ಮುಂಗಟ್ಟು, ಸಣ್ಣ-ದೊಡ್ಡ ಹೊಟೇಲ್‌, ಕ್ಯಾಂಟೀನ್‌, ತರಕಾರಿ, ಹಣ್ಣು, ಹೂ, ಬಟ್ಟೆ, ಇಲೆಕ್ಟ್ರಾನಿಕ್ಸ್‌ ಮಾರಾಟ ಸಹಿತ ವಿವಿಧ ಅಂಗಡಿಗಳು ಸೇರಿವೆ. ಈ ಬಗ್ಗೆ ಅಧಿಕಾರಿಗಳ ತಂಡ ಎಲ್ಲೆಡೆ ಪರಿಶೀಲನೆ ಕಾರ್ಯ ಆರಂಭಿಸುತ್ತಿದೆ. ಹಾಲಿ ಪರವಾನಿಗೆ ಪಡೆದ ಅಂಗಡಿಗಳು ಒಟ್ಟಾರೆಯಾಗಿ ಟ್ರೇಡ್‌ ಲೈಸೆನ್ಸ್‌ ನವೀಕರಣಕ್ಕೆ 27 ಲಕ್ಷ ರೂ. ಪಾವತಿಸಬೇಕಾಗಿದೆ. ಆದರೆ, 21.15 ಲಕ್ಷ ರೂ. ಸಂಗ್ರಹವಾಗಿದೆ. 6.99 ಲಕ್ಷ ರೂ. ಬಾಕಿ ಇದೆ ಎಂದು ಪುರಸಭೆ ಮಾಹಿತಿ ನೀಡಿದೆ.

ನವೀಕರಣವೂ ಮಾಡಿಸಿಕೊಳ್ಳುತ್ತಿಲ್ಲ
ಪುರಸಭೆ ವ್ಯಾಪ್ತಿಯಲ್ಲಿ 80ಕ್ಕೂ ಅಧಿಕ ಅಂಗಡಿಗಳು ಟ್ರೇಡ್‌ ಲೈಸೆನ್ಸ್‌ ನವೀಕರಣಕ್ಕೆ ಬಾಕಿ ಇರಿಸಿಕೊಂಡಿದ್ದು, ಇದರ ನವೀಕರಣ ಪ್ರಕ್ರಿಯೆಗೆ ಸೂಚಿಸಲಾಗಿದೆ. 10ಕ್ಕೂ ಅಧಿಕ ಕಡೆಗಳಲ್ಲಿ ಲೈಸೆನ್ಸ್‌ ಇಲ್ಲದೆ ವ್ಯಾಪಾರ ಮಾಡುತ್ತಿರುವವರಿಗೆ ಈಗಾಗಲೆ ನೋಟಿಸ್‌ ನೀಡಲಾಗಿದ್ದು, ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕಾನೂನು ಕ್ರಮ ಕೈಗೊಳ್ಳಬೇಕು
ಕೆಲವು ಕಡೆಗಳಲ್ಲಿ ಅನುಮತಿ ಒಂದಕ್ಕೆ ಪಡೆಯುವುದು, ಇನ್ನೊಂದು ವ್ಯವಹಾರ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಲೈಸೆನ್ಸ್‌ ಇಲ್ಲದೆ ವ್ಯಾಪಾರ ನಡೆಸುವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಿದೆ.
– ಶುಭದ ರಾವ್‌, ಪುರಸಭೆ ಸದಸ್ಯ

ದುಪ್ಪಟ್ಟು ದಂಡ ವಿಧಿಸಲಾಗುವುದು
ಲೈಸೆನ್ಸ್‌ ಇಲ್ಲದೆ ವ್ಯಾಪಾರ ಮಾಡುವ ಅಂಗಡಿ, ಮುಂಗಟ್ಟು ಇನ್ನಿತರೆ ಉದ್ದಿಮೆ ಘಟಕ, ಮಳಿಗೆಗಳನ್ನು ಮುಚ್ಚಿಸಿ ದುಪ್ಪಟ್ಟು ದಂಡ ವಿಧಿಸಲಾಗುವುದು. ನವೀಕರಣಕ್ಕೆ ಬಾಕಿ ಇರುವವರು ಕೂಡಲೇ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಠಿನ ಕ್ರಮ ಕೈಗೊಳ್ಳಲಾಗುವುದು.
– ರೂಪಾ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next