Advertisement

ನಾಳೆ(ಜುಲೈ 26): ಪದವಿ ಕಾಲೇಜು ಆರಂಭ; ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ : ಡಿಸಿಎಂ

07:51 PM Jul 25, 2021 | Team Udayavani |

ಬೆಂಗಳೂರು: ಕೋವಿಡ್-19 ಎರಡನೇ ಅಲೆಯ ಲಾಕ್ ಡೌನ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ನಾಳೆಯಿಂದ (ಜು.26) ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭವಾಗುತ್ತಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೂಚಿಸಿದ್ದಾರೆ.

Advertisement

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ನೇರ ತರಗತಿಗಳಿಗೆ ಹಾಜರಾಗಲಿಚ್ಛಿಸುವ ಪ್ರತಿ ವಿದ್ಯಾರ್ಥಿಯೂ ಮೊದಲ ಡೋಸ್ ಲಸಿಕೆ ಪಡೆಯುವುದು ಕಡ್ಡಾಯ. ಈಗಾಗಲೇ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ಸ್ಪಷ್ಟ ಮಾರ್ಗಸೂಚಿ ಜಾರಿ ಮಾಡಿದ್ದು, ಅದನ್ನು ಎಲ್ಲ ವಿಶ್ವವಿದ್ಯಾಲಯಗಳ ಅಡಿಯಲ್ಲಿರುವ ಕಾಲೇಜುಗಳು ಚಾಚೂತಪ್ಪದೇ ಪಾಲಿಸಬೇಕು. ಈ ಬಗ್ಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.

ಕೋವಿಡ್ ಮಾರ್ಗಸೂಚಿಯ ಪ್ರಾಥಮಿಕ ಶಿಷ್ಠಾಚಾರದಂತೆ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯವಾಗಿ ಮಾಡಲೇಬೇಕು. ನಿತ್ಯವೂ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಬೇಕು. ಅಲ್ಲದೆ, ವಿದ್ಯಾರ್ಥಿಗಳ ಲಸೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದು ಆದಷ್ಟು ಬೇಗ ಎಲ್ಲರಿಗೂ ಲಸಿಕೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಎಲ್ಲ ಕುಲಪತಿಗಳಿಗೆ ಸೂಚನೆ ಕೊಡಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.

ಇದನ್ನೂ ಓದಿ :ಅಂಕೋಲಾ-ಹುಬ್ಬಳ್ಳಿ ರಸ್ತೆ ಬಂದ್ : ನಾಲ್ಕು ದಿನದಿಂದ ಮುಂದಕ್ಕೆ ಹೋಗದ 700 ವಾಹನಗಳು

ನೇರ ತರಗತಿಗಳಿಗೆ ಹಾಜರಾಗುವ ಆಯ್ಕೆ ವಿದ್ಯಾರ್ಥಿಗಳಿಗೇ ಬಿಡಲಾಗಿದೆ. ಅವರು ಇಚ್ಛೆ ಇದ್ದರೆ ಭೌತಿಕ ತರಗತಿಗಳಿಗೆ ಹಾಜರಾಗಬಹುದು, ಇಲ್ಲವೇ ಆನ್‌ಲೈನ್ ಮೂಲಕವೂ ಕಲಿಯಬಹುದು. ಆದರೆ, ಯಾವುದಾದರೂ ಒಂದರಲ್ಲಿ ಹಾಜರಾತಿ ಕಡ್ಡಾಯ ಎಂದು ಅವರು ತಿಳಿಸಿದ್ದಾರೆ.

Advertisement

74% ವಿದ್ಯಾರ್ಥಿಗಳಿಗೆ ಲಸಿಕೆ:

ರಾಜ್ಯದ ಎಲ್ಲ ವಿವಿಗಳ ವ್ಯಾಪ್ತಿಗಳಲ್ಲೂ ಲಸಿಕೀಕರಣ ವೇಗವಾಗಿ ನಡೆಯುತ್ತಿದ್ದು, ಈವರೆಗೆ 74% ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಇನ್ನು ಕೆಲ ದಿನಗಳಲ್ಲೇ ಉಳಿದ ಎಲ್ಲ ವಿದ್ಯಾರ್ಥಿಗಳಿಗೂ ಆದ್ಯತೆಯ ಮೇರೆಗೆ ವ್ಯಾಕ್ಸಿನ್ ಕೊಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.

ಕೆಲ ವಿಶ್ವವಿದ್ಯಾಲಯಗಳಲ್ಲಿ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಲಸಿಕೀಕರಣ ನಡೆದಿದೆ. ಇನ್ನು ಕೆಲ ವಿವಿಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಈ ಬಗ್ಗೆ ಕ್ರಮ ವಹಿಸಲು ಆಯಾ ವಿವಿಗಳ ಕುಲಪತಿಗಳಿಗೆ ತಿಳಿಸಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next