ಸೋಲು’ ಎಂಬ ಎರಡಕ್ಷರವು ಎಷ್ಟೊಂದು “ನೋವು’ ಕೊಡುತ್ತದೆಯೆಂದು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಅದರ ಅಳವನ್ನು ತಿಳಿದುಕೊಂಡವರಿಗೂ ಅದು ಗೊತ್ತಿರುತ್ತದೆ. ಸೋತರೆ ಸಾವು ಮಾತ್ರ ಪರಿಹಾರವೆ? ಖಂಡಿತ ಸಾವು ಪರಿಹಾರವಲ್ಲ, ಸೋಲೆಂಬ ನೋವಿನಿಂದ ಹೊರಬರಲು ಸಾಧ್ಯವಿದೆ. ಸೋತವರು ಅನುಭವಿಸುವ ನೋವಿದೆಯಲ್ಲ ಅದನ್ನ ಹೇಗೆ ಎಂದು ವಿಶ್ಲೇಷಿಸಲು ಸಾಧ್ಯವಿಲ್ಲ. ಹತ್ತು ಜನರು ಆಡಿಕೊಳ್ಳುವ ಪರಿಹಾಸ್ಯವಿದೆಯಲ್ಲ ಅದು ಕಠೊರವಾದದ್ದು. ಸೋತವರಿಗೆ ಅದನ್ನು ಎದುರಿಸುವ ಶಕ್ತಿ ಬೇಕು ಅಷ್ಟೆ. ಅಂತಹವರು ಎಷ್ಟೇ ಕಷ್ಟ ಬಂದರೂ ಎದುರಿಸಬಲ್ಲರು. ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಒಂದು ಮಾತು ಹೇಳಿದ್ದಾರೆ. ಸೋಲುವುದು ತಪ್ಪಲ್ಲ ಅವು ಭವಿಷ್ಯದ ಹೆದ್ದಾರಿಗಳು. ಭಯ ಪಟ್ಟವನು ಇದ್ದಲ್ಲಿಯೇ ಇರುತ್ತಾನೆ” ಎಂದು. ಆದ್ದರಿಂದ ಸೋತವರು ಭಯ ಪಡಬಾರದು ಎಂಬುವುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಮಾನವನಾಗಿ ಹುಟ್ಟಿದ ಮೇಲೆ ಜೀವನದ ಕೆಲವೊಂದು ದಾರಿಗಳಲ್ಲಿ ಸೋಲುಂಟಾಗುವುದು ಸಹಜ. ಸೋಲುಗಳನ್ನು ಧನಾತ್ಮಕವಾಗಿ ಯಾಕೆ ಸ್ವೀಕರಿಸಬಾರದು!
ಸೋಲುಗಳನ್ನು ಕೈಚಾಚಿ ಸ್ವೀಕರಿಸಿದರೆ ಮಾತ್ರ ಗೆಲುವೆಂಬ ಪದದ ಅರ್ಥ ಹಾಗೂ ಆ ಪದದ ಬೆಲೆ ತಿಳಿದುಬರುತ್ತದೆ. ಸೋತವನಿಗೆ ಅವಕಾಶಗಳಿರುವುದಿಲ್ಲ. ಅವಕಾಶಗಳನ್ನು ನಾವು ಸೃಷ್ಟಿಸಬೇಕು ಅಷ್ಟೆ. ಪರೀಕ್ಷೆಯಲ್ಲಿ ಸೋತರೆಂದರೆ ಅವರು ಅವರ ಜೀವನದಲ್ಲಿ ಸೋತರೆಂದು ಅರ್ಥವಲ್ಲ. ಅದನ್ನು ಅವರು ಸಮರ್ಪಕವಾಗಿ ಬಳಸಬೇಕು ಅಷ್ಟೆ. ಸೋತವರಿಗೆ ಕೈಹಿಡಿಯುವ ಸಂಸ್ಥೆಗಳು ಇರುತ್ತವೆ. ಪರೀಕ್ಷೆÒಯಲ್ಲಿ ಸೋತರೆಂದರೆ ಟ್ಯುಟೋರಿಯಲ್ ಸಂಸ್ಥೆಗಳು ಅವರ ಕತ್ತಲ ಬಾಳಿಗೆ ಬೆಳಕಾಗುತ್ತದೆ. ಅವರಿಗೆ ಮರು ಅವಕಾಶಗಳನ್ನು ಸೃಷ್ಟಿಸಿ ಕೊಡುತ್ತದೆ. ಅವರು ಆ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸೋತವನಿಗೆ ಗೆಲ್ಲಬೇಕೆನ್ನುವ ಹಂಬಲ ಅಧಿಕವಿರುತ್ತದೆ. ಆದ್ದರಿಂದ, ಅದಕ್ಕೆ ಪೂರಕವಾಗಿರುವ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು. ಪ್ರತಿ ಬಾರಿಯೂ ಗೆಲ್ಲುವವನಿಗೆ ಆತ್ಮವಿಶ್ವಾಸ ಅಧಿಕವಿರುತ್ತದೆ. ಆದರೆ, ಪರಿಶ್ರಮ ತಕ್ಕಮಟ್ಟಿಗೆಯಷ್ಟೇ ಇರುತ್ತದೆ. ಸೋತವರಲ್ಲಿ ಆತ್ಮವಿಶ್ವಾಸ ಹಾಗೂ ಪರಿಶ್ರಮ ಇವೆರಡೂ ಅಧಿಕವಾಗಿರಬೇಕು.
ನನಗೆ ನನ್ನ ಸರ್ ಒಬ್ರು ಹೇಳುವ ಮಾತುಗಳು ನೆನಪಾಗುತ್ತದೆ. “”ಎಂತಹದೇ ಕಷ್ಟಗಳಾದರೂ ಅವುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ” ಎಂದು. ಸೋಲನ್ನು ಧನಾತ್ಮಕವಾಗಿ ಸ್ವೀಕರಿಸಿದವರಿಗೆ ಒಂದಲ್ಲ ಒಂದು ಹಾದಿಯಲ್ಲಿ ಗೆಲುವಿದ್ದೇ ಇರುತ್ತದೆ, ಆದರೆ ಪರಿಶ್ರಮ ಹಾಗೂ ಆತ್ಮವಿಶ್ವಾಸಗಳೆರಡೂ ಇರಬೇಕು. ಸೋತವರಿಗೆ ಬೇರೆ ಯಾವ ಕ್ಷೇತ್ರದಲ್ಲಾದರೂ ಆಸಕ್ತಿಯಿದ್ದರೆ ಆ ಕ್ಷೇತ್ರದಲ್ಲಿ ದುಡಿಯುವ ಮನಸ್ಸಿದ್ದರೆ ಹಾಗೆ ಮಾಡುವುದು ಒಳ್ಳೆಯದು. ಆದರೆ ಅವರು ಅವರ ಆಸಕ್ತಿಯ ಕ್ಷೇತ್ರವನ್ನರಿತು ಆರಿಸಿಕೊಳ್ಳಬೇಕು. ಆಗ ಅವರಿಗೆ ಆತ್ಮವಿಶ್ವಾಸ ಹಾಗೂ ಪರಿಶ್ರಮ ಇವೆರಡೂ ಇರುತ್ತದೆ. ಮೊದಲ ಪ್ರಯತ್ನದಲ್ಲೇ ಗೆಲ್ಲುವವನು ಬದುಕಲ್ಲಿ ಗೆಲ್ಲುತ್ತಾನೆ. ಆದರೆ ಸೋತವನು ಜಗತ್ತನ್ನೇ ಗೆಲ್ಲುತ್ತಾನೆ. ಯಾಕೆಂದರೆ ಸೋತವನಿಗೆ ಸಂಕಟವಿರುತ್ತೆ, ಸಂಕಟದೊಂದಿಗೆ ಸೆಣಸಾಡುವ ಮನಸ್ಸಿಗೆ ಛಲ ಹೆಚ್ಚಿರುತ್ತೆ. ಸೋತವರಿಗೆ ಅದರ ಬಗ್ಗೆ ದುಃಖವಿದ್ದರೆ ಮಾತ್ರ ಗೆಲುವಿನ ಹಾದಿಯನ್ನು ಹುಡುಕಲು ಸಾಧ್ಯ.
ನಾನು ಇಷ್ಟೆಲ್ಲ ಹೇಳಲು ಕಾರಣವೇನೆಂದರೆ, ನಾನು ಸೋಲನ್ನು ಅನುಭವಿಸಿದ್ದೇನೆ. ಅದರ ನೋವನ್ನು ಅನುಭವಿಸಿದ್ದೇನೆ. ಕೊನೆಯಲ್ಲಿ ಮನಸ್ಸಿಗೆ ಅಲ್ಪವೇ ನೆಮ್ಮದಿ ದೊರಕುವಂತಹ ಗೆಲುವು ಲಭಿಸಿದೆ. ಗೆಲುವು ನನ್ನ ಪಾಲಾಗಿದೆಯೆಂಬ ಅಹಂಕಾರ ಪಡಬಾರದು. ಯಾಕೆಂದರೆ ಗೆಲುವು ಆಗಲಿ ಸೋಲೇ ಆಗಲಿ ಶಾಶ್ವತವಲ್ಲ. ಅದು ಇಂದು ನನ್ನದಾಗುತ್ತದೆ. ನಾಳೆ ಬೇರೆ ಯಾರಧ್ದೋ ಆಗುತ್ತದೆ. ಹಾಗೆಯೇ ಪ್ರಯತ್ನ ಅನ್ನುವುದು ಜೀವನದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ. ಮನುಷ್ಯರಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಏನಾದರೊಂದು ಸಾಧಿಸಲೇಬೇಕು. ಸಾಧನೆಯೆಂದು ಬಂದಕೂಡಲೇ ಪ್ರಯತ್ನ ಇರಲೇಬೇಕು. ನಮ್ಮ ಜೀವನದ ಗುರಿ ತಲುಪಲು ಪ್ರಯತ್ನ ಆವಶ್ಯವಾಗಿರುತ್ತದೆ. ಕೆಲವೊಂದು ಗುರಿಯನ್ನು ತಲುಪಲು ಹಾಗೂ ಕೆಲವೊಂದು ಸಾಧನೆಗಳನ್ನು ಮಾಡಲು ಕಠಿಣವಾದ ಪ್ರಯತ್ನವನ್ನು ಪಡಬೇಕಾದೀತು. ಪ್ರಯತ್ನಪಟ್ಟವನಿಗೆ ಮಾತ್ರ ಅದೃಷ್ಟ ಲಭಿಸುತ್ತದೆ. ಹಾಗೆಂದು ಮಾತ್ರಕ್ಕೆ ಪ್ರಯತ್ನ ಪಡದವನ ಅದೃಷ್ಟ ಸ್ಥಿರವಲ್ಲ. ಕೆಲವೊಂದು ಕೆಲಸಗಳಲ್ಲಿ ಪ್ರಯತ್ನವಿಲ್ಲದೆ ಅದೃಷ್ಟದಿಂದಷ್ಟೇ ಗೆದ್ದಿದ್ದರೆ ಆ ಅದೃಷ್ಟವು ಮುಂದೆ ಸಿಗದೆಯೂ ಇರಬಹುದು. ಅದೃಷ್ಟದಲ್ಲಿ ಗೆದ್ದವನಿಗೆ ಅಹಂಭಾವನೆ ಜಾಸ್ತಿಯಿರುತ್ತದೆ. ಕಾರಣ, ಅವರಿಗೆ ಕೆಲಸಗಳಲ್ಲಿನ ಕಷ್ಟ ಹಾಗೂ ಆ ಕೆಲಸವನ್ನು ಪೂರ್ಣಗೊಳಿಸಲು ಪಟ್ಟ ಪ್ರಯತ್ನ ತಿಳಿದಿರುವುಲ್ಲ. ಆದರೆ ಪ್ರಯತ್ನಪಟ್ಟವರ ಅದೃಷ್ಟ ಸ್ಥಿರವಾಗಿರಬಹುದು.
ಕಾವ್ಯಶ್ರೀ ಕೆ.,
ಎಸ್.ಡಿ.ಎಂ. ಕಾಲೇಜು, ಉಜಿರೆ