Advertisement

ಕಾನೂನು ಹೋರಾಟದಲ್ಲಿ ವಾಯುಸೇನೆಗೆ ಸೋಲು

01:26 PM Dec 27, 2017 | Team Udayavani |

ಬೆಂಗಳೂರು: 1965, 1971 ಹಾಗೂ 1999ರಲ್ಲಿ ನಡೆದ “ಮಹಾಯುದ್ಧ’ಗಳನ್ನೇ ಗೆದ್ದು, ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ವಾಯುಸೇನೆ ಯಶಸ್ವಿಯಾಗಿದೆ. ಆದರೆ, ರಾಜ್ಯ ಅರಣ್ಯ ಇಲಾಖೆಯೊಂದಿಗಿನ ಕಾನೂನು ಹೋರಾಟದಲ್ಲಿ ಮಾತ್ರ ಸೋಲು ಅನುಭವಿಸಿದೆ!

Advertisement

ಹೌದು, ಯಲಹಂಕ ಮತ್ತು ಜಾಲಹಳ್ಳಿ ವ್ಯಾಪ್ತಿಯಲ್ಲಿನ ಸುಮಾರು 452 ಎಕರೆಗೂ ಅಧಿಕ ಭೂಮಿಗೆ ಸಂಬಂಧಿಸಿದಂತೆ ಭಾರತೀಯ ವಾಯುಸೇನೆ ಮತ್ತು ಅರಣ್ಯ ಇಲಾಖೆ ನಡುವೆ ಕಳೆದ ಐದು ವರ್ಷಗಳಿಂದ ನಡೆಯುತ್ತಿದ್ದ “ಕಾನೂನು ಸಮರ’ದಲ್ಲಿ ಸೇನೆಗೆ ಸೋಲಾಗಿದೆ. ಈ ಮೂಲಕ ವಿವಾದಕ್ಕೂ ತೆರೆಬಿದ್ದಿದೆ.

ಅರಣ್ಯ ಇಲಾಖೆ ಪಾಲು: ಕಂದಾಯ ಇಲಾಖೆಯಲ್ಲಿನ ದಾಖಲಾತಿಗಳ ಗೊಂದಲದಿಂದ ಯಲಹಂಕದ ಜಾರಕಬಂಡೆ ಕಾವಲ್‌ ಮತ್ತು ಪೀಣ್ಯ-ಜಾಲಹಳ್ಳಿ ಸುತ್ತಲಿನ ವ್ಯಾಪ್ತಿಯಲ್ಲಿ 452 ಎಕರೆಗೂ ಅಧಿಕ ಭೂಮಿಯ ಮಾಲಿಕತ್ವ ವಿಚಾರವು ವಾಯುಸೇನೆ ಮತ್ತು ಅರಣ್ಯ ಇಲಾಖೆ ನಡುವಿನ ಗುದ್ದಾಟಕ್ಕೆ ಕಾರಣವಾಗಿತ್ತು. ಈ ಬಾರಿ ಅರಣ್ಯ ಇಲಾಖೆ ಸಮರ್ಪಕ ತಯಾರಿಯೊಂದಿಗೆ ವಾದ ಮುಂದಿಟ್ಟಿತು. ಪರಿಣಾಮ ಉದ್ದೇಶಿತ ಭೂಮಿ ಅಂತಿಮವಾಗಿ ಅರಣ್ಯ ಇಲಾಖೆ ಪಾಲಾಯಿತು.

ರಕ್ಷಣಾ ಸಚಿವಾಲಯದ ಕರ್ನಾಟಕ ವೃತ್ತದ ವಾಯುಸೇನೆ ಅಧಿಕಾರಿಗಳ ಮನವಿ ಮೇರೆಗೆ 1987ರಲ್ಲೇ ರಾಜ್ಯ ಸರ್ಕಾರವು ಈ ಭೂಮಿಯನ್ನು ವಾಯುಸೇನೆಗೆ ಹಸ್ತಾಂತರಿಸಿತ್ತು. ಆದರೆ, 1941-42ರಿಂದಲೂ ಈ ಭೂಮಿ ಭಾರತೀಯ ವಾಯುಸೇನೆ ಸುಪರ್ದಿಯಲ್ಲಿದೆ. ಹಾಗಾಗಿ, ಉದ್ದೇಶಿತ ಭೂಮಿ ತಮ್ಮ ಸ್ವತ್ತು ಎಂದು ಹೇಳಿಕೊಂಡಿತ್ತು.

ಅದರಂತೆ ಕಂದಾಯ ಇಲಾಖೆಯು ಸ್ವಾತಂತ್ರ್ಯಪೂರ್ವದಿಂದಲೂ ಇದು ವಾಯುಸೇನೆ ಸುಪರ್ದಿಯಲ್ಲಿರುವುದರಿಂದ ಭೂಮಿಯನ್ನು ಸೇನೆಗೆ ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ 1969ರ ಕರ್ನಾಟಕ ಭೂ ಮಂಜೂರಾತಿ ನಿಯಮದ ಪ್ರಕಾರ ವಾಯುಸೇನೆಯು ಭೂಪರಿವರ್ತನೆ ಖರ್ಚು, ಭೂಮಿಯ ಸರ್ವೆ ವೆಚ್ಚ ಸೇರಿದಂತೆ ಎಕರೆಗೆ 50 ಸಾವಿರ ರೂ. ನೀಡುವಂತೆ ಸೂಚಿಸಲಾಗಿತ್ತು ಎಂದು ಕಂದಾಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಗಮನಕ್ಕೆ ತರದೆ ಹಸ್ತಾಂತರ: ಆದರೆ, ಈ ಭೂಮಿಯ ಮೂಲ ಮಾಲೀಕತ್ವವನ್ನು ಹೊಂದಿರುವ ಅರಣ್ಯ ಇಲಾಖೆ ಗಮನಕ್ಕೆ ತರದೆ, ಈ ಭೂಮಿ ಹಂಚಿಕೆ ಅಥವಾ ಹಸ್ತಾಂತರ ಮಾಡಲಾಗಿದೆ. ಹಾಗಾಗಿ, ಇದೊಂದು ಕಾನೂನು ಬಾಹಿರ ಹಂಚಿಕೆ. ಈ ಬಗ್ಗೆ ಭಾರತೀಯ ಮಹಾಲೆಕ್ಕ ಪರಿಶೋಧಕರು 2014ರಲ್ಲಿ ಸಲ್ಲಿಸಿದ್ದ ವಾರ್ಷಿಕ ವರದಿಯಲ್ಲಿ ಮೊದಲ ಬಾರಿಗೆ ಉಲ್ಲೇಖೀಸಿದ್ದರು.

ಬಳಿಕ ಜಾರಕಬಂಡೆ ಕಾವಲ್‌ ಸುತ್ತಲಿನ ಪ್ರದೇಶದ ಹಸ್ತಾಂತರದ ಬಗ್ಗೆ ಆಕ್ಷೇಪಗಳು ಕೇಳಿಬಂದವು. ಈ ಮಧ್ಯೆ 2016ರಲ್ಲಿ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೂಡ ಈ ವಿಷಯವನ್ನು ಅಧಿವೇಶನದಲ್ಲಿ ಎತ್ತಿತ್ತು. ಹಾಗೂ ಭೂಮಿ ಹಸ್ತಾಂತರ ವಿಚಾರದಲ್ಲಿ ನಿಯಮ ಪಾಲಿಸಿಲ್ಲ ಎಂದು ಹೇಳಿತ್ತು.

ಉದ್ದೇಶಿತ ಈ ಭೂಮಿಯನ್ನು ಕಂದಾಯ ಇಲಾಖೆಯು ವಾಯುಸೇನೆ ಹಸ್ತಾಂತರಿಸುವಾಗ ಅರಣ್ಯ ಇಲಾಖೆ ಗಮನಕ್ಕೂ ತಂದಿಲ್ಲ. ಜತೆಗೆ ವಾಯುಸೇನೆಯಿಂದ ಸಂದಾಯವಾದ ಹಣವನ್ನೂ ಅರಣ್ಯ ಇಲಾಖೆಗೆ ನೀಡಿಲ್ಲ ಎಂದು ಹೇಳಿತ್ತು. ಆಗ ಅರಣ್ಯ ಇಲಾಖೆಯು ಈ ಭೂಮಿ ಹಸ್ತಾಂತರವನ್ನು ರದ್ದುಪಡಿಸುವಂತೆ ಸಮಿತಿಗೆ ಮನವಿ ಮಾಡಿತ್ತು. 

ಪೂರ್ಣ ಹಣ ಸಂದಾಯವಾಗಿಲ್ಲ: ಈ ಮಧ್ಯೆ ಕಂದಾಯ ಇಲಾಖೆ, ಭೂಮಿ ಹಸ್ತಾಂತರಕ್ಕೆ ಪ್ರತಿಯಾಗಿ ವಾಯುಸೇನೆಯಿಂದ ಬರಬೇಕಿದ್ದ ಸಂಪೂರ್ಣ ಹಣ ಸಂದಾಯವಾಗಿಲ್ಲ. ಅಲ್ಪಮೊತ್ತವನ್ನು ಮಾತ್ರ ನೀಡಿದೆ ಎಂದು ಬಹಿರಂಗಪಡಿಸಿತು. ಇದೆಲ್ಲದರ ಪರಿಣಾಮ ಭೂಮಿಯು ಅರಣ್ಯ ಇಲಾಖೆ ಸುಪರ್ದಿಗೆ ಬರುತ್ತದೆ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. 

ಅಂದಹಾಗೆ ಜಾರಕಬಂಡೆ ಒಂದು ಶ್ರೀಗಂಧದ ಕಾಡು. ಅಲ್ಲಿ ಶ್ರೀಗಂಧದ ಮರಗಳು ಹೇರಳವಾಗಿ ಬೆಳೆದಿದೆ. ಸಾಮಾಜಿಕ ಅರಣ್ಯ ಯೋಜನೆ ಅಡಿ ಕೂಡ ಅಲ್ಲಿ ಜನ ಶ್ರೀಗಂಧ ಬೆಳೆಯುತ್ತಿದ್ದಾರೆ. ಉದ್ದೇಶಿತ ಸುಮಾರು 452 ಎಕರೆ ಭೂಮಿಯಲ್ಲಿ ಭಾರತೀಯ ವಾಯುಸೇನೆಯು ಇದುವರೆಗೆ ಯಾವುದೇ ಚಟುವಟಿಕೆಯನ್ನು ಕೈಗೊಂಡಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next