ಬೆಂಗಳೂರು: ನ.14, 15ರಂದು ಇಟಲಿಯ ಲೇಕ್ ಕೋಮೊದಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದ ಬಾಲಿವುಡ್ ತಾರಾಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್, ವಿವಾಹ ಆರತಕ್ಷತೆ ಕಾರ್ಯಕ್ರಮ ನಗರದ “ದಿ ಲೀಲಾ ಪ್ಯಾಲೇಸ್’ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಖ್ಯಾತ ವಸ್ತ್ರವಿನ್ಯಾಸಕಾರ ಸಭ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ್ದ, ಚಿನ್ನದ ಬಣ್ಣದ ಬನಾರಸ್ ಸೀರೆಯುಟ್ಟು, ಮುತ್ತು ಹಾಗೂ ಪಚ್ಚೆ ಮಿಶ್ರಣದ ಸರ ಹಾಕಿಕೊಂಡು, ತಲೆಗೆ ಲೋ ಬನ್ ಅದರ ಸುತ್ತ ಮಲ್ಲಿಗೆ ಹೂ ಮುಡಿದು ಹಣೆಗೆ ಸಿಂಧೂರವಿಟ್ಟು ದೀಪಿಕಾ ಕಂಗೊಳಿಸುತ್ತಿದ್ದರೆ, ಕಪ್ಪು ಬಣ್ಣದ ಶೇರವಾನಿಯಲ್ಲಿ ರಣವೀರ್ ಮಿಂಚುತ್ತಿದ್ದರು.
ಆರತಕ್ಷತೆ ಕಾರ್ಯಕ್ರಮಕ್ಕೆ, ತೀರಾ ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು, ಕ್ರಿಕೆಟಿಗ ಅನಿಲ್ ಕುಂಬ್ಳೆ, ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಸೇರಿದಂತೆ, ದೀಪಿಕಾ-ರಣವೀರ್ ಕುಟುಂಬದ ಹತ್ತಿರದ ಬಂಧುಗಳು, ಸ್ನೇಹಿತರು, ಉದ್ಯಮಿಗಳು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಆರತಕ್ಷತೆಯಲ್ಲಿ ಕನ್ನಡದ ನಟರಾದ ಅಂಬರೀಶ್, ಉಪೇಂದ್ರ, ಸುದೀಪ್, ಯಶ್, ಪುನೀತ್ ರಾಜಕುಮಾರ್, ನಿರ್ದೇಶಕ ಇಂದ್ರಜಿತ್ ಲಂಕೇಶ್ ಮೊದಲಾದವರಿಗೆ ಆರತಕ್ಷತೆಯ ಆಮಂತ್ರಣ ತಲುಪಿದ್ದು, ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯ ಪ್ರಮುಖ ನಟ-ನಟಿಯರು, ನಿರ್ದೇಶಕ, ನಿರ್ಮಾಪಕರು, ಕ್ರೀಡಾ ತಾರೆಯರು ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಅಧಿಕ ಗಣ್ಯರ ಉಪಸ್ಥಿತರಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಅನೇಕ ನಿರೀಕ್ಷಿತ ಗಣ್ಯರು ಈ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.
ಆರತಕ್ಷತೆಯಲ್ಲಿ ನೃತ್ಯ ಕಾರ್ಯಕ್ರಮಗಳ ಜೊತೆಗೆ ಅತಿಥಿಗಳಿಗಾಗಿ ಬಗೆಬಗೆಯ ಭೋಜನ, ಖಾದ್ಯಗಳನ್ನು ಸವಿಯುವ ವ್ಯವಸ್ಥೆ ಮಾಡಲಾಗಿತ್ತು. ಹಲವು ತಾರೆಯರು, ಗಣ್ಯರು ಕಾರ್ಯಕ್ರಮಕ್ಕೆ ಭಾಗವಹಿಸುವ ಸಾಧ್ಯತೆ ಇದ್ದ ಕಾರಣ ಹೋಟೆಲ್ ಸುತ್ತ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಇನ್ನು ಈ ಆರತಕ್ಷತೆ ಸಮಾರಂಭಕ್ಕೆ ಎರಡು ದಿನಗಳ ಮೊದಲೇ “ದಿ ಲೀಲಾ ಪ್ಯಾಲೇಸ್’ನಲ್ಲಿ ತಯಾರಿ ಆರಂಭವಾಗಿದ್ದು, ದಕ್ಷಿಣ ಭಾರತ ಮತ್ತು ಉತ್ತರ ಭಾರತ ಶೈಲಿಯ ವಿಶೇಷ ಖಾದ್ಯಗಳನ್ನು ತಯಾರಿಸುವ ಸಲುವಾಗಿಯೇ ನುರಿತ ಬಾಣಸಿಗರ ತಂಡ ಬೆಂಗಳೂರಿಗೆ ಆಗಮಿಸಿ, ಶುಚಿ-ರುಚಿಯಾದ ಅಡುಗೆಗೆ ಬೇಕಾದ ತಯಾರಿಗಳನ್ನು ಮಾಡಿಕೊಂಡಿತ್ತು. ಆರತಕ್ಷತೆ ಸಲುವಾಗಿ ಲೀಲಾ ಪ್ಯಾಲೇಸ್ ಹೋಟೆಲ್‌ಗೆ ವರ್ಣಮಯ ಲೈಟಿಂಗ್ಸ್ ಅಳವಡಿಸಲಾಗಿದ್ದು, ಒಳಾಂಗಣವನ್ನು ಬಗೆಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಮುಂಬೈನಲ್ಲೂ ಆರತಕ್ಷತೆ: ಇದೇ ತಿಂಗಳ 28ಕ್ಕೆ ಮುಂಬೈನಲ್ಲೂ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಾಲಿವುಡ್‌ನ ಅನೇಕ ತಾರೆಯರು, ನಿರ್ಮಾಪಕರು, ನಿರ್ದೇಶಕರು ಮತ್ತು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮಕ್ಕೆ ಗೈರಾದ ಗಣ್ಯರು ಅದರಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.