ದೀಪಾವಳಿಯನ್ನು ಬಲಿಪಾಡ್ಯಮಿ ಎಂಬ ಹೆಸರಲ್ಲೇ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಜತೆಗೆ, ನರಕಾಸುರನ ವಧೆಯೊಂದಿಗೆ ಕತ್ತಲೆ ತೊಲಗಿಸಿ, ಬೆಳಕು ಚೆಲ್ಲಿದ ಹಬ್ಬವಾಗಿಯೂ ದೀಪಾವಳಿ ಆಚರಿಸುತ್ತಿದ್ದೇವೆ.
ವಿಶೇಷವೆಂದರೆ ಸುತಳ ಲೋಕ ಅಥವಾ ಪಾತಾಲ ಲೋಕದಿಂದ ಬಲಿಚಕ್ರವರ್ತಿಯು ಭೂಮಿಗೆ ಬಂದು, ತಾನು ಕಟ್ಟಿದ ನಾಡು ಹೇಗಿದೆ ಎಂದು ನೋಡಿಕೊಂಡು ಹೋಗುತ್ತಾನೆ ಎಂಬ ಪ್ರತೀತಿಯೂ ಇದೆ. ಅದರಂತೆ ಬಲಿಚಕ್ರವರ್ತಿ ಭೂಮಿಗೆ ಬರುವ ದಿನವನ್ನೂ ದೀಪಾವಳಿ ಎಂದೇ ಕರೆಯುತ್ತೇವೆ. ಹಾಗಾದರೆ, ಸುತಲ ಲೋಕವೆಂದರೆ, ಎಲ್ಲಿದೆ? ಹೇಗಿದೆ ಎಂಬ ಪ್ರಶ್ನೆಯೂ ಇದೆ.
ಬಲಿಚಕ್ರವರ್ತಿ ಹಿರಣ್ಯಕಶ್ಯಪುವಿನ ಪುತ್ರ ಪ್ರಹ್ಲಾದನ ಮೊಮ್ಮೊಗ. ಈತ ಅತ್ಯಂತ ಪರಾಕ್ರಮಿಯಾಗಿದ್ದು, ಸ್ವರ್ಗಲೋಕವನ್ನೂ ಜಯಿಸಿದ್ದವನು. ಆದರೆ ದಾನದಲ್ಲಿ ಮಾತ್ರ ಶೂರ. ಒಮ್ಮೆ ವಿಷ್ಣುವೇ ವಾಮನ ರೂಪದಲ್ಲಿ ಬಂದು ಬಲಿಚಕ್ರವರ್ತಿ ಬಳಿ ಮೂರು ಹೆಜ್ಜೆ ಇಡಲು ಜಾಗವನ್ನು ಕೇಳುತ್ತಾನೆ. ಮೊದಲ ಹೆಜ್ಜೆಯನ್ನು ಭೂಲೋಕ, ಎರಡನೇ ಹೆಜ್ಜೆಯಲ್ಲಿ ಸ್ವರ್ಗ ಮೂರನೇ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆ ಮೇಲಿಟ್ಟು ಸುತಲ ಅಥವಾ ಪಾತಾಳ ಲೋಕಕ್ಕೆ ಕಳುಹಿಸುತ್ತಾನೆ. ಹೀಗೆ ಹೋದ ಬಲಿಚಕ್ರವರ್ತಿ ಪ್ರತೀ ವರ್ಷ ಬಲಿಪಾಡ್ಯಮಿ ದಿನ ಭೂಲೋಕಕ್ಕೆ ಬಂದು ತಾನು ಕಟ್ಟಿದ ನಾಡನ್ನು ನೋಡಿಕೊಂಡು ಹೋಗುತ್ತಾನೆ ಎಂದು ಡಾ| ಜಯಂತಿ ಮನೋಹರ್ ಎಂಬ ಸಂಸ್ಕೃತಿ ತಜ್ಞರೊಬ್ಬರು ಉಲ್ಲೇಖಿಸಿದ್ದಾರೆ. ಹಾಗಾದರೆ ಸುತಲ ಲೋಕ ಎಲ್ಲಿದೆ ಎಂಬ ಪ್ರಶ್ನೆ ಇದೆ. ಅಂದರೆ ಪೌರಾಣಿಕವಾಗಿ ಹೇಳುವುದಾದರೆ, ಪಾತಾಳ ಎನ್ನಬಹುದಾದರೂ, ನೈಜವಾಗಿ ನೋಡುವುದಾದರೆ ದಕ್ಷಿಣ ಅಮೆರಿಕ ಭೂಖಂಡ ಎಂದು ಸಂಶೋಧಕರು ಗುರುತಿಸುತ್ತಾರೆ. ಇದಕ್ಕೆ ಪೂರಕವಾಗಿ ಗ್ವಾಟೆಮಾಲ, ಮೆಕ್ಸಿಕೋದಲ್ಲಿ ಇರುವ ದೇವಾಲಯಗಳೇ ಸಾಕ್ಷಿ ಎಂದು ಸಂಶೋಧಕರು ಹೇಳುತ್ತಾರೆ.
ಪೆರುವಿನಲ್ಲಿರುವ ತ್ರಿಶೂಲ ಚಿಹ್ನೆ
ರಾಮಾಯಣದಲ್ಲೂ ಸುತಳ ಲೋಕದ ಪ್ರಸ್ತಾವವಾಗಿದ್ದು, ಸುಗ್ರೀವನೇ ಪೂರ್ವದಿಕ್ಕಿನಲ್ಲಿರುವ ಪರ್ವತಾಗ್ರದಲ್ಲಿರುವ ತ್ರಿಮೂರ್ತಿಗಳು ನಿರ್ಮಿಸಿರುವ ಮೂರು ಶಿಖರಗಳುಳ್ಳ ಕನಕಮಯ ತಾಳಧ್ವಜ ಕುರಿತು ಹೇಳಿದ್ದಾನೆ. ಇದಕ್ಕೆ ಪೂರಕವೆಂಬಂತೆ ಇಂದು ವಿಮಾನದಲ್ಲಿ ಪ್ರಯಾಣಿಸುವಾಗ ಪಿಸ್ಕೋ ಉಪಸಾಗರದ ತೀರದ ಮೇಲೆ ಕಂಡು ಬರುವ ಶಿಲೆಯಲ್ಲಿ ಕೊರೆದಿರುವ ತ್ರಿಶೂಲಾಕಾರದಂತೆ (TRIDENT) ಕಾಣುವ ಶಿಲಾಸ್ತಂಭಗಳನ್ನು ಕಾಣಬಹುದು. ಇದುವರೆಗೆ ಇದನ್ನು ಯಾರು, ಏಕೆ ಸ್ಥಾಪಿಸಿದರು ಎಂಬ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ.
ಇನ್ನು ನಾಝಾದ ಕಣಿವೆ ಪ್ರದೇಶದಲ್ಲಿ ಮೂವತ್ತು ಮೈಲಿ ಉದ್ದ ಕಾಣುವ ರೇಖಾಚಿತ್ರಗಳೂ ಪ್ರಾಚೀನ ಕಾಲದ ವಿಮಾನ ನಿಲ್ದಾಣವಿರಬೇಕು ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಇದೂ ವಿಮಾನದಲ್ಲಿ ಹೋಗುವಾಗ ಮಾತ್ರ ಕಾಣಿಸುತ್ತದೆ.