Advertisement

ರಾಜ್ಯ ತಂಡದಿಂದ ಅಮಾನತಾಗಿದ್ದ ಆಟಗಾರ ಇದೀಗ ಟೀಂ ಇಂಡಿಯಾದ ಸ್ಟಾರ್

04:57 PM Jan 05, 2023 | ಕೀರ್ತನ್ ಶೆಟ್ಟಿ ಬೋಳ |

ಅದಾಗಲೇ ರಾಷ್ಟ್ರೀಯ ತಂಡದಲ್ಲಿ ಆಡಿ ಬಂದಿದ್ದ ರಾಜ್ಯದ ತಂಡದ ನಾಯಕನ ಜೊತೆ ಅವನು ಕಿರಿಕ್ ಮಾಡಿಕೊಂಡಿದ್ದ. ಇದರ ಪರಿಣಾಮ ಡ್ರೆಸ್ಸಿಂಗ್ ರೂಮ್ ತೊರೆದು ಬಂದಿದ್ದ ಆತನನ್ನು ಮಂಡಳಿ ಅಮಾನತು ಮಾಡಿತ್ತು. ‘ಆ ಹುಡುಗ ತುಂಬಾ ಗರ್ವಿ, ಎಲ್ಲರ ಜೊತೆ ಬೆರೆಯುವುದಿಲ್ಲ, ಇನ್ನೂ ರಾಷ್ಟ್ರೀಯ ತಂಡದ ಮುಖ ನೋಡದ ಈತನಿಗೆ ಈಗಲೇ ಅಹಂಕಾರ ಎಂದೆಲ್ಲಾ’ ಮಾತನಾಡಿದ್ದರು. ಆದರೆ ಆತ ಇದರಿಂದ ಎದೆಗುಂದದೆ ಸತತ ಪರಿಶ್ರಮ ಪಟ್ಟು ಇದೀಗ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಆತ ಬೇರಾರೂ ಅಲ್ಲ, ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಂದ್ಯಶ್ರೇಷ್ಟ ಪುರಸ್ಕಾರ ಪಡೆದ ಆಲ್ ರೌಂಡರ್ ದೀಪಕ್ ಹೂಡಾ.

Advertisement

1995ರಲ್ಲಿ ಹರ್ಯಾಣದಲ್ಲಿ ಹುಟ್ಟಿದ ದೀಪಕ್ ಜಗ್ಬೀರ್ ಹೂಡಾ ಆಡಿದ್ದು ಬರೋಡಾ ತಂಡಕ್ಕೆ. ತನ್ನ ಏಳನೇ ವಯಸ್ಸಿನಲ್ಲಿ ಕ್ರಿಕೆಟ್ ಆರಂಭಿಸಿದ ದೀಪಕ್ 2015-16ನೇ ಸೀಸನ್ ನಲ್ಲಿ ಬರೋಡಾ ತಂಡದ ಪರ ರಣಜಿ ಆಡಲು ಆರಂಭಿಸಿದರು. ತನ್ನ ಮೊದಲ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದರು. ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ ಆಡಿದ್ದ ದೀಪಕ್ ಒಟ್ಟಿನಲ್ಲಿ ಅತ್ತ ಆರಕ್ಕೇರದೆ, ಇತ್ತ ಮೂರಕ್ಕಿಳಿಯದೆ ಎಂಬಂತೆ ಇದ್ದರು.

ಅದು 2021ರ ಜನವರಿ. ದೀಪಕ್ ಹೂಡಾ ಜೀವನ ಬದಲಾಗುತ್ತಿತ್ತು. ದೀಪಕ್ ಜೀವನದ ಅತ್ಯಂತ ಕೆಟ್ಟ ಘಟ್ಟವದು. ಬರೋಡಾ ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಸಿದ್ದತೆ ನಡೆಸುತ್ತಿದ್ದಾಗ ನಾಯಕ ಕೃನಾಲ್ ಪಾಂಡ್ಯ ಜೊತೆಗೆ ಹೂಡಾ ಗಲಾಟೆ ನಡೆದಿತ್ತು. ನಿಜವಾಗಿಯೂ ಒಳಗೇನಾಗಿದೆ ಎಂದು ಹೊರ ಪ್ರಪಂಚಕ್ಕೆ ತಿಳಿದಿಲ್ಲ. ನಾಯಕನ ಜೊತೆಗಿನ ವೈಮನಸ್ಸಿನಿಂದ ದೀಪಕ್ ಹೂಡಾ ತಂಡದ ಬಯೋ ಬಬಲ್ ತೊರದು ಹೊರಬಂದರು. ಇದರಿಂದ ಕೆರಳಿದ ಬರೋಡಾ ಕ್ರಿಕೆಟ್ ಅಸೋಸಿಯೇಶನ್, ದೀಪಕ್ ಹೂಡಾ ಅವರನ್ನು ಸಂಪೂರ್ಣ ಆ ಸೀಸನ್ ನಿಂದ ಅಮಾನತು ಮಾಡಿತು.

ಅತ್ತ ಗೆಳೆಯರು, ಸಹ ಆಟಗಾರರು ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದರೆ, ಇತ್ತ ದೀಪಕ್ ಹೂಡಾ ತನ್ನ ಕೋಣೆಯಲ್ಲಿ ಒಬ್ಬಂಟಿಯಾಗಿ ಕುಳಿತಿರುತ್ತಿದ್ದ. ಮನೆಯವರೊಂದಿಗೆ ಹೂಡಾ ಮಾತುಕತೆ ಅಷ್ಟಕ್ಕಷ್ಟೇ ಎಂಬಂತ್ತಿತ್ತು. ತನ್ನ ಕ್ರಿಕೆಟ್ ಜೀವನ ಮುಗಿಯಿತು ಎಂದುಕೊಂಡಿದ್ದ. ಈ ಸಮಯದಲ್ಲಿ ನೆರವಾಗಿದ್ದು ಪಠಾಣ್ ಬ್ರದರ್ಸ್.

Advertisement

ಈ ಕಠಿಣ ಸಮಯದಲ್ಲಿ ನೆರವಿಗೆಂದು ಬಂದ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್, ಕೆಟ್ಟ ಯೋಚನೆಗಳಿಂದ ದೀಪಕ್ ಹೊರಬರುವಂತೆ ನೋಡಿಕೊಂಡರು. ಒಂದು ಸೀಸನ್ ನಿಂದ ಅಮಾನತಾದರೂ ಮುಂದಿನ ದಿನಗಳಲ್ಲಿ ಆಡುವಂತೆ ತರಬೇತಿ ನೀಡಿದರು. ವಡೋದರಾದ ಪೊಲೀಸ್ ಗ್ರೌಂಡ್ ಮತ್ತು ಮೋತಿಬಾಗ್ ಗ್ರೌಂಡ್ ನಲ್ಲಿ ದೀಪಕ್ ಗೆ ಇರ್ಫಾನ್ ಮತ್ತು ಯೂಸುಫ್ ತರಬೇತಿ ನೀಡಿದರು. ದೀಪಕ್ ಗೆ ವಿಶ್ವಾಸ ತುಂಬಲು ಅವರೇ ಬೌಲಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದು ಅಗತ್ಯ. ಕೇವಲ ಐಪಿಎಲ್ ಮಾತ್ರವಲ್ಲದೆ ಟೀಂ ಇಂಡಿಯಾದಲ್ಲಿ ಆಡುವಂತಾಗಬೇಕು, ಅದಕ್ಕಾಗಿ ಪ್ರಯತ್ನ ಪಡುತ್ತಿದ್ದೇವೆ ಎಂದು ಹೇಳಿದ್ದರು ಇರ್ಫಾನ್.

ಇದಾದ ಬಳಿಕ ನಡೆದ ಐಪಿಎಲ್ ಹರಾಜಿನಲ್ಲಿ ದೀಪಕ್ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗುತ್ತಾರೆ. ಅಲ್ಲಿ ಒಂದು ಮಟ್ಟದ ಪ್ರದರ್ಶನ ನೀಡುತ್ತಾರೆ. ಆದರೆ ಇದಾದ ಬಳಿಕ ಆರಂಭವಾದ ದೇಶಿ ಋತುವಿಗೆ ಸಂಬಂಧಿಸಿ ಹೂಡಾ ದೊಡ್ಡ ನಿರ್ಧಾರವನ್ನೇ ಮಾಡುತ್ತಾರೆ. ಅದು ತನ್ನ ರಾಜ್ಯ ತಂಡದ ಬದಲಾವಣೆ.

ಬರೋಡಾಕ್ಕಾಗಿ ಆಡುತ್ತಿದ್ದ ದೀಪಕ್, ನಾಯಕನ ಜತೆಗಿನ ಜಗಳದ ಕಾರಣದಿಂದ ಮುಂದಿನ ಸೀಸನ್ ಗೆ ಬರೋಡಾ ತಂಡವನ್ನೇ ತ್ಯಜಿಸುತ್ತಾರೆ. ರಾಜಸ್ಥಾನ ತಂಡದ ಪರ ದೀಪಕ್ ಕಣಕ್ಕಿಳಿಯುತ್ತಾರೆ. ಕೇವಲ ಆರು ಪಂದ್ಯಗಳಲ್ಲಿ ಹೂಡಾ 294 ರನ್ ಗಳಿಸಿ ಕೂಟದ ಎರಡನೇ ಅತೀ ಹೆಚ್ಚು ರನ್ ಸ್ಕೋರರ್ ಆಗುತ್ತಾರೆ. ಇದಾದ ಕೂಡಲೇ ರಾಜಸ್ಥಾನ ಕ್ರಿಕೆಟ್ ಮಂಡಳಿಯು ಮುಂದಿನ ವಿಜಯ್ ಹಜಾರೆ ಟ್ರೋಫಿಗೆ ದೀಪಕ್ ಹೂಡಾ ಅವರನ್ನು ತಂಡದ ನಾಯಕರನ್ನಾಗಿ ನೇಮಕ ಮಾಡುತ್ತದೆ. ಈ ಕೂಟದಲ್ಲೂ ದೀಪಕ್ ಆರು ಪಂದ್ಯಗಳಲ್ಲಿ 198 ರನ್ ಗಳಿಸುತ್ತಾರೆ.

ಇದರ ಫಲವಾಗಿ ದೀಪಕ್ ರಾಷ್ಟ್ರೀಯ ತಂಡದ ಕರೆ ಪಡೆಯುತ್ತಾರೆ. 2022ರ ಫೆಬ್ರವರಿಯಲ್ಲಿ ದೀಪಕ್ ಏಕದಿನ ಮತ್ತು ಟಿ20 ತಂಡಕ್ಕೆ ಪದಾರ್ಪಣೆ ಮಾಡುತ್ತಾರೆ.  ಕ್ರಿಕೆಟ್ ಜೀವನವೇ ಮುಗಿಯಿತೆಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ದೀಪಕ್ ಹೂಡಾ ಸತತ ಪ್ರಯತ್ನ, ಕಠಿಣ ಪರಿಶ್ರಮದ ಕಾರಣದಿಂದ ಇಂದು ನ್ಯಾಶನಲ್ ಸ್ಟಾರ್ ಆಗಿದ್ದಾರೆ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next