ಬೆಂಗಳೂರು: ದೀನ ದಯಾಳ್ ಉಪಾಧ್ಯಾಯ, ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಅವರ ಹೆಸರು ಇಟ್ಟಿರುವ ಕಡೆಯೆಲ್ಲಾ ಮಸಿ ಬೆಳೆಯುತ್ತೇವೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ಯಾಂ ಪ್ರಸಾದ ಮುಖರ್ಜಿ ಸೇರಿ ಇವರೆಲ್ಲಾ ದೇಶದ ಸ್ವಾತಂತ್ರ್ಯಕ್ಕೆ ವಿರೋಧ ಇದ್ದವರು. ಇವರೆಲ್ಲಾ ಬ್ರಿಟಿಷರ ಏಜೆಂಟ್. ಇಂದಿರಾಗಾಂಧಿ ರಾಜೀವ್ ಗಾಂಧಿ ದೇಶಕ್ಕೆ ತ್ಯಾಗ ಮಾಡಿದವರು. ಇವರ ಹೆಸರು ಬದಲಾವಣೆ ಮಾಡಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಕಿಡಿಕಾರಿದರು.
ಗಮನ ಬೇರೆಡೆ ಸೆಳೆಯಲು ಖೇಲ್ ರತ್ನ ಪ್ರಶಸ್ತಿಗೆ ರಾಜೀವ್ ಗಾಂಧಿ ಹೆಸರು ತೆಗೆದು ಧ್ಯಾನ್ ಚಂದ್ ಹೆಸರು ಇಟ್ಟಿದ್ದಾರೆ. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ 5 ಲಕ್ಷ ರೂ. ಪ್ರಶಸ್ತಿಯನ್ನು ಹಾಕಿ ಶ್ರೇಷ್ಠ ಆಟಗಾರಿಗೆ ಧ್ಯಾನ್ ಚಂದ್ ಹೆಸರಿನಲ್ಲಿ ಸ್ಥಾಪಿಸಿದ್ದರು. ಆದರೆ ಈಗ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರು ಬದಲಾಯಿಸಿ ಮೋದಿ ಹೆಸರು ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ಇನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿಗಿಲ್ಲ ಜಾಗ: ಸಿಎಂ ಬೊಮ್ಮಾಯಿ ಸೂಚನೆ
ಈಶ್ವರಪ್ಪಗೆ ಹುಚ್ಚು ಹಿಡಿದಿದೆ: ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ಹೊಸದಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಲು ಸಾಕಷ್ಟು ಕಸರತ್ತು ನಡೆಸಿದ್ದರು. ಈಶ್ವರಪ್ಪ ಗೆ ಹುಚ್ಚು ಹಿಡಿದಿದೆ, ಅವರನ್ನು ನಿಮ್ಹಾನ್ಸ್ ಗೆ ಸೇರಿಸಲು ಆರೋಗ್ಯ ಸಚಿವ ಸುಧಾಕರ್ ಗೆ ಒತ್ತಾಯಿಸುತ್ತೇನೆ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು.
ಈಶ್ವರಪ್ಪ ಮಾತು ಬಿಜೆಪಿ ಸಂಸ್ಕೃತಿಗೆ ಸಾಕ್ಷಿ. ಬಿಜೆಪಿಗೆ ನಾಚಿಗೇಡು ಮತ್ತು ಕಳಂಕ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.