ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಭಾರತದ ತಂಡದ ಮುಖ್ಯಕೋಚ್ ಆಗಿ ಈಗಾಗಲೇ ಮೊದಲ ಟರ್ಮ್ ಮುಗಿಸಿದ್ದಾರೆ. ಮೊದಲ ಅವಧಿಯಲ್ಲಿ ಟೆಸ್ಟ್ ಚಾಂಪಿಯನ್ ಶಿಪ್ ಮತ್ತು ಏಕದಿನ ವಿಶ್ವಕಪ್ ನಲ್ಲಿ ತಂಡವನ್ನು ಫೈನಲ್ ತಲುಪಿಸಿದ್ದು ರಾಹುಲ್ ಹೆಗ್ಗಳಿಕೆ.
ಏಕದಿನ ವಿಶ್ವಕಪ್ ರಾಹುಲ್ ದ್ರಾವಿಡ್ ಅವರ ಕೊನೆಯ ಟೂರ್ನಿಯಾಗಿತ್ತು. ಆದರೆ ಬಳಿಕ ನಡೆದ ಸಭೆಯಲ್ಲಿ ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ಮುಂದುವರಿಸಲು ಬಿಸಿಸಿಐ ತೀರ್ಮಾನಿಸಿತ್ತು.
“ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ನಂತರ ಅವರ ಒಪ್ಪಂದದ ಅವಧಿ ಮುಗಿದ ನಂತರ ಬಿಸಿಸಿಐ ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚೆಯಲ್ಲಿ ತೊಡಗಿದೆ ಮತ್ತು ಅಧಿಕಾರಾವಧಿಯನ್ನು ಮುಂದುವರಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ ”ಎಂದು ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ ದ್ರಾವಿಡ್ ಎರಡನೇ ಅವಧಿ ಎಷ್ಟರವರೆಗೆ ಎಂದು ತಿಳಿಸಲಾಗಿಲ್ಲ. ಒಂದು ಮಾಹಿತಿಯ ಪ್ರಕಾರ ಟಿ20 ವಿಶ್ವಕಪ್ ವರೆಗೆ ದ್ರಾವಿಡ್ ಕೋಚಿಂಗ್ ಮುಂದುವರಿಯಲಿದೆ.
ಇದನ್ನೂ ಓದಿ:T. N. Seetharam: ಆ ಪಾತ್ರ ನನ್ನನ್ನು ಸಿನಿಮಾ ಜಗತ್ತಿಗೆ ಕರೆದೊಯ್ಯಿತು
ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಬಗ್ಗೆ ಮಾತನಾಡಿದ್ದಾರೆ. “ಭಾರತ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅಧಿಕಾರಧಿಯನ್ನು ದಕ್ಷಿಣ ಆಫ್ರಿಕಾದಿಂದ ತಂಡವು ಹಿಂದಿರುಗಿದ ನಂತರ ನಿರ್ಧರಿಸಲಾಗುವುದು” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
“ನಾವು ವಿಸ್ತರಣೆಯನ್ನು ನೀಡಿದ್ದೇವೆ ಆದರೆ ನಾವು ಇನ್ನೂ ಒಪ್ಪಂದವನ್ನು ಅಂತಿಮಗೊಳಿಸಿಲ್ಲ. ವಿಶ್ವಕಪ್ ಮುಗಿದ ಬಳಿಕ ನಾನು ಅವರೊಂದಿಗೆ (ದ್ರಾವಿಡ್ ಮತ್ತು ಕಂ.) ಸಭೆ ನಡೆಸಿದ್ದೆವು. ಮುಂದುವಿಕೆಗೆ ನಾವು ಪರಸ್ಪರ ಒಪ್ಪಿಕೊಂಡಿದ್ದೇವೆ. ಅವರು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ನಾವು ಕುಳಿತು ನಿರ್ಧರಿಸುತ್ತೇವೆ,” ಎಂದು ಶಾ ಹೇಳಿದರು.