ಬೆಂಗಳೂರು: ಕೋವಿಡ್ 19ನಿಂದ ಆನ್‌ಲೈನ್ ತರಗತಿ ಸಹಿತವಾಗಿ ಆನ್‌ಲೈನ್ ವ್ಯವಹಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆನ್‌ಲೈನ್ ಮೂಲಕವೇ ಉದ್ಯೋಗ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಸಿದೆ. ಎಲ್ಲ ಕಾಲೇಜುಗಳಲ್ಲೂ ಪ್ಲೇಸ್‌ಮೆಂಟ್ ಸೆಲ್( ಉದ್ಯೋಗ ಮಾಹಿತಿ ಕೋಶ) ಇದೆ. ಆದರೆ, ಲಾಕ್‌ಡೌನ್ ಪರಿಣಾಮ ಕಳೆದ ಎರಡು ತಿಂಗಳಿಂದ ಈ ಕೋಶ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಹೀಗಾಗಿ ಈ ಕೋಶದ ಮೂಲಕ ವಿದ್ಯಾರ್ಥಿಗಳಿಗೆ ಸಿಗಬೇಕಾದ ಮಾಹಿತಿಯನ್ನು ಆನ್‌ಲೈನ್ ಮೂಲಕ ಒದಗಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದ್ದು, ಎನ್‌ಐಸಿ ಸಹಯೋಗದಲ್ಲಿ ವೆಬ್‌ಸೈಟ್ ಉನ್ನತೀಕರಿಸುವ ಕಾರ್ಯವೂ ಆರಂಭಿಸಿದೆ. ಯುವ ಸಬಲೀಕರಣ ಘಟಕ ಮತ್ತು ಉದ್ಯೋಗ ಮಾಹಿತಿ ಕೋಶ ಜತೆಯಾಗಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಉದ್ಯೋಗ ಮೇಳ ಸಂಘಟಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ಮಾಹಿತಿ ನೀಡಿದರು.
ಉದ್ಯೋಗ ನೀಡುವ ಸಂಸ್ಥೆ ಮತ್ತು ವಿದ್ಯಾರ್ಥಿ ನಡುವೆ ನೇರ ಮುಖಾಮುಖೀ ಸಂದರ್ಶನದ ವೇಳೆ ಮಾತ್ರ ಇರುತ್ತದೆ. ಇದಕ್ಕಿಂತ ಪೂರ್ವದ ಎಲ್ಲ ಹಂತಗಳು ಆನ್‌ಲೈನ್ ಮೂಲಕವೇ ನಡೆಯಲಿದೆ. ಸಂದರ್ಶನ ಕೂಡ ಆನ್‌ಲೈನ್ ಮೂಲಕ ನಡೆಸುವ ಬಗ್ಗೆಯೂ ಚರ್ಚೆಗಳು ಆರಂಭವಾಗಿದೆ. ಆದರೆ, ಸದ್ಯಕ್ಕೆ ಮಾಹಿತಿ ವಿನಿಮಯ ಪ್ರಕ್ರಿಯೆ ಮಾತ್ರ ಆನ್‌ಲೈನ್ ನಲ್ಲಿ ಇರಲಿದೆ ಎಂದು ವಿವರಿಸಿದರು.
ಆನ್‌ಲೈನ್ ಉದ್ಯೋಗ ಮೇಳ ಹೇಗೆ?: ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಕೊಂಡಿಯೊಂದನ್ನು(ಲಿಂಕ್) ಉನ್ನತೀಕರಿಸಲಾಗುತ್ತಿದೆ. ಈ ಕೊಂಡಿಯ ಮೂಲಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯಾಧಾರಿತ ಸ್ವವಿವರ ಅಪ್ಲೋಡ್ ಮಾಡಲಿದ್ದಾರೆ. ಸಂಬಂಧಪಟ್ಟ ಸಂಸ್ಥೆಯ ಪ್ರತಿನಿಧಿಗಳು ವಿದ್ಯಾರ್ಥಿಯ ಸ್ವ ವಿವರ ಪರಿಶೀಲಿಸಿ, ತಮ್ಮಲ್ಲಿರುವ ಉದ್ಯೋಗಾವಕಾಶದ ಲಭ್ಯತೆಯ ಆಧಾರದಲ್ಲಿ ಪಟ್ಟಿ ಅಂತಿಮಗೊಳಿಸಿ, ಕಾಲೇಜು ಶಿಕ್ಷಣ ಇಲಾಖೆಯ ಉದ್ಯೋಗ ಮಾಹಿತಿ ಕೋಶಕ್ಕೆ ನೀಡಲಿವೆ.
ಅಲ್ಲಿಂದ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ಒದಗಿಸಿ, ಯಾವಾಗ ಸಂದರ್ಶನಕ್ಕೆ ಬರಬೇಕು ಎಂಬಿತ್ಯಾದಿ ವಿವರ ತಿಳಿಸಲಿದ್ದಾರೆ. ವಿದ್ಯಾರ್ಥಿಗಳು ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಿದರೆ ಸಾಕಾಗುತ್ತದೆ. ಅಲ್ಲಿಯೇ ಉದ್ಯೋಗಕ್ಕೆ ಸೇರುವ ಆದೇಶ ಪ್ರತಿಯನ್ನು ಸಂಸ್ಥೆಯಿಂದ ನೀಡಲಾಗುತ್ತದೆ ಎಂದು ಉದ್ಯೋಗ ಕೋಶದ ಅಧಿಕಾರಿ ಮಾಹಿತಿ ನೀಡಿದರು.
ಉದ್ಯೋಗದ ಮಾಹಿತಿ ಆನ್‌ಲೈನ್ ಮೂಲಕ ನೀಡುವ ಮತ್ತು ಆನ್‌ಲೈನ್ ಉದ್ಯೋಗ ಮೇಳಕ್ಕೆ ಅನುಕೂಲ ಆಗುವಂತೆ ಎನ್‌ಐಸಿ ಜತೆ ಸೇರಿ ಸಾಫ್ಟ್ವೇರ್ ಅಪ್‌ಡೇಟ್ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಶೀಘ್ರ ಈ ವ್ಯವಸ್ಥೆ ಸಿಗುವಂತೆ ಮಾಡುತ್ತೇವೆ.
-ಪ್ರೊ.ಎಸ್.ಮಲ್ಲೇಶ್ವರಪ್ಪ, ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ
* ರಾಜು ಖಾರ್ವಿ ಕೊಡೇರಿ